Sunday, October 22, 2023

*ಮಾಡರ್ನ್ ಕವನ* – *ದೂರದೂರಿಗೆ*

Must read

ಮಂಗಳ ಗ್ರಹಕ್ಕೆ
ಸಾಗಬೇಕಿದ್ದ ನನ್ನ ರಾಕೆಟ್
ಬಿದ್ದದ್ದೆ ಬೇರೆ ಗ್ರಹಕ್ಕೆ
ಅದು ಕೂಡ ಮನುಷ್ಯರಿರುವ ಗ್ರಹ…!

ಅದೊಂದು ಭೂಮಿ ಹೋಲುವ ಇನ್ನೊಂದು ಗ್ರಹ
ಅಲ್ಲೂ ಮನುಷ್ಯರಿದ್ದರು.
ಪ್ರಾಣಿ, ಪಕ್ಷಿ, ಮಾನವ ಎಲ್ಲರೂ
ಒಂದೇ ರೀತಿ ಬದುಕುತ್ತಿದ್ದರು
ಅವರಿಗೂ ಭೂಮಿಯೇ ಭೂತಾಯಿ
ನದಿ,ಮರ,ಗಾಳಿ, ಕಲ್ಲೂ ಮಣ್ಣು
ಆ ಸೂರ್ಯ ಚಂದ್ರ
ಎಲ್ಲಾ ದೇವರು..
ಅವರೂ ಬುದ್ದಿವಂತರು
ಆದರೂ ಪ್ರಕೃತಿಯ ವಿರುದ್ಧ ಸಾಗದವರು..!
ಅಲ್ಲಿ ಪ್ರೀತಿಯೊಂದೆ ಉಸಿರು..

ನಾನು ಕಾಲಿಟ್ಟೆ
ಅತಿಥಿ ದೇವೋಭವ ಎಂದು ಗೌರವ ನೀಡಿದರು
ನಾ ಬಂದ ಕಥೆಯ ಹೇಳಿದೆ
ಬಿದ್ದ ರಾಕೆಟ್ ತೋರಿಸಿದೆ
ಈಗಲೇ ಅವರಿಗೂ ಕುತೂಹಲ ಹುಟ್ಟಿದ್ದು
ನಾನು ವಿಜ್ಞಾನ ಪರಿಚಯಿಸಿದ್ದು..!

ಅಲ್ಲಿಂದ ಅಲ್ಲಿ ಬದಲಾವಣೆ ಗಾಳಿ ಬೀಸಿತು
ಮರದ ಪೊಟರೆ,ಗುಹೆ ಮನೆಗಳು ಹೋಗಿ
ಕಾಂಕ್ರೀಟ್ ಮನೆಗಳು ಬಂತು
ಕಾರು ಬೈಕು ಲಾರಿಗಳ ಓಡಾಟ ಶುರುವಾಯಿತು
ಬೋಟು,ವಿಮಾನ ಎಲ್ಲಾ ಉತ್ಪಾದನೆ ಆಯ್ತು
ಫೋನ್ ಮೊಬೈಲ್ ಬಳಕೆಯಾಯಿತು
ಹಕ್ಕಿಯಂತೆ ಹಾರಬಹುದು
ಮೀನಿಂತೆ ಈಜಬಹುದು
ತಿಳಿದದ್ದೇ ಈಗ
ನಮ್ಮದೊಂದು ಗ್ರಹ
ಚಂದ್ರನೊಂದು ಉಪಗ್ರಹ
ಅದರತ್ತ ಸಾಗಬಹುದು
ಆ ಕನಸು ಈಡೇರಿ ಬಿಟ್ಟಿತ್ತು

ಆ ದೂರದೂರ ಬದಲಾವಣೆ ಮಾಡಿದ ಖುಷಿ ಎನಗೆ
ನಾನೇ ಗಾಡ್ ಫಾದರ್ ಅವರಿಗೆ

ಕೆತ್ತಿ ಬಿಟ್ಟರು ಊರಬೆಟ್ಟದಲ್ಲಿ
ನನ್ನದೊಂದು ಮೂರ್ತಿಯ
ಕೆಳಗೆ ಬರೆದಿದ್ದರು..!
ನಮ್ಮೂರ ಅಂದವ ಕೆಡಿಸಿದಾತ
ಪರಿಸರದ ಜೊತೆಗಿನ ಬಾಂಧವ್ಯ
ಕಿತ್ತ ಯಮದೂತ
ಪ್ರೀತಿಗೆ ವಿಷ ನೀಡಿದಾತ
ಹಕ್ಕಿಗಳು ಇವನ ಮೇಲೆ ಕಕ್ಕ ಮಾಡಬೇಕು
ಪ್ರಾಣಿಗಳು ಉಚ್ಚೆ ಹೊಯ್ಯಬೇಕು..!

ಕಳೆದು ಹೋದ ಕಾಲವ ನೆನೆದು ದುಃಖಿತರಾಗಿದ್ದರು
ಹೌದು
ನಾ ಕಾಲಿಡುವ ವರೆಗೆ
ಹಚ್ಚಹಸಿರಿಂದ ನಗುತ್ತಿದ್ದ ನಾಡು
ನಗುವುದನ್ನೇ ತಿಳಿಯದ ಕಾಂಕ್ರೀಟ್
ಗೋಡೆಗಳಾದವು
ಬರೀ ದ್ವೇಷ ತುಂಬಿ ಹೋಯಿತು
ನಾನೇ ಶ್ರೇಷ್ಠ ಆಹಂ ಮೊಳಕೆ ಬಿಟ್ಟಿತು..!

ಹೌದು
ಮಾನವನಿಗೆ ಪ್ರೀತಿ ಎಂದರೇನು
ಗೊತ್ತೇ ಇಲ್ಲ…!

 

✍ಯತೀಶ್ ಕಾಮಾಜೆ

More articles

Latest article