ಬಂಟ್ವಾಳ : ವಿದ್ಯೆ ಕಲಿಸಿದ ಗುರುವನ್ನು ಸಾಕ್ಷಾತ್ ಪರಮಾತ್ಮನೆಂದೇ ಗೌರವಿಸುವ ಸಂಸ್ಕೃತಿ ನಮ್ಮದು. ಗುರು-ಹಿರಿಯರ ಮಾರ್ಗದರ್ಶನವಿಲ್ಲದೇ ರೂಪುಗೊಂಡ ಬದುಕು ನಿರ್ಧಿಷ್ಟ ಗುರಿಯನ್ನು ಮುಟ್ಟಲಾರದು. ಇಂದಿನ ಯಾಂತ್ರಿಕ ಯುಗದಲ್ಲಿ ಗುರುವೆಂದರೆ ಕಂಪ್ಯೂಟರ್, ಮೊಬೈಲ್ ನಂತೆ ದುಡ್ಡು ಕೊಟ್ಟು ಖರೀದಿಸುವ ವಸ್ತುವೋ ಎಂಬ ರೀತಿಯಲ್ಲಿ ನಮ್ಮ ನಡವಳಿಕೆ ಇದೆ. ಇಂತಹ ಸ್ಥಿತಿಯಲ್ಲಿ ಕೆರಂಗೋಡಿ ಕುಟುಂಬಿಕರು ವಿದ್ಯೆ-ಬುದ್ಧಿ ನೀಡಿದ ಗುರುಗಳನ್ನು ಸನ್ಮಾನಿಸಿ ತಮ್ಮ ಸಂಪತ್ತಿನ ಸದ್ವಿನಿಯೋಗ ಮಾಡಿಕೊಂಡು ಒಂದು ಅನುಕರಣೀಯ ಪರಂಪರೆಗೆ ನಾಂದಿ ಹಾಡಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ   ಹೇಳಿದ್ದಾರೆ.
ಅವರು ಬಿ.ಸಿ.ರೋಡಿನ   ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ  ಕೆರೆಂಗೋಡಿ ಮನೆಯವರು ಹಮ್ಮಿಕೊಂಡ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
 ಈ ಸಂದರ್ಭದಲ್ಲಿ ಕಡೇಶಿವಾಲಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದೀರ್ಘ ಕಾಲ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ  ಅಚ್ಚುತ್ತರಾವ್,  ಕೃಷ್ಣ ಭಂಡಾರಿ  ಹಾಗು ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ದೀರ್ಘಕಾಲ ಅದ್ಯಾಪನಾ ವೃತ್ತಿಯನ್ನು ನಡೆಸಿ ನಿವೃತ್ತರಾಗಿದ್ದ  ಮಹಾಬಲೇಶ್ವರ ಹೆಬ್ಬಾರ್ ರವರನ್ನು ಸನ್ಮಾನಿಸಲಾಯಿತು. ಪ್ರಧಾನ ಉಪನ್ಯಾಸಕರಾಗಿ ಆಗಮಿಸಿದ್ದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್, ಮಾತನಾಡುತ್ತಾ, ಗುರುಗಳನ್ನು, ಮಾತೃ ಪಿತೃಗಳನ್ನು, ಹಿರಿಯರನ್ನು ಗೌರವಿಸುವ ಸಂಸ್ಕೃತಿ ನಮ್ಮ ತುಳುನಾಡಿನವರದ್ದು.  ಇಂದಿನ ಯುವಪೀಳಿಗೆ ಇದನ್ನು ನೆನಪಿಟ್ಟು ಮುಂದಡಿ ಇಡುವ ಅಗತ್ಯವಿದೆ ಎಂದರು. ಗುರುವಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಷ ಕುಮಾರ್ ಗುರುಶಾಪ ಹೊಂದಿದ ವ್ಯಕ್ತಿ ಬದುಕಿನಲ್ಲಿ ಎಂದೆಂದೂ ಯಶಸ್ವಿಯಾಗಲಾರ ಎಂದು ಅಭಿಪ್ರಾಯ ಪಟ್ಟರು. ವೇದಿಕೆಯಲ್ಲಿ ಕೆರೆಂಗೋಡಿ ಮನೆತನದ ಹಿರಿಯರಾದ ಕೆ.ಎಂ.ಬಾಲಕೃಷ್ಣ, ವಿವೇಕಾನಂದ ಕಾಲೇಜು ಪುತ್ತೂರಿನ ಪ್ರಾಂಶುಪಾಲರಾದ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಬಿ.ಸಿ.ರೋಡಿನ ಪ್ರಾಂಶುಪಾಲರಾದ ಡಾ.ಅಜೆಕಳ ಗಿರಿಶ್ ಭಟ್ , ಸಿಂಡಿಕೇಟ್ ಬ್ಯಾಂಕ್ ನ ಹಿರಿಯ ಪ್ರಬಂಧಕರಾದ ಮಾದವ ರೈ ಉಪಸ್ಥಿತರಿದ್ದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ  ಅಧ್ಯಕ್ಷ ಪ್ರೊ.ತುಕಾರಾಂ ಪೂಜಾರಿ  ಸ್ವಾಗತಿಸಿ,ಪ್ರಾಸ್ತಾವಿಸಿದರು. ಡಾ.ಆಶಾಲತ ಸುವರ್ಣ ವಂದಿಸಿದರು. ಮಹಾಬಲೇಶ್ವರ ಹೆಬ್ಬಾರ್ ಅವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here