ಖ್ಯಾತ ಚಿತ್ರ ಕಲಾವಿದರಾಗಿದ್ದ ಅಂದಿನ ಧರ್ಮಸ್ಥಳದ ಧರ್ಮಾಧಿಕಾರಿ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ರಚಿಸಿದ ಭಗವಾನ್ ಶ್ರೀ ಮಹಾವೀರತೀರ್ಥಂಕರರ ವರ್ಣಚಿತ್ರ



ಉಜಿರೆ: ಭಗವಾನ್‌ಶ್ರೀ ಮಹಾವೀರ ಸ್ವಾಮಿಯ 2618ನೆ ಜಯಂತ್ಯುತ್ಸವವನ್ನು ಬುಧವಾರ ದೇಶದೆಲ್ಲೆಡೆ ಜಿನ ಮಂದಿರ (ಬಸದಿ)ಗಳಲ್ಲಿ ಸಂಭ್ರಮ – ಸಡಗರದಿಂದ ಆಚರಿಸಲಾಗುವುದು.
ವಿಶೇಷ ಪೂಜೆ, ಅಭಿಷೇಕ, ಆರಾಧನೆ, ಮುನಿಗಳಿಂದ ಹಾಗೂ ಭಟ್ಟಾರಕರುಗಳಿಂದ ಮಂಗಲ ಪ್ರವಚನ, ಧಾರ್ಮಿಕಚಿಂತನ-ಮಂಥನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳ್ತಂಗಡಿ ಜೈನ ಪೇಟೆಯಲ್ಲಿರುವ ರತ್ನತ್ರಯ ತೀರ್ಥಕ್ಷೇತ್ರದಲ್ಲಿ ಬುಧವಾರ ಬೆಳಿಗ್ಗೆ ಗಂಟೆ 6.30 ರಿಂದ ತೋರಣ ಮುಹೂರ್ತ, ವಿಮಾನ ಶುದ್ಧಿ, ಸಾಮೂಹಿಕ ಶ್ರೀ ಸಮ್ಮೇದಗಿರಿ ಸಿದ್ದಕ್ಷೇತ್ರ ಆರಾಧನೆ ಹಾಗೂ ಭಗವಾನ್ ಶ್ರೀ ಮಹಾವೀರ ಸ್ವಾಮಿಗೆ ನವಕಲಶ ಅಭಿಷೇಕ ನಡೆಯುತ್ತದೆ ಎಂದು ಬಸದಿಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ತಿಳಿಸಿದ್ದಾರೆ.
ಹೊಂಬುಜಜೈನ ಮಠದ ಪೂಜ್ಯ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡುವರು.
ನಾರಾವಿಯಲ್ಲಿ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ, ವೇಣೂರು ಬಸದಿಯಲ್ಲಿ ಹಾಗೂ ಮೂಡಬಿದ್ರೆ ಮತ್ತು ಕಾರ್ಕಳ ಬಸದಿಗಳಲ್ಲಿಯೂ ವಿಶೇಷ ಪೂಜೆ, ಆರಾಧನೆಗಳು ನಡೆಯುತ್ತವೆ.
ಭಗವಾನ್ ಮಹಾವೀರರು ಭೋದಿಸಿದ ಅಹಿಂಸೆ, ಸ್ಯಾದ್ವಾದ, ಬದುಕು ಮತ್ತು ಬದುಕಲು ಬಿಡು, ಪಂಚಾಣುವ್ರತಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ.