Wednesday, October 25, 2023

ಬಂಟ್ವಾಳ ಪುರವಾಸಿಗಳಿಗೆ ಕಸ ಶುಲ್ಕದಬರೆ !

Must read

ಬಂಟ್ವಾಳ : ಬಂಟ್ವಾಳ ಪುರಸಭೆ ಇದೇ ಮೊದಲಿಗೆ ಪ್ರಸ್ತುತ ವರ್ಷದಿಂದ ಅಂದರೆ 2019-2020 ಸಾಲಿನಿಂದಲೇ ಆಸ್ತಿ ತೆರಿಗೆಯ ಜೊತೆಯಲ್ಲೇ ಕಸ ಸಂಗ್ರಹದ ಶುಲ್ಕವನ್ನು ವಸೂಲಿ ಮಾಡಿ ಪುರವಾಸಿಗಳ ಮೇಲೆ ಬರೆ ಎಳೆದಿದೆ. ಸರಕಾರದ ಆದೇಶದನ್ವಯ ಎ.1 ರಿಂದಲೇ ಈವ್ಯವಸ್ಥೆಯನ್ನು ಜಾರಿಗೆ ತಂದಿರುವುದಾಗಿ ಸಮಜಾಯಿಷಿ ನೀಡುವ ಪುರಸಭೆ ಆಸ್ತಿ ತೆರಿಗೆಯೊಂದಿಗೆ ಕಸ ಶುಲ್ಕದ ಹೊರೆಯನ್ನು ಪುರವಾಸಿಗಳ ಮೇಲೆ ಏಕಾಏಕಿ ಹೇರಿಪುರವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಚು ನಾಯಿತ ಪ್ರತಿನಿಧಿ ಆಡಳಿತವಿಲ್ಲ: ಪುರಸಭೆಯಲ್ಲಿ ಸದ್ಯ ಚುನಾಯಿತ ಪ್ರತಿನಿಧಿಗಳ ಆಡಳಿತ ಇಲ್ಲದಿದ್ದು,ಚುನಾವಣಾ ನೀತಿ ಸಂಹಿತೆ ಬೇರೆ ಜಾರಿಯಲ್ಲಿದೆ.ವಿಶೇಷವೆಂದರೆ ಪುರಸಭೆಯ ಕಸ ವಿಲೇವಾರಿಯ ವಾಹನಗಳೇ ಕೆಲ ವಾಡ್೯ ಗಳಿಗೆ ಸುಳಿಯುತ್ತಿಲ್ಲ,ಅಸಮರ್ಪಕ ಘನ ತ್ಯಾಜ್ಯ ವಿಲೇವಾರಿಯ ಕುರಿತಂತೆ ಸಾಕಷ್ಟು ಚರ್ಚೆಗಳಾದರೂ ಇದಕ್ಕೊಂದು ಸೂಕ್ತ ವ್ಯವಸ್ಥೆ,ಪರಿಹಾರ ಕಂಡುಕೊಳ್ಳಲು ಪುರಸಭೆಗೆ ಈವರೆಗೂ ಸಾಧ್ಯವಾಗಿಲ್ಲ ,ಹಾಗೆಯೇ ಘನತ್ಯಾಜ್ಯವಿಲೇವಾರಿ ಘಟಕವು ಇಲ್ಲದಿರುವ ಈ ಹಂತದಲ್ಲಿ ಏಕಾಏಕಿ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುತ್ತಿರುವ ಪುರಸಭೆಯ ಕಾರ್ಯವೈಖರಿಗೆ ಪುರವಾಸಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪುರವಾಸಿಗಳು ಪುರಸಭಾ ಕಚೇರಿಯಲ್ಲಿ ಸ್ವಯಂಪ್ರೇರಿತವಾಗಿ ಆಸ್ತಿ ತೆರಿಗೆ ಪಾವತಿಸಲು ಹೋದಾಗ ಕಸ ಸಂಗ್ರಹದ ಶುಲ್ಕವನ್ನು ವಸೂಲಿ ಮಾಡುತ್ತಿರುವ ವಿಚಾರ ಬಯಲಿಗೆ ಬಂದು ಪುರವಾಸಿಗಳು ಅಧಿಕಾರಿಗಳಲ್ಲಿ ತೀವ್ರ ಅಸಮಾಧಾನ,ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗವು ನಡೆದಿದೆ,ಇದು ಸರಕಾರದ ಆದೇಶವಾಗಿದ್ದು, ಆದನ್ನಷ್ಠೇ ಜಾರಿಗಿಳಿಸಲಾಗಿದೆ ಎಂದು ಪುರಸಭಾಧಿಕಾರಿಗಳು ಸಮಜಾಯಿಷಿ ನೀಡಿ ಸಾಗ ಹಾಕಿದ್ದಾರೆ.

