ವಿಟ್ಲ: ಆನಂದದ ನೆಲೆ, ಸಂತಸದ ಸೆಲೆ ಅಧ್ಯಾತ್ಮದಲ್ಲಿ ಅಡಗಿದೆ. ಸಮರ್ಪಣಾಭಾವದ ಸೇವೆಯನ್ನು ಭಗವಂತ ಮೆಚ್ಚುತ್ತಾನೆ. ಭಗವಂತನ ಸಾಮರ್ಥ್ಯವನ್ನು ಲೆಕ್ಕಾಚಾರ ಹಾಕಲು ಅಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ರಾಮಾಯಣ ಮತ್ತು ಮಹಾಭಾರತ ದೇಶದ ಸಂಸ್ಕೃತಿಯ ಎರಡು ಕಣ್ಣು. ಸೇವೆಗೆ ಇನ್ನೊಂದು ಹೆಸರು ಆಂಜನೇಯ. ರಾಮನ ಸೇವೆ ಎಂದರೆ ರಾಷ್ಟ್ರ ಸೇವೆಗೆ ಸಮನಾದುದು. ರಾಮ ತತ್ವ ಜಗತ್ತನ್ನೇ ಗೆಲ್ಲುವಂತಹ ಸತ್ವ ಹೊಂದಿದೆ. ಹನುಮನ ಮತವೇ ರಾಮನ ಮತವಾಗಿದೆ. ಲೌಕಿಕ ಪ್ರಪಂಚದಲ್ಲಿದ್ದುಕೊಂಡು ಅಲೌಕಿಕವನ್ನು ಹುಡುಕುವುದು ಕಷ್ಟ. ಕರ್ತವ್ಯ ಪ್ರಜ್ಞೆಯನ್ನು ಇಟ್ಟುಕೊಂಡು ಬದುಕು ನಡೆಸಬೇಕು ಎಂದರು.
ಅವರು ಶುಕ್ರವಾರ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಶ್ರೀಮದ್ರಾಮಾಯಣ ಮಹಾಯಜ್ಞ – ಶ್ರೀಹನುಮೋತ್ಸವದ ಧಾರ್ಮಿಕ ಸಭೆಯಲ್ಲಿ ವೀರಾಂಜನೇಯ ವೈಭವ (ಸಮಗ್ರ ಹನೂಮಾಯಣ) ಯಕ್ಷಗಾನ ಕೃತಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
ಯಕ್ಷಗಾನ ಕೃತಿ ರಚಿಸಿದ ಹೊಸ್ತೋಟ ಮಂಜುನಾಥ ಭಾಗವತ ಅವರನ್ನು ಸನ್ಮಾನಿಸಲಾಯಿತು. ಭಗವನ್ನಾಮಸಂಕೀರ್ತನಾ ಸಪ್ತಾಹದಲ್ಲಿ ಸುಮಾರು 100 ಕ್ಕೂ ಅಧಿಕ ಭಜನಾ ತಂಡಗಳು ಭಾಗವಹಿಸಿದ್ದವು. ಮನೆಗೆ ಸಂರಕ್ಷಣೆ ನೀಡುವ ಹನುಮಧ್ವಜವನ್ನು ಲೋಕಾರ್ಪಣೆ ಮಾಡಲಾಯಿತು.
ಮುಂಬಯಿ ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ, ಕೃಷ್ಣ ಎಲ್. ಶೆಟ್ಟಿ, ದಾಮೋದರ ಎಸ್. ಶೆಟ್ಟಿ, ಬೆಂಗಳೂರು ಉದ್ಯಮಿ ಬಾಲಚಂದ್ರ, ಮುಂಬಯಿನ ರೇವತಿ ವಿ. ಶೆಟ್ಟಿ, ಕುಶಲ ಆರ್. ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಸರ್ವಾಣಿ ಪಿ. ಶೆಟ್ಟಿ, ಡಾ. ಅದೀಪ್ ಶೆಟ್ಟಿ, ಎ. ಸುರೇಶ್ ರೈ ಮಂಗಳೂರು, ಆಶೋಕ್ ಕುಮಾರ್ ಬಿಜೈ, ಸಿದ್ದರಾಮಪ್ಪ ದಾವಣಗೆರೆ, ಅಜಿತ್ ಕುಮಾರ್ ಪಂದಳಮ್, ಭರತ್ ಭೂಷಣ್ ಮಂಗಳೂರು, ಜಯರಾಮ ರೈ ಮಲಾರು ಉಪಸ್ಥಿತರಿದ್ದರು.
ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಯಶವಂತ ಸ್ವಾಗತಿಸಿದರು. ಕಾರ್‍ಯಕ್ರಮ ನಿರೂಪಿಸಿದರು. ರಾಜಗೋಪಾಲ ಕನ್ಯಾನ ಕೃತಿ ಪರಿಚಯ ಮಾಡಿದರು. ಸಂತೋಷ ಭಂಡಾರಿ ವಂದಿಸಿದರು.

ಶ್ರೀ ಕ್ಷೇತ್ರದಲ್ಲಿ ಭಗವನ್ನಾಮಸಂಕೀರ್ತನಾ ಸಪ್ತಾಹ ಸಮಾಪ್ತಿಯಾಗಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರೀಗಣಪತಿ ಹವನ, ಶ್ರೀಮದ್ರಾಮಾಯಣ ಮಹಾಯಜ್ಞ, ಪ್ರಸಾದ ವಿತಣೆ, ನಾಗದೇವರಿಗೆ ಪಂಚಾಮೃತ ಅಭಿಷೇಕ, ನಾಗತಂಬಿಲ ನಡೆಸಲಾಯಿತು. ರಾತ್ರಿ ಶ್ರೀಹನುಮದ್ಜ್ರತ ಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಉಯ್ಯಾಲೆ ಸೇವೆ ನಡೆಯಿತು.

ಶ್ರೀಮದ್ರಾಮಾಯಣ ಮಹಾಯಜ್ಞ:

ವಿಟ್ಲ:  ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ಶುಕ್ರವಾರ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೇ.ಮೂ. ಚಂದ್ರಶೇಖರ ಉಪಾಧ್ಯಾಯ ಕುರೋಮೂಲೆ ಅವರ ಪೌರೋಹಿತ್ಯದಲ್ಲಿ ಶ್ರೀಮದ್ರಾಮಾಯಣ ಮಹಾಯಜ್ಞ ಪೂರ್ಣಾಹುತಿ ನಡೆಯಿತು. ಸಾಧ್ವಿ ಶ್ರೀಮಾತಾನಂದಮಯಿ ಇದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here