ಬಂಟ್ವಾಳ: ಕಳೆದ ಐದು ವರ್ಷದ ಅವಧಿಯಲ್ಲಿ ಮೋದಿ ಸರಕಾರದ ಎಲ್ಲಾ ರಂಗದಲ್ಲೂ ವಿಫಲವಾಗಿದ್ದು, ಕೇವಲ ಪಂಚಿಂಗ್ ಡೈಲಾಗ್ ಹೊಡೆದದಷ್ಟೆ ಇವರ ಸಾಧನೆಯಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ಟೀಕಿಸಿದ್ದಾರೆ. ಸೋಮವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಬಾರಿಯ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವದ ಅಳಿವು , ಉಳಿವಿಗೆ ನಡೆಯುವ ಚುನಾವಣೆಯಾಗಿದೆ ಎಂದರು.  ಜಿಎಸ್‌ಟಿ, ನೋಟ್ ಬ್ಯಾನ್  ಕಾರ್ಯಕ್ರಮವನ್ನು   ಜಾರಿ ಮಾಡಿರುವ ರೀತಿ ಸರಿ ಇಲ್ಲ. ಉದ್ಯೋಗ ಸೃಷ್ಟಿಸುವ ಕೆಲಸವಾಗಿಲ್ಲ. ವಿಪಕ್ಷಗಳ ವಿರುದ್ದ ಅಪಪ್ರಚಾರದಿಂದಲೇ ಆಡಳಿತಕ್ಕೆ ಬಂದಿದ್ದಾರೆ ಎಂದು ಹೇಳಿದ ಅವರು ಮೋದಿ ಸರಕಾರ ಕೇವಲ ಘೋಷಣೆಗಳ ಸರಕಾರವಾಗಿದೆ ಎಂದರು.  ಮಂಗಳೂರು ಲೋಕಸಭಾ ಕ್ಷೇತ್ರವು 1991ರಿಂದ ಬಿಜೆಪಿಯ ಪಾಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿಯಾಗಲಿಲ್ಲ. ಕಾಂಗ್ರೆಸ್ ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಒಳ್ಳೆಯ ಯುವ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ ಎಂದರು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಮೈಗೂಡಿಸಿರುವ ಅಭ್ಯರ್ಥಿ ಮಿಥುನ್ ರೈ ಅವರು ಜಿಲ್ಲೆಯಲ್ಲಿ ಬದಲಾವಣೆಯನ್ನು ಜನರು ಬಯಸಿದ್ದು,  ಪಕ್ಷದ ಕಾರ್ಯಕರ್ತರು, ನಾಯಕರು ಒಟ್ಟಾಗಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುತ್ತಿದ್ದಾರೆ ಅಭ್ಯರ್ಥಿ ಮಿಥುನ್ ರೈ ಗೆಲುವು ನಿಶ್ಚಿತ  ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯ ಬ್ಯಾಂಕ್ ವಿಲೀನಕ್ಕೆ ವಿರೋಧ: ನಮ್ಮ ಜಿಲ್ಲೆಯಲ್ಲಿ ಹುಟ್ಟಿದ ಬ್ಯಾಂಕ್‌ನ್ನು ಗುಜರಾತಿನ ಹೆಸರು ಬರುವ ಬ್ಯಾಂಕ್‌ಗೆ ವಿಲೀನ ಮಾಡುವುದು ಸರಿಯಲ್ಲ, ನಷ್ಟದಲ್ಲಿರುವ ಬ್ಯಾಂಕಿಗೆ ನಮ್ಮೂರಿನ ಬ್ಯಾಂಕ್ ವಿಲೀನ ಮಾಡಿರುವುದು ತುಂಬಾ ಬೇಸರ ತಂದಿದೆ.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನೋಣಯ ಪೂಜಾರಿ,  ಪುರಸಭಾ ಸದಸ್ಯ ಮಹಮ್ಮದ್ ಶರೀಫ್,  ಪಕ್ಷದ ಮುಖಂಡರಾದ ಸದಾಶಿವ ಬಂಗೇರ,  ಉಮ್ಮರ್, ಸ್ಟೀವನ್ ಡಿಸೋಜ, ಗೋಪಾಲಕೃಷ್ಣ ಸುವರ್ಣ, ಇಕ್ಬಾಲ್ ಫರಂಗಿಪೇಟೆ,  ಹಂಝ, ಕರೀಂ ಬೊಳ್ಳಾಯಿ, ಬಾಲಚಂದ್ರ ಶೆಟ್ಟಿ, ಶ್ರೀಧರ ಅಮೀನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here