Wednesday, October 18, 2023

ಪದವು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಎ. ೧೦: ಅನುಜ್ಞಾ ಕಲಶಾಭಿಷೇಕ, ಬಾಲಾಲಯ ಪ್ರತಿಷ್ಠೆ, ಮುಷ್ಠಿ ಕಾಣಿಕೆ

Must read

ಬಂಟ್ವಾಳ: ಪುರಾಣ ಪ್ರಸಿದ್ಧ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸುಮಾರು ೨. ಕೋ. ರೂ ವೆಚ್ಚದಲ್ಲಿ ಪುನರ್ ನಿರ್ಮಾಣ ಗೊಳ್ಳುತ್ತಿದ್ದು, ಆ ಪ್ರಯುಕ್ತ ಎ.೧೦ರಂದು ಶ್ರೀ ಕ್ಷೇತ್ರದಲ್ಲಿ ಅನುಜ್ಞಾ ಕಲಶಾಭಿಷೇಕ, ಬಾಲಾಲಯ ಪ್ರತಿಷ್ಠೆ, ಮುಷ್ಠಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.
ಎ. ೯ರಂದು ಸಂಜೆ ದೇವತಾ ಪ್ರಾರ್ಥನೆ, ವಾಸ್ತು ಹೋಮ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಎ.೧೦ರಂದು ಬೆಳಗ್ಗೆ ಗಂಟೆ ೭ರಿಂದ ಮಹಾಗಣಪತಿ ಹೋಮ, ಅನುಜ್ಞಾ ಕಲಶ ಪ್ರತಿಷ್ಠೆ, ಅನುಜ್ಞಾ ಪ್ರಾರ್ಥನೆ, ಅನುಜ್ಞಾ ಕಲಶಾಭಿಷೇಕ, ಮಹಾಪೂಜೆ, ೧೦.೩೦ಕ್ಕೆ ಮುಷ್ಠಿ ಕಾಣಿಕೆ ಸಮರ್ಪಣೆ, ೧೧ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಪೇಜಾವರ ಮಠಾಽಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕೆ. ಲಕ್ಷ್ಮಿ ನಾರಾಯಣ ಆಸ್ರಣ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಮಾಜಿ ಸಚಿವ ಅಮರನಾಥ ಶೆಟ್ಟಿ ಮೂಡುಬಿದಿರೆ ಅವರು ಅಧ್ಯಕ್ಷತೆ ವಹಿಸಲಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಗೌರವ ಅತಿಥಿಯಾಗಿ, ಡಾ| ಎಂ. ಮೋಹನ ಆಳ್ವ ಮತ್ತಿತರ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿರುವರು. ಬಳಿಕ ಮಹಾಪೂಜೆ, ಅನ್ನಸಂತರ್ಪಣೆ, ಪದವು ಶ್ರೀ ದುರ್ಗಾಪರಮೇಸ್ವರಿ ಯಕ್ಷಮಿತ್ರ ಬಳಗದವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More articles

Latest article