ಬಂಟ್ವಾಳ: ಭಾರತೀಯ ಸಂಸ್ಕೃತಿಯನ್ನು ಕಲಿಸುವ ಕಲೆಯಾದ ಯಕ್ಷಗಾನವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯಕ್ಷಗಾನ ಕಲಾವಿದರ ಹಿತರಕ್ಷಣೆ ಮತ್ತು ಅಭ್ಯುದಯ ಕಾರ್ಯ ಉತ್ತಮ ಸಾಮಾಜಿಕ ಕಾರ್ಯವಾಗಿದ್ದು, ಯಕ್ಷಧ್ರುವ ಪಟ್ಲ ಫೌಂಡೇಶನ್ ಅಭಿನಂದಾರ್ಹವಾಗಿದೆ ಎಂದು ದ.ಕ., ಉಡುಪಿ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಉಡುಪ ಅವರು ಹೇಳಿದರು.
ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುಂಜಾಲಕಟ್ಟೆ ಘಟಕದ ಪ್ರಥಮ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ಸಮಾಜದ ಋಣ ತೀರಿಸುವ ಸಾಮಾಜಿಕ ಹೊಣೆ ಇದೆ.ಇಂತಹ ಸಂಘಟನೆ ಮೂಲಕ ಉತ್ತಮ ಸಮಾಜ ಸೇವೆಗೆ ಅವಕಾಶವಾಗಿದೆ. ಈ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.


ಟ್ರಸ್ಟ್ ಸ್ಥಾಪಕಾಧ್ಯಕ್ಷ, ಯಕ್ಷಗಾನ ಭಾಗವತ ಸತೀಶ್ ಶೆಟ್ಟಿ ಪಟ್ಲಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದನಿಗೆ ಬಡತನವಿದ್ದರೂ ಅವರ ಕಲೆಗೆ ಬಡತನವಿಲ್ಲ. ಕಲಾವಿದರ ತ್ಯಾಗಕ್ಕೆ ನಾವು ಋಣಿಯಾಗಿರಬೇಕು ಎಂದರು.
ಯಕ್ಷಗಾನದ ಕಲಾವಿದರಿಗೆ ಚೈತನ್ಯ ನೀಡುವ ಕಾರ್ಯವನ್ನು ಪಟ್ಲ ಫೌಂಡೇಶನ್ ಟ್ರಸ್ಟ್ ನಡೆಸುತ್ತಿದೆ, ಈಗಾಗಲೆ 33 ಘಟಕಗಳು ರಚನೆಯಾಗಿದ್ದು, ಮೂರೂವರೆ ವರ್ಷದಲ್ಲಿ ಸುಮಾರು 4 ಕೋಟಿ ರೂ. ಮೊತ್ತದ ಸೇವಾ ಯೋಜನೆಗಳನ್ನು ವಿತರಿಸಲಾಗಿದೆ. ಹಿರಿಯ ಕಲಾವಿದರಿಗೆ ಪಟ್ಲ ಪ್ರಶಸ್ತಿ, ಯಕ್ಷಗೌರವ, ಅಶಕ್ತ ಕಲಾವಿದರಿಗೆ ಗೌರವ ಧನ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ನೀಡುತ್ತಿದೆ ಎಂದ ಅವರು ಅಶಕ್ತ ಕಲಾವಿದರಿಗೆ 5 ಲಕ್ಷ ರೂ. ವೆಚ್ಚದ ನೂರು ಮನೆಗಳನ್ನು ನಿರ್ಮಿಸಿ ಕೊಡುವ ಮಹತ್ವದ ಉದ್ದೇಶ ಹೊಂದಿದೆ. ಈ ಎಲ್ಲಾ ಯೋಜನೆ ಅನುಷ್ಠಾನಿಸಲು ಟ್ರಸ್ಟ್ ಘಟಕಗಳ ಮೂಲಕ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ, ಸ್ವರ್ಣೋದ್ಯಮಿ ಲೋಕೇಶ್ ಆಚಾರ್ಯ, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬೆಳ್ತಂಗಡಿ ಯೋಜನಾಧಿಕಾರಿ ಜಯಕರ ಶೆಟ್ಟಿ, ಮಡಂತ್ಯಾರು ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಪಾರೆಂಕಿ ಶ್ರೀ ಮಹಿಷ ಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಜಶೇಖರ ಶೆಟ್ಟಿ, ಟ್ರಸ್ಟ್ ಪುಂಜಾಲಕಟ್ಟೆ ಮಹಿಳಾ ಘಟಕದ ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ ಮುಗೆರೋಡಿ, ಅಧ್ಯಕ್ಷೆ ತುಳಸಿ ಹಾರಬೆ, ಘಟಕ ಗೌರವಾಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಾಮದಪದವು ವೇದಿಕೆಯಲ್ಲಿದ್ದರು.
ಘಟಕ ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಕೋಶಾಧಿಕಾರಿ ದಿನಕರ ಶೆಟ್ಟಿ, ಮಹಿಳಾ ಘಟಕದ ಪ್ರ.ಕಾರ್ಯದರ್ಶಿ ಬೇಬಿ ರೇಖಾ ಶೆಟ್ಟಿ, ಸಂಚಾಲಕಿ ಶೋಭಾ ವಿಜಯನಾಥ ಶೆಟ್ಟಿ, ಕೋಶಾಧಿಕಾರಿ ಬಬಿತಾ ದಿನೇಶ್ ಪೂಜಾರಿ, ಸರಪಾಡಿ ಘಟಕದ ಅಧ್ಯಕ್ಷ ಡಾ| ಬಾಲಚಂದ್ರ ಶೆಟ್ಟಿ, ಬೆಳ್ತಂಗಡಿ ಘಟಕ ಸಂಚಾಲಕ ಸಂಪತ್ ಸುವರ್ಣ, ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ, ದಿವಾಕರ ದಾಸ್ ಕಾವಳಕಟ್ಟೆ, ಉದಯ ಕುಮಾರ್ ಶೆಟ್ಟಿ, ಪ್ರವೀಣ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಹಿರಿಯ ಅರ್ಥದಾರಿ ಪಿ.ಕಾಂತಪ್ಪ ಟೈಲರ್ ಅವರನ್ನು ಸಮ್ಮಾನಿಸಲಾಯಿತು.
ಗಣೇಶ್ ಶೆಟ್ಟಿ ಸೇವಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಎಂ. ಪ್ರಭಾಕರ ವಂದಿಸಿದರು.
ಬೆಳ್ತಂಗಡಿ ಘಟಕ ಅಧ್ಯಕ್ಷ ಭುಜಬಲಿ ಧರ್ಮಸ್ಥಳ, ಜಿ.ಪಂ.ಸದಸ್ಯ ಎಂ. ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾ. ಪಂ.ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಮುನ್ನ ಯಕ್ಷಗಾನ ತಾಳಮದ್ದಳೆ, ಬಳಿಕ ಜಿಲ್ಲೆಯ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಸೀತಾ ಪರಿತ್ಯಾಗ ಯಕ್ಷಗಾನ ಪ್ರದರ್ಶನ ನಡೆಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here