Wednesday, October 18, 2023

*ಸಿಡಿದೇಳು ಸಾಕಿನ್ನು*

Must read

ನಿನ್ನೊಳದನಿಯ ನಾಲಿಗೆ ಸೀಳಿ
ತಮ್ಮ ತೆವಲಿನಂಗಳದಿ ಬಿಡದೆ ಹರಡಿ
ಸಂಭ್ರಮಪಡುವ ಪಡಪೋಸಿ ಬುದ್ಧಿಯಲೇ
ಮನಸಾರೆ ಮೀಯುವ ಮಾನವಂತರು!

ನಿನ್ನೊಲವ ಪರಮ ಗುರಿಯ ಚೂಪು
ಗೆರೆಯ ಪಲ್ಲವಿಸಿ ಅದರಲೇ ಪವಡಿಸಿ
ದಿಕ್ತಟವ ದಿಕ್ಕುಗೆಡಿಸಿ ಸೊಕ್ಕಿನಲೆ
ಯಲಿ ನಿತ್ಯ ನಿಗುರುತಿರುವ ನೀತಿವಂತರು!

ನಿನ್ನೊಡಲುರಿಯ ಕೆನ್ನಾಲಿಗೆಯ
ಕತ್ತು ಹಿಚುಕಿ ದೋಚಿ ಬೆತ್ತಲೆಯಾಗಿಸಿ
ನೇಣಿಗೇರಿಸಿ ಉನ್ಮತ್ತತೆಯಲಿ ಹಾಡಿ
ಕುಣಿದು ತೇಲಿ ನಲಿವ ದಿವ್ಯ ಪುಣ್ಯವಂತರು!

ನಿನ್ನುಸಿರ ಹಾಡಿಯ ಬೆವರ ಚಪ್ಪರದಡಿ
ಪಾಯ ತೋಡಿ ತಮ್ಮ ಕುಡಿಗಳ ಮಹಲ
ಮಂಟಪಕೆ ವಂದಿ ಮಾಗಧರೊಂದಿಗೆ ಬಾಜಾ
ಭಜಂತ್ರಿ ಸಮೇತ ಧುಮ್ಮಿಕ್ಕುವ ಸತ್ಯವಂತರು!

ನಿನ್ನ ತೋಳ್ಬಲದ ಕಸುವನೆಲ್ಲ ನುಂಗಿ
ನೀರ್ಗುಡಿದು ಪುಂಗಿಯೂದುವ ಮಂಗ
ಬುಧ್ಧಿಯ ಎಡಬಿಡಂಗಿತನದಲೇ ಶತ ಶತ
ಮಾನಗಳ ಭವ್ಯ ಗೋರಿ ಕಟ್ಟಿದ ಭಾಗ್ಯವಂತರು!

ನೀ ಬೀಳು ನಡೆಯಡಿ ನಲುಗುವವರೆಗೂ
ಇವರು ಖೂಳ ಹುಡಿ ಹಾರಿಸುತ್ತಲೇ ನಲಿವರು
ಗಟ್ಟಿಯಾಗಿ ಜಗಜಟ್ಟಿಯಾಗಿ ಮೆಟ್ಟಿ ಬಿಡು
ನೆಟ್ಟಗಾಗಲಿ ಈ ಭ್ರಷ್ಟ ದಟ್ಟದರಿದ್ರ ಪಟ್ಟಭದ್ರರು!

 

#ನೀ.ಶ್ರೀಶೈಲ ಹುಲ್ಲೂರು

More articles

Latest article