(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಬೃಹನ್ಮುಂಬಯಿ ಮಹಾನಗರದಲ್ಲಿ ಸಾಹಿತಿಕ ಕೃಷಿಗೈದು ಹೆಸರಾಂತ ಲೇಖಕಿ, ಕವಯತ್ರಿ ಆಗಿ ಗುರುತರ ಸೇವೆಗೈದು ಇತ್ತೀಚೆಗೆ ಸ್ವರ್ಗಸ್ಥರಾದ ಕನ್ನಡ ಲೇಖಕಿಯರ ಬಳಗ ಮುಂಬಯಿ ‘ಸೃಜನ’ ಮತ್ತು ಸ್ಪ್ಯಾರೋ ಸಂಸ್ಥೆಗಳ ಸಕ್ರೀಯ ಸದಸ್ಯೆ ತುಳಸಿ ವೇಣುಗೋಪಾಲ್ ಅವರಿಗೆ ತನ್ನ ಸದಸ್ಯೆಯನ್ನು ಅಕಾಲಿಕವಾಗಿ ಕಳಕೊಂಡ ‘ಸೃಜನ’ ಸಂಸ್ಥೆಯು ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮುಂಬಯಿ ಕನ್ನಡ ಸಂಘದ ಕಛೇರಿಯಲ್ಲಿ ‘ಸೃಜನ’ ಪರವಾಗಿ ಅಗಲಿದ ಮಹಾನ್ ಚೇತನ ತುಳಸಿ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿತು.

ಅಂತೆಯೇ ಇತ್ತೀಚೆಗೆ ಅಗಲಿದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಸಂಸ್ಥೆ ಕರ್ನಾಟಕ ಸಂಘ ಮುಂಬಯಿ ಇದರ ಮಾಜಿ ಉಪಾಧ್ಯಕ್ಷ, ನಾಡಿನ ಹಿರಿಯ ಕವಿ, ಲೇಖಕ, ಹಿರಿಯ ಲೇಖಕ, ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ ವಿಜೇತ ಡಾ| ಬಿ.ಎ ಸನದಿ (ಬಾಬಾ ಸಾಹೇಬ್ ಅಹಮದ್) ಮತ್ತು ನಿನ್ನೆತಾನೇ ಅಗಲಿದ ಹಿರಿಯ ನಾಟಕಕಾರ ಶ್ರೀಪತಿ ಬಳ್ಳಾಲ್ ಅವರ ನಿಧನಕ್ಕೂ ಸಂತಾಪ ವ್ಯಕ್ತ ಪಡಿಸಿ ಭಾವಪೂರ್ಣ ಬಾಷ್ಪಾಂಜಲಿ ಸಲ್ಲಿಸಲಾಯಿತು.

ಸೃಜನಾ ಬಳಗದ ಮಾರ್ಗದರ್ಶಿ ಡಾ| ಸುನೀತಾ ಎಂ.ಶೆಟ್ಟಿ ತುಳಸಿ ಅವರ ಬಂಧುತ್ವ, ಬರವಣಿಗೆಯ ವೈಶಿಷ್ಟ ತೆ, ಸಾಹಿತಿಕ ಸಂಬಂಧ, ಒಡನಾಟ ಬಿಚ್ಚಿಟ್ಟರು ಹಾಗೂ ತುಳಸಿ ಮತ್ತು ಸನದಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.
ತಮ್ಮ ಮತ್ತು ತುಳಸಿ ಗೆಳೆತನದ ಕೆಲವು ಅವಿಸ್ಮರಣೀಯ ಘಟನೆಗಳನ್ನು ನೆನೆಸಿಕೊಂಡು, ತುಳಸಿ ಸೂಕ್ಷ್ಮ ಮನಸ್ಸಿನವರು. ಕಥೆ ಕವನಗಳಲ್ಲೂ ಹಾಗೆಯೇ. ಕಥೆಗಳಲ್ಲಿ ಪಾತ್ರಗಳಲ್ಲಿಗೆ ಪರಕಾಯ ಪ್ರವೇಶ ಮಾಡಿದಂತೆ ಬರೆಯುತ್ತಿದ್ದರು. ಟಿ.ಪಿ ಅಶೋಕ್, ಮಯೂರದಲ್ಲಿ ಬಸವರಾಜ್ ಈಶ್ವರಯ್ಯ ಮುಂತಾದ ವಿಮರ್ಶಕರು ಅವರ ಬಗ್ಗೆ ಒಳ್ಳೆಯ ವಿಮರ್ಶೆ ಬರೆದಿದ್ದಾರೆ ಎಂದ ಅವರ ಆಪ್ತ ಸ್ನೇಹಿತೆ ಲೇಖಕಿ ಮಿತ್ರ ವೆಂಕಟ್ರಾಜ್ ತಿಳಿಸಿದರು.