ಆಗದ ನಿರ್ಣಯ : ಆಸ್ತಿ ತೆರಿಗೆಯೊಂದಿಗೆ ಕಸ ಸಂಗ್ರಹದ ಶುಲ್ಕವನ್ನು ವಸೂಲಿ ಕುರಿತು ಈ ಹಿಂದೆ ಚುನಾಯಿತ ಪ್ರತಿನಿಧಿಗಳ ಆಡಳಿತವಿದ್ದ ಕಾಲದಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಕಸ ಸಂಗ್ರಹಕ್ಕೆ ವಾಹನಗಳ ಸಂಚರಿಸಲಾಗದ ವಾಡ್೯ ಗಳ ಹೊರತು ಪಡಿಸಿ ಉಳಿದೆಡೆ ಈ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸಾಮಾನ್ಯಸಭೆಯಲ್ಲಿ ಚರ್ಚೆ ಯಾಗಿತ್ತು.ಆದರೆ ಸಭೆಯಲ್ಲಿ ಸಹಮತ ವ್ಯಕ್ತವಾಗದಿದ್ದರಿಂದ ಪ್ರಸ್ತಾಪ ಠುಸ್ಸಾಗಿತ್ತು. ಈ ಕುರಿತಾಗಿ ಪುರಸಭೆಯ ಚುನಾಯಿತ ಪ್ರತಿನಿಧಿಗಳ ಆಡಳಿತ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.ಪುರಸಭೆಯಲ್ಲಿ ಸದ್ಯ ಆಧಿಕಾರಿಗಳದ್ದೆ ಕಾರುಬಾರಾಗಿರುವುದರಿಂದ ಸರಕಾರದ ಸುತ್ತೋಲೆಯನ್ನು ಮುಂದಿರಿಸಿಕೊಂಡು ಕಸ ಸಂಗ್ರಹದ ಶುಲ್ಕವನ್ನು ಆಸ್ತಿ ತೆರಿಗೆ ಜೊತೆಯಲ್ಲಿಯೇ ಸಂಗ್ರಹಿಸಿ ಪುರವಾಸಿಗಳಿಗೆ ಮತ್ತೊಂದು ಬರೆ ಎಳೆದಿದೆ. ಎಷ್ಟೇಷ್ಟು ಶುಲ್ಕ: 538 ಚ.ಅ.ಇರುವ ಮನೆಗಳಿಗೆ ಮಾಸಿಕ 30 ರೂ.,538 ಚ.ಅ.ರಿಂದ3228 ಚ.ಅ.ವರೆಗೆ ಮಾಸಿಕ 60ರೂ.,3228ಗಿಂತ ಹೆಚ್ಚು ವಿಸ್ತೀರ್ಣವಿದ್ದರೆ ಮಾಸಿಕ 120 ರೂ.ವಾಣಿಜ್ಯ ಕಟ್ಟಡ,ಅಂಗಡಿ,ಉಪಹಾರ ಕೇಂದ್ರ2152 ಚ.ಅ.ವಿಸ್ತೀರ್ಣ ಕ್ಕಿಂತ ಇದ್ದರೆ 300 ರೂ.ಹೀಗೆ ಮುಂದುವರಿದು ದರ ಪಟ್ಟಿ ನಿಗದಿಪಡಿಸಲಾಗಿದೆ. ಕಂಚಿನಡ್ಕಪದವು ನೆನೆಗುದಿಗೆ…ದೂರದ ಸಜೀಪನಡುಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಪುರಸಭೆಯ ವತಿಯಿಂದ ನಿರ್ಮಾಣಹಂತದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಸ್ಥಳೀಯ ಗ್ರಾ.ಪಂ.,ನಾಗರಿಕರ ಮತ್ತು ಆಭಾಗದ ಶಾಸಕರು,ಹಾಲಿ ಸಚಿವರ ಆಕ್ಷೇಪದಿಂದ ಇನ್ನೂ ಕಾರ್ಯಾರಂಭವಾಗಲಿಲ್ಲ. ಪರಿಣಾಮ ಪುರವಾಸಿಗಳ ಕೋಟ್ಯಾಂತರ ರೂ.ಪೋಲಾಗುತ್ತಿದೆ.ಸುಮಾರು ಒಂದು ಕೋ.ರೂ.ನಷ್ಟು ಈ ಘಟಕಕ್ಕೆ ವೆಚ್ಚ ಮಾಡಲಾಗಿದ್ದು,ಬಾಕಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ.ಇದಕ್ಕಿರುವ ಕಾನೂನಾತ್ಮಕ ತೊಡಕುಗಳು ನಿವಾರಣೆಯಾದರೂ ಪುರಸಭೆಯ ನಿರಾಸಕ್ತಿಯಿಂದ ಮುಂದುವರಿದ ಕಾಮಗಾರಿ ಪುನರಾರಂಭವಾಗಲಿಲ್ಲ. ಘಟಕಕ್ಕೆ ಅಳವಡಿಸಿದ್ದ ಗೇಟು ಮುರಿದರೆ,ಲಕ್ಷಾಂತರ ರೂ.ಮೌಲ್ಯದ ರಬ್ಬರ್ ಶೀಟ್ ಹರಿದು ಚೂರು,ಚೂರು ಅಗಿದೆ. ವರ್ಷದ ಹಿಂದೆ ಇದ್ದ ಚುನಾಯಿತಪ್ರತಿನಿಧಿಗಳ ಆಡಳಿತ ನೀಡಿದ್ದ ಭರವಸೆಯಂತೆ ಇನ್ನು ಕಂಚಿನಡ್ಕಪದವಿನ ಘನತ್ಯಾಜ್ಯವಿಲೇವಾರಿಗೆ ಪೈರೋಲಿಸಿಸ್ ಯಂತ್ರ ಇನ್ನು ತಲುಪಿಲ್ಲ. ಈಗ ಬಂಟ್ವಾಳದ ಕಸ ಮಂಗಳೂರಿನ ಪಚ್ಚನಾಡಿಗೆ ಸಾಗಿಸಲಾಗುತ್ತಿದೆ.

