ಪೆದ್ದ ಗೆಳೆಯರು ಸೇರಿದರು
ಪ್ರವಾಸ ಯೋಜನೆ ಮಾಡಿದರು
ಎಂಕ ತಿಂಮ ಕಾಶೀಮನು ಸೇರಿ
ಹನ್ನೆರಡೂ ಜನ ಕೂಡಿದರು

ಮಂದಿರ ಮಸೀದಿ ಚರ್ಚನು ಸುತ್ತಿ
ನದಿ ಸಾಗರದಿ ಈಜಿದರು
ಅಣೆಕಟ್ಟು ಮೃಗಾಲಯ ತಿರುಗಿ
ಖುಷಿಯಲಿ ಎಲ್ಲ ತೇಲಿದರು
ಪ್ರವಾಸ ಮುಗಿಸಿ ಹೊರಟರು ಎಲ್ಲ
ಹಾಡುತ ಪಾಡುತ ಊರ ಕಡೆ
ಎಂಕನ ತಲೆಯಲಿ ಏನೋ ಹೊಳೆಯಿತು
‘ಎಣಿಸದೆ ನಾನು ನಿಮ್ಮ ಬಿಡೆ’
ಎಣಿಸಿದ ಎಂಕನು ಅಳತೊಡಗಿದನು
ನಾವಿರುವುದು ಹನ್ನೊಂದೆ ಜನ
ತಾ ಎಣಿಸುವೆನು ಎಂದಾ ತಿಂಮನು
ಎಣಿಸಿ ಹೇಳಿದ ಹನ್ನೊಂದೆ ಜನ
ಅವನೂ ಎಣಿಸಿದ ಇವನೂ ಎಣಿಸಿದ
ಎಲ್ಲರೂ ಎಣಿಸಿ ನೋಡಿದರು
ಹನ್ನೆರಡಲ್ಲ ಹನ್ನೊಂದಾಯಿತು
ಯಾರೇ ಎಣಿಸಿ ನೋಡಿದರು
ಎಲ್ಲರೂ ಸೇರಿ ಅಳತೊಡಗಿದರು
ಕಳೆದ ಗೆಳೆಯನ ಅಗಲಿಕೆಗೆ
ಇವರನು ನೋಡಿದ ಹಿರಿಯನು ಬಂದನು
ಕಾರಣ ಕೇಳಿದ ಅಳುವಿಕೆಗೆ
ಬಂದ ಗೆಳೆಯರಲಿ ಒಬ್ಬನೆ ಇಲ್ಲ
ಹೇಳಿದರೆಲ್ಲ ತಮ್ಮ ಕತೆ
ಹಿರಿಯನು ಸಾಲಲಿ ನಿಲಿಸಿದ ಅವರನು
ಎಣಿಸುವೆನಿರಿ ನಾ ಬೇಡ ವ್ಯಥೆ
ಎಣಿಸಿ ನೋಡಲು ಹನ್ನೆರಡೂ ಜನ
ಇರುವುದ ತಿಳಿದು ಹೇಳಿದನು
ನೀವೇ ಎಣಿಸಿರಿ ಒಂದು.. ಎರಡು..
ಬರುವುದೆ ನಿಮಗೆ? ಕೇಳಿದನು
ಎಣಿಸಲು ತಾವೇ ಹನ್ನೆರಡೂ ಜನ
ಇರುವುದ ಕಂಡು ಹಿಗ್ಗಿದರು
ತಂಮನು. ಬಿಟ್ಟೇ ಎಣಿಸಿದ ತಪ್ಪಿಗೆ
ನಾಚಿಕೆಯಿಂದ ಕುಗ್ಗಿದರು
#ನೀ.ಶ್ರೀಶೈಲ ಹುಲ್ಲೂರು