Wednesday, October 18, 2023

ಮೆಚ್ಚುಗೆ ಗಳಿಸಿದ ಕಿರುಚಿತ್ರ “ಮತದಾರ ಕೇಳೊ ಇಲ್ಲಿ…”

Must read

ಪುತ್ತೂರು : ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಬೇಕು ಎಂಬ ನಿಟ್ಟಿನಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ವಿಭಿನ್ನ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯ ಮಾರ್ಗದರ್ಶನದಲ್ಲಿ ಸಿದ್ದಗೊಂಡಿರುವ ಮತದಾರ ಕೇಳೊ ಇಲ್ಲಿ.. ಎನ್ನುವ ಕಿರು ಸಾಕ್ಷ್ಯಾಚಿತ್ರವೊಂದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


ಪತ್ರಕರ್ತ ಮೌನೇಶ ವಿಶ್ವಕರ್ಮ ಅವರ ರಚನೆಯ ಮತದಾರ ಕೇಳೋ ಇಲ್ಲಿ.. ನಾವ್ ಹೇಳೊ ಮಾತ ಕಿವಿಗೊಟ್ಟು ಕೇಳೊ ಇಲ್ಲೀ.. ಎನ್ನುವ ಪಲ್ಲವಿ ಹೊಂದಿರುವ ಈ ಹಾಡಿನ ಪ್ರತೀ ಚರಣಗಳ ಸಾಲುಗಳು ಮತದಾರನ ವಿಶೇಷ ಜಾಗೃತಿಗೆ ಪ್ರೇರಣೆಯಾಗಿ ನಿಂತಿವೆ.
ಮತ್ತೆ ಚುನಾವಣೆ ಬಂದಿದೆ, ಮತದಾರನೇ ಶಕ್ತಿ ತೋರಲು ಸಜ್ಜಾಗು, ದಿಟ್ಟತನದಿ ಮತವನ್ನು ಹಾಕು, ಆಮಿಷಕ್ಕೆ ಬಲಿಬೀಳದೆ, ಯೋಗ್ಯರನ್ನೇ ಗೆಲ್ಲಿಸು ಎನ್ನುವ ನೀತಿಯನ್ನು ಮೊದಲೆರಡು ಚರಣಗಳು ನೀಡಿದರೆ, ಮತ ಹಾಕಿದರೆ ಏನು ಸುಖ ಎನ್ನುವ ಭಾವನೆಯನ್ನು ಬಿಟ್ಟು ಬಿಡಬೇಕು, ಯಾರಿಗೆ ಮತ ಹಾಕಿದರೆ ದೇಶಕ್ಕೆ ಸುಖ ಎನ್ನುವ ಕುರಿತಾಗಿ ಯೋಚಿಸಿ ಮತಹಾಕಬೇಕು, ಸೀರೆ, ಹೆಂಡ, ಹಣವನ್ನು ಮುಟ್ಟಬೇಡ, ಮತ ಹಾಕುವ ಹೊತ್ತಿನಲ್ಲಿ ದೇಶದ ಬಗ್ಗೆ ಯೋಚನೆ ಮಾಡು, ನಿನ್ನ ಒಂದು ಮತ, ದೇಶದ ಹಿತ ಕಾಯುತ್ತದೆ, ಮತದ ಶಕ್ತಿಯನ್ನು ನೀನು ಅರಿತುಕೊಂಡ ಇತರರಿಗೂ ತಿಳಿಸು ಎನ್ನುವ ಸಂದೇಶವನ್ನು ಹಾಡಿನ ಕೊನೆಯಲ್ಲಿ ನೀಡಲಾಗಿದೆ.