 

ಸರಕಾರದ ಆದೇಶ ಪಾಲನೆ: ಸರಕಾರದ ಆದೇಶದಂತೆ ಆಸ್ತಿ ತೆರಿಗೆಯ ಜೊತೆ ಕಸ ಸಂಗ್ರಹದ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಕೆಲ ವಾಡ್ ೯ಗಳಿಗೆ ಕಸ ಸಂಗ್ರಹಕ್ಕೆ ವಾಹನಗಳು ತೆರಳದಿರುವುದು ಗಮನಕ್ಕೆ ಬಂದಿದೆ.ಈಗಾಗಲೇ ಪುರಸಭೆಯಿಂದ ಹೆಚ್ಚುವರಿ ವಾಹನ ಖರೀದಿಗೆ ಟೆಂಡರ್ ಕರೆಯಲಾಗಿದ್ದು,ಚುನಾವಣಾ ನೀತಿ ಸಂಹಿತೆ ಮುಗಿದಾಕ್ಷಣ ಹೆಚ್ಚುವರಿ ವಾಹನ ಖರೀದಿಸಿ ಎಲ್ಲಾ ವಾಡ್೯ ಗಳಿಂದಲೂ ಕಸ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು.ಲೀಲಾವತಿ ಮನೇಜರ್ ಪುರಸಭೆ ಬಂಟ್ವಾಳ 

ಗಮನಕ್ಕೆ ಬಂದಿದೆ :ವಾಸು ಪೂಜಾರಿ ಈ ಹಿಂದಿನ ಕೌನ್ಸಿಲ್ ನಲ್ಲಿ ಆಸ್ತಿ ತೆರಿಗೆಯ ಜೊತೆ ಕಸ ಸಂಗ್ರಹ ಶುಲ್ಕ ವಸೂಲಿ ಮಾಡುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ.ಇದೀಗ ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದಿರುವುದನ್ನೇ ಅಸ್ತ್ರವಾಗಿಸಿ ಅಧಿಕಾರಿಗಳು ಏಕಪಕ್ಷೀಯವಾಗಿ ಈ ನಿರ್ಧಾರ ತೆಗೆದುಕೊಂಡು ಜನರ ಮೇಲೆ ಹೊರೆ ಹಾಕಿರುವುದು ಸರಿಯಲ್ಲ.. ವಾಸು ಪೂಜಾರಿ ಪುರಸಭೆಯ ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ,ಹಾಲಿಸದಸ್ಯ..

More articles

Latest article