ಬಂಟ್ವಾಳ: ಶ್ರದ್ಧಾ ಭಕ್ತಿಯಿಂದ ದೇವರ ಸೇವೆ ನಡೆಸಿದಾಗ ದೇವರ ಅನುಗ್ರಹವಾಗುವುದು. ಗ್ರಾಮದ ದೇವಸ್ಥಾನವನ್ನು ಸಮೃದ್ಧಿಗೊಳಿಸುವುದರಿಂದ ಗ್ರಾಮ ಸಮೃದ್ಧಿಯಾಗುವುದು. ನಿತ್ಯ ಪೂಜೆ ಸಲ್ಲಿಸುವುದರಿಂದ ಗ್ರಾಮ ಸುಭಿಕ್ಷೆಯಾಗುವುದು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಹೇಳಿದರು.
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಬುಧವಾರ ನಡೆದ ಅನುಜ್ಞಾ ಕಲಶಾಭಿಷೇಕ, ಬಾಲಾಲಯ ಪ್ರತಿಷ್ಠೆ, ಹಾಗೂ ಪವಿತ್ರ ಮುಷ್ಠಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಯೋಗ ಭಾಗ್ಯ. ಇದನ್ನು ಸದುಪಯೋಗಪಡಿಸಿಕೊಂಡು ದೇವರ ಅನುಗ್ರಹ ಪಡೆಯಬೇಕು ಎಂದು ಹೇಳಿದರು.


ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕೆ.ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಆಶೀರ್ವಚನ ನೀಡಿ ಮಾತನಾಡಿ, ಭಕ್ತರು ಪ್ರೀತಿ, ಭಕ್ತಿ, ನೀತಿಯಿಂದ ನನ್ನ ದೇವಸ್ಥಾನ ಎಂದು ಭಾವಿಸಿ ತೊಡಗಿಸಿಕೊಂಡಾಗ ದೇವರ ಸಾನ್ನಿಧ್ಯ ಉಂಟಾಗುವುದು. ನಾವು ನಂಬಿದ ದೆವರ ಸಾನ್ನಿಧ್ಯದಲ್ಲಿ ಪ್ರಾರ್ಥಿಸಿಕೊಂಡಾಗ ಶಾಂತಿ ನೆಮ್ಮದಿ ದೊರಕುವುದು ಎಂದರು.
ಕ್ಷೇತ್ರದ ವಾಸ್ತು ತಜ್ಞ ಸುಬ್ರಹ್ಮಣ್ಯ ತಂತ್ರಿ ಗುಂಡಿಬಲು ಅವರು ಮಾತನಾಡಿ, ಊರ ದೇವಸ್ಥಾನ ಶಿಥಿಲಗೊಂಡಲ್ಲಿ ಊರಿನ ಸ್ಥಿತಿಯೂ ಹಾಗೇ ಆಗುವುದು. ಊರವರ ಒಗ್ಗಟ್ಟಿನಿಂದ ದೇವಸ್ಥಾನ ಸಮೃದ್ಧಿಗೊಳ್ಳಬೇಕು ಎಂದು ಹೇಳಿದರು.
ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀರ್ಣೋದ್ಧಾರ ಕಾರ್ಯದಂತಹ ಸತ್ಕಾರ್ಯಕ್ಕೆ ಜನ ಬೆಂಬಲ ದೊರಕುವುದು. ದೇವಸ್ಥಾನದ ಕಾರ್ಯಗಳಲ್ಲಿ ಸ್ವಯಂ ಸೇವಕರಾಗಿ ತೊಡಗಿಸಿಕೊಂಡಾಗ ಕಾರ್ಯ ಸಫಲತೆಯಾಗುವುದು ಎಂದು ಹೇಳಿದರು.
ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಸಿದ್ದಕಟ್ಟೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಬಾಬು ಪೂಜಾರಿ ಕೌಡಾಡಿಗುತ್ತು, ಭೊಜರಾಜ ಶೆಟ್ಟಿ ಕೊರಗಟ್ಟೆ, ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ,ಜೀರ್ಣೋದ್ಧಾರ ಸಮಿತಿ, ವಿವಿಧ ಗ್ರಾಮ ಸಮಿತಿ, ಮುಂಬ, ಬೆಂಗಳೂರು ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಸಲು ದೇಣಿಗೆ ಪುಸ್ತಕದ ಪ್ರಥಮ ಪುಸ್ತಕವನ್ನು ಲಕ್ಷ್ಮಿ ನಾರಾಯಣ ಆಸ್ರಣ್ಣರಿಗೆ ಹಸ್ತಾಂತರಿಸಲಾಯಿತು.
ಮುಂಬ ಸಮಿತಿ ಅಧ್ಯಕ್ಷ ಅಶೋಕ್ ಪಕ್ಕಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರ.ಕಾರ್ಯದರ್ಶಿ ಯೋಗೀಶ್ ಕಲಸಡ್ಕ ವಂದಿಸಿದರು. ದಿನೇಶ್ ಸುವರ್ಣ ಕುದ್ಕೋಳಿ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಮಹಾಗಣಪತಿ ಹೋಮ, ಅನುಜ್ಞಾ ಕಲಶ ಪ್ರತಿಷ್ಠೆ, ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶಾಭಿಷೇಕ, ಮಹಾಪೂಜೆ, ಬಾಲಾಲಯ ಪ್ರತಿಷ್ಠೆ, ಮುಷ್ಠಿ ಕಾಣಿಕೆ ಸಮರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮುಂಬಯಿ ಉದ್ಯಮಿ ಗಣೇಶ್ ಶೆಟ್ಟಿ ಐಕಳ, ಉದ್ಯಮಿ ಧೀರಜ್ ಟಿ. ನಾಯ್ಕ್, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಸಮಿತಿ ಗೌರಧಕ್ಷರಾದ ರಘುನಾಥ ಪೈ, ವಿನಾಯಕ ಪ್ರಭು, ಕಾರ್ಯಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here