ಸಂಸಾರ ಜೋಡುಮಾರ್ಗದ ಬ್ಯಾನರ್ ನಲ್ಲಿ , ರಂಗನಿರ್ದೇಶಕ ಪತ್ರಕರ್ತ ಮೌನೇಶ ವಿಶ್ವಕರ್ಮ ಈ ಸಾಕ್ಷ್ಯಾಚಿತ್ರವನ್ನು ನಿರ್ದೇಶಿಸಿದ್ದು, ೪.೧೮ ನಿಮಿಷದ ವಿಡಿಯೋದಲ್ಲಿ ಕಲ್ಲಡ್ಕದ ಶಿಲ್ಪಾಗೊಂಬೆ ಬಳಗದ ಗೊಂಬೆ ಕುಣಿತ, ಮುರಳಿ ಬ್ರದರ್‍ಸ್ ಕಲಾವಿದರ ನೃತ್ಯ, ಕಲಾವಿದ ಪೃಥ್ವಿರಾಜ್ ಬಳಗದ ಚೆಂಡೆವಾದನದ ದೃಶ್ಯಗಳು ಗಮನಸೆಳೆಯುತ್ತದೆ. ಗಾಯಕರಾದ ಚಂದ್ರಶೇಖರ ಹೆಗ್ಡೆ, ಶಿವಾನಂದ ಶೆಣೈ, ನವ್ಯ ಆಚಾರ್ಯ ಹಾಡನ್ನು ಹಾಡಿದ್ದಾರೆ, ಗೌರವಕಲಾವಿದೆಯಾಗಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ , ಸುಮಂತ್ ಮಾಣಿ, ಜಗದೀಶ್ ಮಾಮೇಶ್ವರ ನಟಿಸಿದ್ದು, ಪುತ್ತೂರಿನ ಆರ್ವಿ ವೋಕಲ್ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಮಾಡಲಾಗಿದೆ. ಸೀಮಿತ್ ಆಚಾರ್ಯ ರವರು ಸಂಗೀತ ಸಂಯೋಜಿಸಿದ್ದಾರೆ.
ಜ್ಞಾನೇಶ್ ವಿಶ್ವಕರ್ಮ, ಸುಮಂತ್ ಆಚಾರ್ಯ, ನಿತಿನ್ ಕಲ್ಲಡ್ಕ ಕಲಾನಿರ್ದೇಶನ ನೀಡಿದ್ದಾರೆ.
ಫೊಟೋ ಟ್ರಿಕ್ಸ್ ನ ರವರ ಪ್ರಮೋದ್ ಕ್ಯಾಮೆರಾ ಚಳಕ ಅತ್ಯುತ್ತಮವಾಗಿ ಮೂಡಿಬಂದಿದ್ದರೆ, ಶ್ರೀನಿಧಿ ಗ್ರಾಫಿಕ್ಸ್ ನಲ್ಲಿ ಕಲಾತ್ಮಕವಾಗಿ ಎಡಿಟಿಂಗ್ ನಡೆಸಲಾಗಿದೆ. ಮಂಗಳೂರಿನ ಭಾರತ್ ಕಾರ್‍ಸ್ ಸಂಸ್ಥೆ ಕೂಡ ಸಾಕ್ಷ್ಯಾಚಿತ್ರ ನಿರ್ಮಾಣಕ್ಕೆ ನೆರವು ನೀಡಿದೆ.
ಯೂಟ್ಯೂಬ್ ನಲ್ಲಿ ಮತದಾರ ಎಂದು ಹುಡುಕಾಟ ನಡೆಸಿದರೆ ಈ ಚಿತ್ರ ವನ್ನು ನೀವೂ ವೀಕ್ಷಿಸಬಹುದು.

ಬಿಡುಗಡೆ:ಮಂಗಳೂರು ಪುರಭವನದಲ್ಲಿ ನಡೆದ ಸ್ವೀಪ್ ಸಮಿತಿಯ ಜಾಗೃತಿ ಕಾರ್ಯಕ್ರಮದಲ್ಲಿ ದ.ಕ.ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಸೆಲ್ವಮಣಿ ಈ ಸಂದರ್ಭ , ರಾಜ್ಯ ಯುವ ಸಮಿತಿಯ ರಾಯಭಾರಿ ಬಹುಮುಖ ಪ್ರತಿಭೆ ಶಬರಿ ಗಾಣಿಗ, ಸಾಕ್ಷ್ಯಚಿತ್ರ ನಿರ್ದೇಶಕ ಮೌನೇಶವಿಶ್ವಕರ್ಮ, ಸ್ವೀಪ್ ಸಮಿತಿ ಕಾರ್ಯದರ್ಶಿ ಸುಧಾಕರ್. ಕೆ ಉಪಸ್ಥಿತರಿದ್ದರು.

More articles

Latest article