ಡಾ| ಸನದಿ ಅವರ ನೀಲಾಂಬಿಕೆ ನಾಟಕ ವಿಮರ್ಶೆಯನ್ನು ಡಾ| ಮಮತಾ ರಾವ್ ಮಾಡಿ ಸನದಿ ಪರಿಚಯಿತ ಸ್ನೇಹ ನನ್ನ ಸಾಹಿತ್ಯ ಪಯಣಕ್ಕೆ ಪ್ರೇರಣೆಯಾಯಿತು. ನನ್ನ ಆಯ್ದ ಲೇಖನಗಳ ಸಂಗ್ರಹಗಳನ್ನು ಕೃತಿ ರೂಪದಲ್ಲಿ ತಂದಾಗ, ಅವರೇ ಹಿರಿಯ ಸಾಹಿತಿ ಮುರಳಿ ಕಾಪಸೆ ಅವರಿಂದ ಮುನ್ನುಡಿ ಬರೆಯಿಸಿ ಕೊಂಡಿದ್ದರು. ಸನದಿ ಅವರಿಂದ ಹೋಳಿಗೆಯೆಂದರೆ ಅತೀ ಪ್ರೀತಿ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ತನ್ನ ಕೈ ಯಾಡಿಸಿದ ಸನದಿ ಮಕ್ಕಳ ಕವನ ಸಂಕಲಕ್ಕೆ ‘ಹೂರಣ ಹೋಳಿಗೆ’ ಎಂದು ಹೆಸರಿಟ್ಟಿದ್ದರು. ಅದು ಇನ್ನು ಪ್ರಕಾಶಿತಗೊಂಡಿಲ್ಲ ಎಂದರು.

ತುಳಸಿ ಅವರು ಮೃದು ಸ್ವಭಾವದವರಾಗಿ ಕಥೆಯ ಮೂಲಕ ಗುರುತಿಸಿಕೊಂಡಿದ್ದರು. ಅದೇ ರೀತಿ ಡಾ. ಸನದಿ ಅವರ ಮುಕ್ತ ನಗು ಸಾಹಿತ್ಯ ಹಾಗೂ ಬದುಕಿನ ಜೀವನ ಸೆಲೆ. ಯಾರದೇ ಬರಹಗಳನ್ನು ಓದಿ ಅದಕ್ಕೆ ಪ್ರತಿಕಿಯೆ ನೀಡುವುದು ಅವರ ಸ್ವಭಾವವಾಗಿತ್ತು ಎಂದು ಡಾ| ದಾಕ್ಷಾಯಣಿ ಯಡಹಳ್ಳಿ ತನ್ನ ಅನಿಸಿಕೆ ಹಂಚಿಕೊಂಡರು.

ಈ ಸಂದರ್ಭದಲ್ಲಿ ಸೃಜನಾ ಬಳಗದ ಶ್ಯಾಮಲಾ ಮಾಧವ, ಅನುಸೂಯ ಯಾಳಗಿ, ಶಾಂತ ಶಾಸ್ತ್ರಿ, ಸುರೇಖಾ ಹೆಚ್.ದೇವಾಡಿಗ, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಡಾ| ಜಿ.ಪಿ ಕುಸುಮಾ, ಶಾರದಾ ಅಂಬೆಸಂಗೆ, ನಾಗರತ್ನ ದೇವಾಡಿಗ, ಕನ್ನಡ ಸಂಘದ ಗೌ| ಪ್ರ| ಕಾರ್ಯದರ್ಶಿ ಸತೀಶ್ ಎನ್.ಬಂಗೇರ, ಮಾಲತಿ ಆಚಾರ್ಯ, ಯಶೋಧ ಶೆಟ್ಟಿ (ಕರ್ನಾಟಕ ಸಂಘ ಮುಂಬಯಿ), ಬಾಲಚಂದ್ರ ದೇವಾಡಿಗ (ಕರುನಾಡ ಸಿರಿಯ) ಮತ್ತಿತರರು ಉಪಸ್ಥಿತರಿದ್ದು ಭಾವಚಿತ್ರಕ್ಕೆ ನಮಿಸಿ ಅಶ್ರುತಾರ್ಪಣೆಗೈದು ಸದ್ಗತಿ ಕೋರಿದರು.

ಸುಶೀಲಾ ಎಸ್.ದೇವಾಡಿಗ ಅವರು ಡಾ| ಸನದಿ ಅವರ ಮಣ್ಣು ಕವಿತೆ ಪ್ರಸ್ತುತ ಪಡಿಸಿಸಿ ಆಕಾಶವಾಣಿಯಲ್ಲಿ ಸನದಿ ಅವರ ನಂಟು ಮತ್ತು ಸೇವಾ ವೈಖರಿಯನ್ನು ಮೆಲುಕು ಹಾಕಿದರು. ಸೃಜನಾ ಸದಸ್ಯೆಯರು ಅವರೊಂದಿಗೆ ತಮ್ಮ ಅನುಭವಗಳನ್ನು ನೆನಪಿಸಿಕೊಂಡು ಅವರ ಬರಹ ಹಾಗೂ ಬದುಕಿನ ಬಗ್ಗೆ ವಿಸ್ತೃತವಾಗಿ ಮಾತನಾಡಿದರು. ಸೃಜನಾ ಕಾರ್ಯದರ್ಶಿ ಹೇಮಾ ಸದಾನಂದ ಅಮೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here