Thursday, October 19, 2023

*ಗಾಳಿಯ ಗರ್ವಭಂಗ*

Must read

-ಮಕ್ಕಳ ಕಥನ ಕವನ-

ರಸ್ತೆಯಲ್ಲಿ ಹೊರಟನೋರ್ವ
ಹೊಲದಿ ದುಡಿಯಲು
ಕಂಬಳಿಯ ಹೊದ್ದು ನಡೆದ
ಚಳಿಯ ತಡೆಯಲು

ಅವನ ಕಂಡ ಗಾಳಿ ಮನದಿ
ತವಕಗೊಂಡಿತು
ಸೂರ್ಯನ ಬಳಿ ತನ್ನೆದೆಯ
ಮಾತು ಹೇಳಿತು

ಬೆಳಕು ಕೊಡುವೆ ಬೆಂಕಿ ಕೊಡುವೆ
ಜಗವ ಕಾಯುವೆ
ಅದಕೆ ನೀನು ಎಲ್ಲ ಸಹಿಸಿ
ಮನದಿ ಬೇಯುವೆ

ನಾನು ನಿನಗೆ ಕಡಿಮೆ ಏನು?
ಬಿಡದೆ ಓಡುವೆ
ನೀನು ಹೆಚ್ಚೊ ನಾನು ಹೆಚ್ಚೊ
ಬಾರೊ ನೋಡುವೆ

ಕಂಬಳಿ ಹೊದ್ದವನು ಅದನು
ತೆಗೆದು ಎಸೆಯಲಿ
ಹಾಗೆ ಮಾಡಿದವರಿಗೆ ತಿಳಿ
ಗೆಲುವು ಬಳಿಯಲಿ

ಮೊದಲು ನಾನೆ ನನ್ನ ಶಕ್ತಿ
ನಿನಗೆ ತೋರುವೆ
ಆಗದಿರಲು ನೀನೆ ಮಾಡು
ಎಂದು ಕೋರುವೆ

ಗಾಳಿ ತನ್ನ ಬಲವನೆಲ್ಲ
ಹಾಕಿ ನೋಡಿತು
ಕಂಬಳಿ ಹೊದ್ದವನ ಮೇಲೆ
ಭರದಿ ಓಡಿತು

ಬೀಸಿದಷ್ಟು ಬಿಗಿಯಾಗಿಯವ
ಕಚ್ಚಿ ಹಿಡಿದನು
ಕಂಬಳಿಯ ಬಿಡದೆ ಬೀಸೊ
ಗಾಳಿ ತಡೆದನು

ಸೋತ ಗಾಳಿ ಸಪ್ಪೆ ಮೋರೆ
ಯೊಡನೆ ಬಂದಿತು
ತೋರು ಸೂರ್ಯ ನಿನ್ನ ಶೌರ್ಯ
ಎಂದು ನಿಂದಿತು

ಸೂರ್ಯ ಪ್ರಖರ ಬಿಸಿಲು ಸುರಿಸೆ
ಬಡವ ಬಳಲಿದ
ಧಗೆಯು ತಡೆಯದಾಗೆ
ಒಳಗೆ ತಾನು ತೊಳಲಿದ

ಬಿಸಿಲು ಹೆಚ್ಚಿ ಬೆವರು ಹರಿಯೆ
ಅವನು ಬೆದರಿದ
ಹೊದ್ದುಕೊಂಡ ಕಂಬಳಿಯ
ಒಡನೆ ಒದರಿದ

ಗಾಳಿ ತನ್ನ ಸೋಲನೊಪ್ಪಿ
ಶುಭವ ಹೇಳಿತು
ಸೂರ್ಯನೆದುರು ತಲೆಯ ಬಾಗಿ
ಕ್ಷಮೆಯ ಕೇಳಿತು

 

#ನೀ.ಶ್ರೀಶೈಲ ಹುಲ್ಲೂರು

More articles

Latest article