ಬಂಟ್ವಾಳ: ಬಿ.ಮೂಡಗ್ರಾಮದ ಕುಪ್ಪಿಲದಲ್ಲಿ ಸುಮಾರು 30 ಲಕ್ಷ ರೂ.ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿರುವ ಶ್ರೀ ರಕ್ತೇಶ್ವರೀ ದೇವಿ ಹಾಗೂ ಶ್ರೀ ಗುಳಿಗ ದೈವಸ್ಥಾನದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಎ.27-29  ರವರೆಗೆ ನಡೆಯಲಿದೆ ಎಂದು ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ಕುಪ್ಪಿಲಗುತ್ತು ತಿಳಿಸಿದ್ದಾರೆ. ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ತಂತ್ರಿವರ್ಯರಾದ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ  ಎ.27,28 ರಂದು ವಿವಿಧ ವೈಧಿಕ ವಿಧಿವಿಧಾನಗಳು ನಡೆಯಲಿದ್ದು, 29 ರಂದು ಶ್ರೀರಕ್ತೇಶ್ವರೀ ದೇವಿ ಹಾಗೂ ಗುಳಿಗದೈವದ ಪ್ರತಿಷ್ಠೆ ಮತ್ತು ದ್ರವ್ಯ ಕಲಶಾಭಿಷೇಕ ನಡೆಯಲಿದೆ ಎಂದರು. ಸಂಜೆ ಬಾಲಗೋಕುಲದ ಮತ್ತುಅಂಗನವಾಡಿ ಪುಟಾಣಿಗಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರುಶ್ರೀಗಳು ಆಶೀರ್ವಚನ ನೀಡಲಿದ್ದು,ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಅವರು ಧಾರ್ಮಿಕಸಭೆಯನ್ನು ಉದ್ಘಾಟಿಸುವರು,ಎಂ.ಪುರುಷೋತ್ತಮ ಕೊಟ್ಟಾರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಶಾಸಕ ಯು.ರಾಜೇಶ್ ನಾಯ್ಕ್,ಮಾಜಿಸಚಿವ ರಮಾನಾಥ ರೈ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.ರಾತ್ರಿ ದೈವಗಳ ನೇಮೋತ್ಸವ ಜರಗಲಿದೆ ಎಂದು ಹೇಳಿದ ಅವರು ಎ.25 ರಂದುಬಿ.ಸಿ.ರೋಡಿನ ಪೊಳಲಿ ದ್ವಾರದ ಬಳಿಯಿಂದ ಹಸಿರು ಹೊರಕಾಣಿಕೆಯ ಮೆರವಣಿಗೆ ನಡೆಯಲಿದೆ ಎಂದರು.  ಬಂಟ್ವಾಳ ಮೂಡ,ನಡು ಗ್ರಾಮ,ತುಂಬೆ,ಕಳ್ಳಿಗೆ ಪರಿಸರಕ್ಕೆ ಸಂಬಂಧಿಸಿದ ಸುಮಾರು 800 ವರ್ಷಗಳಿಗಿಂತಲೂ ಅಧಿಕ ಇತಿಹಾಸವುಳ್ಳ ಈ ದೈವ ಸಾನಿಧ್ಯ ಬ್ರಹ್ಮ ಸನ್ನಿಧಿ ಮತ್ತು ಪೆರಿಯೋಡಿಬೀಡುವಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ.ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಅಜೀರ್ಣಾವಸ್ಥೆಯಲ್ಲಿದ್ದ ಈ ದೈವಸ್ಥಾನವನ್ನು ಜೀರ್ಣೋದ್ದಾರಗೊಳಿಸಲಾಗಿದೆ‌ ಎಂದು ವಿವರಿಸಿದರು‌. ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಪೊನ್ನೋಡಿ,  ಸಂಚಾಲಕ ರಮಾನಾಥ ರೈ ಕುಪ್ಪಿಲಗುತ್ತು,   ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಗೋಳಿನೆಲ,ಜತೆ ಕಾರ್ಯದರ್ಶಿ ದಯಾನಂದ ಕೆ.ಎಸ್.,ಕೋಶಾಧಿಕಾರಿ ಗಣೇಶದಾಸ್ ಮಿತ್ತಪರಾರಿ ಮಹೇಶ್ ಶೆಟ್ಟಿ ಜುಮಾದಿಗುಡ್ಡೆ ಮೊದಲಾದವರಿದ್ದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here