ಪುಂಜಾಲಕಟ್ಟೆ: ಧಾರ್ಮಿಕ ಕ್ಷೇತ್ರದಲ್ಲಿ ಶರಭೇಶ್ವರನ ಸನ್ನಿಧಿಗಳು ಅಪರೂಪವಾಗಿದ್ದು, ಅದರ ಜೀರ್ಣೋದ್ಧಾರ ಕಾರ್ಯದ ಸಂಕಲ್ಪದ ಸಂದರ್ಭ ರುಧ್ರಪಾರಾಯಣಕ್ಕೆ ಮಹತ್ವ ನೀಡಿದಾಗ ಸಂಪತ್ತು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ ಎಂದು ಬೆಂಗಳೂರಿನ ಶ್ರೀ ಶಂಕರನಾರಾಯಣ ದ್ವಾರಕನಾಥ ಗುರೂಜಿ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಿನ್ನೆಲೆಯಲ್ಲಿ ಅನುಜ್ಞಾ ಕಲಶ ಬಾಲಾಲಯ ಪ್ರತಿಷ್ಠೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ದೇವರ ಕಾರ್ಯದಲ್ಲಿ ನಾವು ನಮ್ಮೊಳಗಿನ ಅಸೂಯೆಗಳನ್ನು ಬಿಟ್ಟು ಜತೆಯಾಗಿ ದುಡಿದಾಗ ನಮ್ಮ ನಿರ್ಧರಿತ ಕಾರ್ಯ ಶೀಘ್ರದಲ್ಲಿ ನೆರವೇರುವ ಜತೆಗೆ ಪುಣ್ಯವೂ ಪ್ರಾಪ್ತವಾಗುತ್ತದೆ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಯಾವುದೇ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯದ ಆರಂಭದಲ್ಲಿ ಜನರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಈ ಕುರಿತು ಚಿಂತಿಸದೆ ಮುನ್ನಡೆದಾಗ ದೇವರ ಅನುಗ್ರಹದಿಂದ ಭಕ್ತರು ಹೆಚ್ಚುತ್ತಾರೆ ಎಂದರು.
ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಧಾರ್ಮಿಕವಾಗಿ ವಿಶೇಷ ಶಕ್ತಿಯನ್ನು ಹೊಂದಿರುವ ಸರಪಾಡಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ಸಾಂಗವಾಗಿ ನೆರವೇರಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್, ಮುಂಬಯಿನ ಉದ್ಯಮಿ ಕುಸುಮಾಧರ ಡಿ.ಶೆಟ್ಟಿ ಚೆಲ್ಲಡ್ಕ, ವಾಸ್ತುಶಿಲ್ಪಿ ಮಹೇಶ್ ಭಟ್ ಮುನಿಯಂಗಳ, ವೈದ್ಯರಾದ ಡಾ.ಸತ್ಯಶಂಕರ್ ಶೆಟ್ಟಿ ಬಿ.ಸಿ.ರೋಡು, ಡಾ.ಶಿವಪ್ರಸಾದ್ ಶೆಟ್ಟಿ ಬಿ.ಸಿ.ರೋಡು, ಡಾ.ರಾಜರಾಮ್ ಕೆ.ಬಿ.ಉಪ್ಪಿನಂಗಡಿ, ಡಾ.ಭರತ್ ಶೆಟ್ಟಿ, ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕಿ ಉಷಾಲತಾ ಸರಪಾಡಿ, ಉದ್ಯಮಿ ಕರ್ನೂರು ಮೋಹನ್ ರೈ, ಗೃಹ ರಕ್ಷಕ ದಳದ ಜಿಲ್ಲಾ ಅಧೀಕ್ಷಕ ಡಾ.ಮುರಳಿಮೋಹನ್ ಚೂಂತಾರು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ.ಎಸ್. ಶೆಟ್ಟಿ ಸರಪಾಡಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಪ್ರಸ್ತಾವನೆಗೈದರು. ಕಾರ್ಯದರ್ಶಿಗಳಾದ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ಧನಂಜಯ ಶೆಟ್ಟಿ ನಾಡಬೆಟ್ಟು ವಂದಿಸಿದರು. ಕಿರಣ್ ಸರಪಾಡಿ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ ಬಿ.ಸಿ.ರೋಡು ಭಾಗವಹಿಸಿದ್ದರು. ವರ್ಕಾಡಿ ದಿನೇಶ್ ಕೃಷ್ಣ ತಂತ್ರಿಗಳ ನೇತ್ರತ್ವದಲ್ಲಿ ಪರಿವಾರ ದೇವರುಗಳ ಪ್ರತಿಷ್ಠೆ, ಶ್ರೀ ದೇವರ ಪ್ರತಿಷ್ಟಾಪನೆ, ಜೀವ ಕಲಶಾಭಿಷೇಕ, ಪಂಚಾಮೃತಾಭಿಷೇಕ, ಚೈತನ್ಯ ಕಲಶಾಭಿಷೇಕ ನಡೆಯಿತು.