ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಳಂಬೆ-ದಾಸರಬೆಟ್ಟು ರಸ್ತೆ ಇದುವರೆಗೂ ಡಾಂಬರೀಕರಣಗೊಂಡಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರದ ನಾಮಫಲಕ ಅಳವಡಿಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದಾರೆ.

ವಿಟ್ಲ ಪೇಟೆಯಿಂದ ಕಂಬಳಬೆಟ್ಟು-ಕೊಳಂಬೆ-ದಾಸರಬೆಟ್ಟು ಸಂಪರ್ಕಿಸುವ ರಸ್ತೆಯೂ ಮಣ್ಣಿನಿಂದ ಕೂಡಿದ್ದು, ಈ ರಸ್ತೆಯೂ ಇದುವರೆಗೂ ಡಾಂಬರೀಕರಣಗೊಂಡಿಲ್ಲ. ಈ ಬಗ್ಗೆ ಇಲ್ಲಿಯ ಗ್ರಾಮಸ್ಥರು ಕಳೆದ 25 ವರ್ಷಗಳಿಂದ ಸ್ಥಳೀಯ ಸಂಸದರಿಗೆ, ಶಾಸಕರಿಗೆ ಹಾಗೂ ಪಟ್ಟಣ ಪಂಚಾಯಿತಿಗೆ ನಿರಂತರ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಪ್ರತಿ ಚುನಾವಣೆ ಸಂದರ್ಭ ಭರವಸೆಗಳನ್ನು ಮಾತ್ರ ನೀಡಲಾಗುತ್ತಿದೆ ಹೊರತು ರಸ್ತೆ ಅಭಿವೃದ್ಧಿಪಡಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


ಕಂಬಳಬೆಟ್ಟು-ಕೊಳಂಬೆ ವರೆಗಿನ ರಸ್ತೆಗೆ ಗ್ರಾಮಸ್ಥರು ನಿರಂತರ ಹೋರಾಟದ ಫಲವಾಗಿ ಆಗಿನ ಶಾಸಕಿ ಶಕುಂತಳಾ ಶೆಟ್ಟಿ ಅವರ ಮೂಲಕ ಸುಸಜ್ಜಿತ ಸೇತುವೆ ಹಾಗೂ ಡಾಂಬರೀಕರಣ ನಡೆಸಲಾಗಿತ್ತು. ಆದರೆ ಕೊಳಂಬೆಯಿಂದ ದಾಸರಬೆಟ್ಟು ರಸ್ತೆ ಇದುವರೆಗೂ ಅಭಿವೃದ್ಧಿ ಹೊಂದಿಲ್ಲ. ಇದರಿಂದ ಬೇಸತ್ತು ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ದಾಸರಬೆಟ್ಟು ಕಡೆಯಿಂದ ಮಂಗಳಪದವು ಮೂಲಕ ಮಂಗಳೂರು, ಕೊಡಾಜೆ, ಮಾಣಿ ಕಡೆಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನೊಂದು ಕಡೆಯಿಂದ ಕಂಬಳಬೆಟ್ಟು-ಪುತ್ತೂರು-ವಿಟ್ಲ ಕಡೆಗೆ ಸಂಪರ್ಕ ಕಲ್ಪಿಸುತ್ತದೆ. ಮಣ್ಣಿ ರಸ್ತೆಯಿಂದ ಈ ರಸ್ತೆಯಲ್ಲಿ ಸಂಪರ್ಕ ಕಷ್ಟಸಾಧ್ಯ. ಬೇಸಿಗೆ ಕಾಲದಲ್ಲಿ ದೂಳಿನಿಂದಲೇ ಜನರು ಜೀವನ ನಡೆಸಬೇಕು. ಇದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ತಕ್ಷಣವೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here