ಬಿ.ಸಿ.ರೋಡು : ಒಂದೆಡೆ ದುರ್ವಾಸನೆ, ಮತ್ತೊಂದೆಡೆ ಸಾಂಕ್ರಾಮಿಕ ರೋಗ ಹರಡುವ ರಾಶಿ ರಾಶಿ ಸೊಳ್ಳೆಗಳು, ನಿರಂತರವಾಗಿ ಹರಿಯುವ ಮ್ಯಾನ್‌ಹೋಲ್‌ನಿಂದ ಉಕ್ಕಿ ಬರುವ ರಸ್ತೆಯಲ್ಲೇ ಹರಿದಾಡುತ್ತಿರುವ ತ್ಯಾಜ್ಯ ನೀರು.  ಪಕ್ಕದಲ್ಲೇ ಜನವಸತಿ ಇರುವ ಪ್ರದೇಶವಾದ ಇಲ್ಲಿ ಸುತ್ತಮುತ್ತಲಿನ ಸಾಂಕ್ರಾಮಿಕ ರೋಗ ಬರುವ ಭೀತಿ, ಪ್ರಾಥಮಿಕ ಶಾಲೆ ಇದರ ಬಳಿಯೇ ಇರುವುದರಿಂದ ಮಕ್ಕಳಿಗೂ ಇದರ ಪರಿಣಾಮ ಬೀಳುವ ಸಾಧ್ಯತೆ. ಇದು ಅಮ್ಟಾಡಿ ಗ್ರಾಮದಲ್ಲಿ ಕರ್ನಾಟಕ ಗೃಹ ಮಂಡಳಿಯ ನಿರ್ಮಿಸಿದ ಬಡಾವಣೆಯಲ್ಲಿ ಇರುವ ಸಮಸ್ಯೆ.
ಕರ್ನಾಟಕ ಗೃಹ ಮಂಡಳಿಯು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ವ್ಯಾಪ್ತಿಯ ನಲ್ಕೆಮಾರ್ ಎಂಬಲ್ಲಿ ನೂರು ಮನೆ ಯೋಜನೆಯಡಿ ನಿರ್ಮಿಸಿದ ಬಡಾವಣೆಯಲ್ಲಿ ಒಳಚರಂಡಿ ಮೂಲಕ ಸಾಗಬೇಕಾದ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದಾಡುತ್ತಿದೆ. ಇದರಿಂದ ಈ ಪ್ರದೇಶದಲ್ಲಿ ಪರಿಸರ ನಿರಂತರ ದುರ್ವಾಸನೆಯಿಂದ ಕೂಡಿದ್ದು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಕಳೆದ ನಾಲ್ಕು ತಿಂಗಳಿಂದ ಶೌಚಾಲಯದ ತ್ಯಾಜ್ಯ ಮ್ಯಾನ್ ಹೋಲ್‌ನಿಂದ  ಉಕ್ಕಿ ಹರಿಯುವ ತ್ಯಾಜ್ಯ ನೀರಿನಿಂದ ರಸ್ತೆ ಸಂಪೂರ್ಣ ನೀರು ಶೇಖರಣೆಯಾಗಿ ಪಾಚಿನಿಂದ ಕೂಡಿದ್ದು ಇದರಿಂದ ಇಡೀ ರಸ್ತೆಯೇ ಚರಂಡಿಯಂತಾಗಿದೆ. ಸಮೀಪದಲ್ಲಿಯೇ  ಸರಕಾರಿ ಅಂಗನವಾಡಿಯಿಂದ ಪ್ರಾಥಮಿಕ ಶಿಕ್ಷಣದವರೆಗೆ ಇರುವ ಶಿಕ್ಷಣ ಕೇಂದ್ರ. ಇಲ್ಲಿಯ  ಮಕ್ಕಳು ಈ ದಾರಿಯನ್ನು ಬಳಸುತ್ತಾರೆ. ಶಾಲೆಯ ಮಕ್ಕಳಿಗೂ ಇದರಿಂದ ತೊಂದರೆಯಾಗುತ್ತಿದೆ.
ಗೃಹ ಮಂಡಳಿಯು ಇಲ್ಲಿನ ಬಡಾವಣೆಯನ್ನು ಅಮ್ಟಾಡಿ ಪಂಚಾಯತ್‌ಗೆ ನಿರ್ವಹಣೆಯನ್ನು ಹಸ್ತಾಂತರಿದ್ದು ಪಂಚಾಯತ್ ತಮಗೆ ಸಂಪೂರ್ಣವಾಗಿ ಹಸ್ತಾಂತರವಾಗಿಲ್ಲ. ಬಡಾವಣೆ ನಿರ್ಮಾಣದ ಸಂದರ್ಭ ಮಂಡಳಿ ಯೋಜನಾ ಬದ್ದವಾಗಿ ಒಳಚರಂಡಿ ಕಾಮಗಾರಿಯನ್ನು ನಿರ್ವಹಿಸಿಲ್ಲ. ಸಣ್ಣ ಗಾತ್ರದ ಕೊಳವೆಗಳನ್ನು ಅಳವಡಿಸಲಾಗಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ  ಎಂಬುದು ಪಂಚಾಯತ್‌ರವರ ಮಾತು. ಬಡಾವಣೆಯನ್ನು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲಾಗಿದೆ. ನಿರ್ವಹಣೆ ಅವರ ಹೊಣೆಗಾರಿಕೆ ಎಂದು ಗೃಹ ಮಂಡಳಿ ಹೇಳುತ್ತಿದೆ.
