ಹೀಗೊಂದು ತಿರುವು
ಬೇಕಾಗಿರಲಿಲ್ಲ ಬಾಳಿನಲಿ
ನಡೆದುಬಂದ ದಾರಿಯ
ನೆನಪು ಮಾತ್ರ ಮನದಲ್ಲಿ!



ನೀ ಮುಸ್ಲಿಂ, ನಾ ಹಿಂದು
ಮಾತೆಂದೂ ಬಂದಿರಲಿಲ್ಲ
ನಮ್ಮ ನಡುವಲಿ
ಚಿನ್ನಿದಾಂಡು, ಲಗೋರಿಯಲಿ
ಮೈ ಮರೆತಿದ್ದೆವು ಬಾಲ್ಯದಲಿ!
ನಮ್ಮನೆ ದೀಪಾವಳಿಗೆ ನೀನೇ ಅತಿಥಿ..
ನಿಮ್ಮನೆ ಈದ್ಮಿಲಾದ್ಗೆ ಮನೆಯವರಿಗೆಲ್ಲ
ನಾನೇ ಗೆಳತಿ!
ತುಪ್ಪದೂಟದ ಸವಿಯು ಮರೆತು ಹೋಗಿಲ್ಲ
ಪಾಯಸದ ಕಂಪು ಮಾಸಿ ಹೋಗಿಲ್ಲ!
ಬೆಳೆದುಬಿಟ್ಟೆವು ನೋಡು
ಸಮಾಜದ ಜೊತೆಗೆ ನಾವೂ ಕೂಡ
ಜಾತಿ, ಧರ್ಮದ ವಿಷಬೀಜ
ಹೆಮ್ಮರವಾಯಿತಲ್ಲ ಗೆಳೆಯಾ ?
ನೀ ನನ್ನ ನೋಡಿ ನಸುನಕ್ಕರೂ
ರುದ್ರತಾಂಡವ ಸುತ್ತಮುತ್ತಲೆಲ್ಲ..
ಸುಂದರ ಸ್ನೇಹ ಬಾಂಧವ್ಯಕೆ
ಜಾತಿಯೇ ಮುಳ್ಳಾಯಿತಲ್ಲ ?
ಪ್ರಪಂಚದ ಗೊಡವೆನೇ ನಮಗೆ ಬೇಡ
ಬಾ ಮತ್ತೊಮ್ಮೆ ಮಕ್ಕಳಾಗಿಬಿಡೋಣ
ರಕ್ತಪಿಪಾಸುಗಳ ಹಂಗೇ ನಮಗೆ ಬೇಡ
ಮುಗ್ಧತೆಯ ಲೋಕದಿ ಹಕ್ಕಿಗಳಂತೆ ವಿಹರಿಸೋಣ!!
*ಪ್ರಮೀಳಾ ರಾಜ್*