ಬಂಟ್ವಾಳ: ಮಂಗಳೂರು  ಮಹಾನಗರ ಪಾಲಿಕೆ ವ್ಯಾಪ್ತಿಯ  ಜನತೆಗೆ  ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಸರಕಾರ, ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ. ಕುಡಿಯುವ ನೀರಿನ ವಿಚಾರದಲ್ಲಿ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಭಾನುವಾರ ತುಂಬೆ ವೆಂಟೆಡ್ ಡ್ಯಾಂಗೆ ಅಧಿಕಾರಿಗಳ ತಂಡದೊಂದಿಗೆ  ಭೇಟಿ ನೀಡಿ ಡ್ಯಾಂನಲ್ಲಿ ಸಂಗ್ರಹವಾಗಿರುವ ನೀರಿನ ಲಭ್ಯತೆಯ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತುಂಬೆ ಡ್ಯಾಂನಲ್ಲಿ ಪ್ರಸ್ತುತ 4.9 ಮೀ. ನೀರು ಶೇಖರಣೆ ಇದೆ. ಮೇ 28ರ ವರೆಗೆ ವಾರದಲ್ಲಿ 5 ದಿವಸ ಮಂಗಳೂರಿಗೆ ನೀರು ಪೂರೈಕೆ ಮಾಡಬಹುದಾಗಿದ್ದು, ಈ ಅವಧಿಯ ಮಧ್ಯೆ  ಮಳೆ ಸುರಿದರೆ ಜೂನ್ 15ವರೆಗೆ  ಯಾವುದೇ ಸಮಸ್ಯೆ ಇಲ್ಲದೆ ಕುಡಿಯುವ ನೀರನ್ನು ಪೂರೈಸಬಹುದು  ಎಂದರು.
 ಸದ್ಯಕ್ಕೆ ನೀರು ಪೂರೈಕೆಗೆ ಯಾವುದೇ ರೇಶನಿಂಗ್ ಇಲ್ಲ. ಡ್ಯಾಂ ನಲ್ಲಿ ನೀರಿನ ಮಟ್ಟ ಕುಸಿತವಾಗಿ ಭವಿಷ್ಯದಲ್ಲಿ ಕುಡಿಯುವ ನೀರಿಗೆ ತೊಂದರೆಯಾದರೆ ಮಾತ್ರ ರೇಶನಿಂಗ್ ಮೂಲಕ ನೀರು ಪೂರೈಕೆಗೆ ಚಿಂತನೆ ನಡೆಸಲಾಗುವುದು, ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರು ಶೇಖರಣೆಯಾದರೆ ಅಲ್ಲಿಂದ ತುಂಬೆ ಡ್ಯಾಂಗೆ ನೀರನ್ನು ಸರಬರಾಜು ಮಾಡಲಾಗುವುದು.ಜನರು ಕೂಡ ನೀರನ್ನು ಮಿತವಾಗಿ ಬಳಸಿ ಸಹಕಾರ ನೀಡಬೇಕು ಎಂದರು.  ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಟ್ಟ ತೆರೆದಬಾವಿ ಹಾಗೂ ಬೋರ್‌ವೆಲ್‌ಗಳನ್ನು ಶುದ್ಧೀಕರಣಗೊಳಿಸಿ ಜನರಿಗೆ  ಪ್ರಯೋಜನವಾಗುವಂತೆ ಕ್ರಮ ಕೈಗೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಜನರಿಗೆ   ತೊಂದರೆಯಾಗದಂತೆ ಜಿಲ್ಲಾಡಳಿತ,ಸರಕಾರ ತೀರ್ಮಾನವನ್ನು ತೆಗೆದುಕೊಳ್ಳಲಿದ್ದು,ಜನರು ಮಳೆಗಾಗಿ ದೇವರಲ್ಲಿ ಪ್ರಾರ್ಥಿಸುವಂತೆ ಸಚಿವ ಯು.ಟಿ.ಖಾದರ್ ಮನವಿ ಮಾಡಿದರು‌.
  ಮಹಾನಗರ ಪಾಲಿಕೆ ವ್ಯಾಪ್ತಿಯ ಜನರಿಗೆ  ಕಳೆದ  ವರ್ಷದ ಆಡಳಿತಾವಧಿಯಲ್ಲಿ ತೆಗೆದುಕೊಂಡಿರುವ ಕ್ರಮದ ಫಲವಾಗಿ ಈಗ ಮಂಗಳೂರಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ ಎಂದ ಸಚಿವರು, ಬೆಳೆಯುತ್ತಿರುವ ಮಂಗಳೂರಿನ ಭವಿಷ್ಯದ ದೃಷ್ಟಿಯಿಂದ ತುಂಬೆ ಡ್ಯಾಂನಲ್ಲಿ ಮಂದೆ 7 ಮೀ.ಗೆ.ನೀರು ಶೇಖರಣೆಗೆ ಕ್ರಮ ಕೈಗೊಳ್ಳಲಾಗುವುದು ಈ ನಿಟ್ಟಿನಲ್ಲಿ ಪರಿಸರದ ರೈತರನ್ನು ವಿಶ್ವಾಸಕ್ಕೆ  ತೆಗೆದುಕೊಂಡು ಅವರೊಂದಿಗೂ ಚರ್ಚಿಸಲಾಗುವುದು ಎಂದರು.  174 ಕೋ.ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಾಜ್ಯಕ್ಕೆ ಮಾದರಿಯಾಗಲಿರುವ ಹರೇಕಳ-ಅಡ್ಯಾರ್ ಡ್ಯಾಂ ಯೋಜನೆಯ ಆಡಳಿತಾತ್ಮಕ ಮಂಜೂರಾತಿಯ  ಹಂತದಲ್ಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ,  ಸಂಸದೀಯ ಕಾರ್ಯದರ್ಶಿ  ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ ಮಾಜಿ ಮೇಯರ್ ಗಳಾದ ಭಾಸ್ಕರ್.ಕೆ, ಶಶಿಧರ್ ಹೆಗ್ಡೆ, ಮಾಜಿ ಸದಸ್ಯರಾದ ನವೀನ್ ಡಿಸೋಜ, ಕಿಶೋರ್ ಹಾಗೂ ಮಹಾನಗರ ಪಾಲಿಕೆಯ ಅದಿಕಾರಿ ಗಳು ಮತ್ತು ಇಂಜಿನಿಯರ್‌ಗಳು ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here