ಈ ಬಡಾವಣೆಯಲ್ಲಿ ಮೆಸ್ಕಾಂ ಇಲಾಖೆಯು ವಾಸ್ತವ್ಯವಿದ್ದು, ಮೆಸ್ಕಾಂ ತನ್ನ ಸ್ವಂತ ವೆಚ್ಚದಲ್ಲಿ ಎರಡು ಬಾರಿ ತ್ಯಾಜ್ಯ ನೀರು ಹರಿವಿಗೆ ಅಡ್ಡಿಯಾಗಿರುವ ಮ್ಯಾನ್ ಹೋಲ್‌ಗಳನ್ನು ಸ್ವಚ್ಚ ಮಾಡಿದೆ. ಆದರೆ ಎರಡೇ ದಿನಗಳಲ್ಲಿ ಮತ್ತೆ ತ್ಯಾಜ್ಯ ರಸ್ತೆಯಲ್ಲಿ ಹರಿಯತೊಡಗುತ್ತದೆ. ಇದಕ್ಕೆ ತ್ಯಾಜ್ಯ ಹರಿಯುವ ಕೊಳವೆ ಮಾರ್ಗವನ್ನು ಸಂಪೂರ್ಣ ದುರಸ್ತಿ ಮಾಡಬೇಕಾಗಬಹುದು. ಆದರೆ ಅದನ್ನು ಸರಿಪಡಿಸಲು ಬಡಾವಣೆಯಾಗಲೀ ಪಂಚಾಯತ್‌ಆಗಲೀ ಅತ್ತ ಗಮನ ಹರಿಸುವುದಿಲ್ಲ.
ಜನರಿಗೆ ಉತ್ತಮ ಆರೋಗ್ಯದಿಂದಿರಲು ಒಳ್ಳೆಯ ಪರಿಸರ ಅಗತ್ಯ.  ಬೇಸಿಗೆಯಲ್ಲಿ ತ್ಯಾಜ್ಯ ನೀರು ರಸ್ತೆಯಲ್ಲಿ ಹರಿದುಹೋಗುತ್ತಿದೆ. ಮಳೆಗಾಲದಲ್ಲಿ ಇದು ಜಲಮೂಲಗಳನ್ನು ಸೇರಿ ಕುಡಿಯುವ ನೀರೂ ಕಲುಷಿತಗೊಂಡು ಆರೋಗ್ಯ ಸಮಸ್ಯೆಗೆ ಕಾರಣವಾಗುವ ಅಪಾಯವಿದೆ. ಆದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಲು ಇಲಾಖೆ ಮತ್ತು ಅಮ್ಟಾಡಿ ಪಂಚಾಯತ್ ಮುಂದಾಗುವುದು ಒಳ್ಳೆಯದು.
*******
ಸ್ಥಳೀಯರಿಂದ ಯಾವುದೇ ಪತ್ರಮುಖೇನ ದೂರು ನಮ್ಮ ಪಂಚಾಯತಿಗೆ ಬರಲಿಲ್ಲ. ಆದರೆ ಸಮಸ್ಯೆ ಎಲ್ಲರಿಗೂ ತಿಳಿದಿರುತ್ತದೆ. ಬಡಾವಣೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ ಚಿಕ್ಕ ಗಾತ್ರದ ಕೊಳವೆಯನ್ನು ಅಳವಡಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಬಡಾವಣೆಯನ್ನು ಪಂಚಾಯತ್‌ಗೆ ಸಂಪೂರ್ಣವಾಗಿ ಹಸ್ತಾಂತರವಾಗಲಿಲ್ಲ. ಪಂಚಾಯತ್‌ನ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕೂಡಲೇ ಸಮಸ್ಯೆಗೆ ಪರಿಹಾರ ನೀಡಲಾಗುವುದು.
– ಯೋಗೀಶ್ , ಸ್ಥಳೀಯ ಸದಸ್ಯರು, ಅಮ್ಟಾಡಿ ಪಂಚಾಯತ್
*******
ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗಲೂ ಆಗುವುದಿಲ್ಲ. ಗಬ್ಬು ವಾಸನೆ. ಶಾಲಾ ಮಕ್ಕಳು ಓಡಾಡುವ ಪ್ರದೇಶದಲ್ಲಿ ಕೂಡಲೇ ಇದನ್ನು ಸರಿಮಾಡಬೇಕಾಗಿತ್ತು. ಆದರೆ ಯಾರೂ ಇತ್ತ ಕಡೆ ಬರುವುದಿಲ್ಲ. ಪಂಚಾಯತ್ ಸದಸ್ಯರು ಯಾವಾಗಲೂ ಅತ್ತಿಂದಿತ್ತ ಈ ರಸ್ತೆಯಲ್ಲಿ ಹೋಗುತ್ತಿರುತ್ತಾರೆ ಆದರೆ ಅವರಿಗೆ ಇದೆಲ್ಲ ಕಾಣುವುದೇ ಇಲ್ಲ. ಆದಷ್ಟು ಬೇಗ ಪೈಪ್ ಸ್ವಲ್ಪ ದೊಡ್ಡದು ಮಾಡಿ ನೀರು ಹರಿಯುವಂತೆ ಮಾಡಿದರೆ ಎಲ್ಲರಿಗೂ ಒಳ್ಳೆಯದು.
– ಚೆನ್ನಪ್ಪ ನಲ್ಕೆಮಾರ್

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here