ನೀರಿಲ್ಲದೆ ಪ್ರಾಣಿ ಪಕ್ಷಿ
ಸತ್ತಾಗ
ಮಾನವನ
ಕಣ್ಣೀರ ಧಾರೆ..!

ಜಲಸಂರಕ್ಷಣೆ ಅಧ್ಯಯನ ಮಾಡಿ
ಡಿಗ್ರಿ ಪಡೆದು
ಪಾಠ ಮಾಡಿದವನ ಕೈಯಲ್ಲಿ
ಇತ್ತು ಬಿಸ್ಲೇರಿ ಬಾಟಲ್
ಜಲಸಂರಕ್ಷಣೆ ಕಾನೂನು ಪಾಸ್ ಮಾಡಿದ
ಸರಕಾರಿ ಅಧಿಕಾರಿ ಮನೆಯಲ್ಲಿ
ಇತ್ತು ಬೋರ್‌ವೆಲ್
ಕೇಳಿಸಿಕೊಂಡವರ ಊರ
ಪಕ್ಕದಲ್ಲಿ
ಇತ್ತು ಬತ್ತಿ ಹೋದ ರಿವರ್

ದಿಕ್ಕೆಟ್ಟು ತಲೆ ತಿರುಗಿ ಬಿದ್ದ ಪಕ್ಷಿಯದ್ದು
ನೀರು ಅರಸುತ್ತ ಊರೊಳಗೆ
ನುಗ್ಗಿ ಬಂದ ಪ್ರಾಣಿಗಳದ್ದು
ಕಷ್ಟ ಕೇಳೊರು ಯಾರಿರಲಿಲ್ಲ..!

ಅಲ್ಲಲ್ಲಿ ಕ್ಯಾಮರಾ ಹಿಡಿದು
ಬಿಸಿ ಬಿಸಿ ಸುದ್ದಿ
“ಈ ಬಿಸಿಲಿಗೆ
ಕಾಡು ಬಿಟ್ಟು ನಾಡಿಗೆ ಬರೋ ಪ್ರಾಣಿಗಳು”
‘ಇದೇ ಬ್ರೇಕಿಂಗ್ ನ್ಯೂಸ್’
ಎಂದ ಆ್ಯಂಕರ್.
ಕೈಯಲ್ಲಿ ನೀರು ಬಾಟಲಿ ಹಿಡಿದು
ನೀರಿಲ್ಲದೆ ಸಾಯೋ ಪ್ರಾಣಿಯ
ಕೊನೆಯ ಕ್ಷಣವ ಝೂಮ್ ಮಾಡಿದ ಕ್ಯಾಮರಾ ಮ್ಯಾನ್
‘ಅಯ್ಯೋ ದೇವರೇ’ ಎಂದು ಅತ್ತು
ನೋಡೋ ವೀಕ್ಷಕರು..!

ಮನೆ ಕಟ್ಟಲು ಮರ ಕಡಿದರು
ಕಟ್ಟಡ ಕಟ್ಟಲು ಗುಡ್ಡೆ ಜರಿದರು
ಜಾಗ ಸಾಕಗಲ್ಲ ಎಂದು
ನದಿಗೆ ಮಣ್ಣು ಹಾಕಿದರು
ಬಿದ್ದ ಮರಕಿಷ್ಟು
ಮಾಡಿದ ಸೈಟಿಗಿಷ್ಟು
ರೇಟ್ ಫಿಕ್ಸ್ ಮಾಡಿ ಮಾರಿದ್ದೇ ಮಾರಿದ್ದು
ಈಗ ಮಲೆ ಮಳೆ ಎರಡೂ ಇಲ್ಲ
ಬಂತು ನೀರಿಗೂ ಒಂದಿಷ್ಟು ಬೆಲೆ…

ಕಡಿದು ಕುಡಿದು ತೇಗಿ
ಈಗ ಜಲಸಂರಕ್ಷಣೆಯ ನೆನಪು ಕಾಡುತ್ತಿದೆ..
ಊರೆಲ್ಲ ಬರಗಾಲ..!

 

✍ಯತೀಶ್ ಕಾಮಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here