ವಿಟ್ಲ: ಮೈತ್ರೇಯೀ ಗುರುಕುಲದಲ್ಲಿ ಅರ್ಧಮಂಡಲೋತ್ಸವದ ಅಂಗವಾಗಿ ಬ್ರಾಹ್ಮಶಕ್ತಿ ಸಭೆ ನಡೆಯಿತು. ಪ್ರಾತಃಕಾಲದ ಶ್ರೀ ವಿದ್ಯಾ ಗಣಪತಿ ಹವನದ ಮೂಲಕ ಈ ಸಭೆಯು ಆರಂಭಗೊಂಡಿತು.
ವೇದ, ವೇದಾಂತ, ಯೋಗ, ನ್ಯಾಯ, ವ್ಯಾಕರಣ, ಪೂರ್ವಮೀಮಾಂಸಾ ಇತ್ಯಾದಿ ಶಾಸ್ತ್ರಗಳಲ್ಲಿ ತಳಸ್ಪರ್ಶಿ ಜ್ಞಾನ ಪಡೆದ ೫೫ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ವಾಂಸರು ಉಪಸ್ಥಿತರಿದ್ದರು.
ಸಮಾರಂಭವನ್ನು ವಿದುಷಿ ಉಷಾ ಚಡಗ, ಉಡುಪಿ ಉದ್ಘಾಟಿಸಿ ಹೆಣ್ಣುಮಕ್ಕಳೂ ಕೂಡ ವೇದಾದಿ ಶಾಸ್ತ್ರಗಳ ಅಧ್ಯಯನವನ್ನು ಮಾಡುತ್ತಾ ಸಮಾಜವನ್ನು ಮುನ್ನಡೆಸುವವರಾಗಬೇಕು ಎಂದರು.
ಬಳಿಕ ಪ್ರೊ.ರಾಮಚಂದ್ರ ಭಟ್ ಕೋಟೆಮನೆ ಇವರ ಅಧ್ಯಕ್ಷತೆಯಲ್ಲಿ ನಡೆದಂತಹ ಶಾಸ್ತ್ರಾರ್ಥಸಭೆಯಲ್ಲಿ ಸಾಯಿರಶ್ಮಿ ಬ್ರಹ್ಮಸೂತ್ರದ ಸ್ಮೃತ್ಯಧಿಕರಣವನ್ನು, ಪೂರ್ಣಿಮಾ ವ್ಯಾಕರಣದ ’ಅರ್ಥವದಧಾತುರಪ್ರತ್ಯಯಃ ಪ್ರಾತಿಪದಿಕಮ್’ ಎಂಬ ಸೂತ್ರದಲ್ಲಿ ಪ್ರತ್ಯಯಾಂತ ಪರ್ಯುದಾಸದ ಅಗತ್ಯತೆ ಎಂಬ ವಿಚಾರವನ್ನು ಪ್ರೌಢಮನೋರಮಾ ಗ್ರಂಥದ ಪ್ರಕಾರ ನಿರೂಪಿಸಿದರು.
ವಿದ್ವಾನ್ ಗಣೇಶ ಈಶ್ವರ ಭಟ್ ಇವರು ವೇದಾಂತದ ಹಾಗೂ ವಿದುಷಿ ವಿಜಯಲಕ್ಷ್ಮೀ ಇವರು ವ್ಯಾಕರಣದ ಸ್ಥೂಲ ಪರಿಚಯವನ್ನು ಮಾಡಿಕೊಟ್ಟರು. ವಿದ್ಯಾರ್ಥಿನಿಯರ ವಿಷಯ ಮಂಡನೆಯ ನಂತರ ಸೇರಿದಂತಹ ವಿದ್ವಜ್ಜನರು ಸಂವಾದದ ಮೂಲಕ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದರು.
ಭೋಜನ ವಿರಾಮದ ನಂತರ ’ರಾಷ್ಟ್ರನಿರ್‍ಮಾಣದಲ್ಲಿ ಶಾಸ್ತ್ರವಿದ್ವಾಂಸರ ಪಾತ್ರ’ ಎಂಬ ಸಂವಾದ ಗೋಷ್ಠಿಯು ಟಿ. ಎನ್. ಪ್ರಭಾಕರ ಅವರ ನೇತೃತ್ವದಲ್ಲಿ ನಡೆಯಿತು. ’ದೋಷಜ್ಞರೆಂದು ಕರೆಸಿಕೊಳ್ಳುವ ವಿದ್ವಜ್ಜನರು ಎಲ್ಲರಿಗೂ ಜ್ಞಾನವನ್ನು ಧಾರೆಯೆರೆಯುತ್ತಾ ಸಮಾಜದ ಕುಂದು ಕೊರತೆಗಳನ್ನು ನೀಗಿಸಬೇಕು. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ, ಸೌಶೀಲ್ಯ, ಸೌಕರ್ಯ, ಸೌವಿಧ್ಯ, ಸೌಮನಸ್ಯ ಮತ್ತು ಸೌಜನ್ಯದ ವಾತಾವರಣವನ್ನು ನಿರ್‍ಮಿಸಬೇಕು ಎಂದರು.
ಸಮಾರೋಪ ಸಂದರ್ಭದಲ್ಲಿ ವಿದ್ವಾನ್ ವೀರನಾರಾಯಣ ಪಾಂಡುರಂಗಿಯವರು ಸಮಾಜದ ಅಂಗವಾದಂತಹ ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗ ವಿಭಾಗಗಳು ವಿದ್ವಜ್ಜನರ ನೇತೃತ್ವದಲ್ಲಿ ನಡೆಯತಕ್ಕವು. ಪಾರಂಪರಿಕ ಶಿಕ್ಷಣವನ್ನು ಪಡೆಯುತ್ತಾ, ಹಂಚುತ್ತಾ ಸಮಾಜವನ್ನು ನಾವೆಲ್ಲರೂ ಮುನ್ನಡೆಸಬೇಕು. ಹಾಗೆಯೇ ತಂತ್ರಜ್ಞಾನದ ಮೂಲಕ ಅಥವಾ ಗುರುಕುಲದಲ್ಲಿಯೇ ವಾಸವಿದ್ದು ಅಥವಾ ತಮ್ಮ ವಾಸಸ್ಥಳಕ್ಕೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಶಾಸ್ತ್ರಜ್ಞಾನವನ್ನು ಅವರಿಗೆ ಧಾರೆಯೆರೆಯಬೇಕು ಎಂದು ನಿವೇದಿಸಿಕೊಂಡರು.
ಶಾಂತಿ ಪಠನದೊಂದಿಗೆ ಕಾರ್‍ಯಕ್ರಮ ಸಮಾಪ್ತಿಗೊಂಡಿತು.


