ಬಂಟ್ವಾಳ: ಲೋಕಕಲ್ಯಾಣಾರ್ಥವಾಗಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪೆರಿಯೋಡಿಬೀಡಿನ ಬಾಕಿಮಾರು ಗದ್ದೆಯಲ್ಲಿ ಎ.7 ರಂದು ಕಶೆಕೋಡಿ ಸೂರ್ಯ ನಾರಾಯಣ ಭಟ್ ಅವರ ನೇತೃತ್ವದಲ್ಲಿ ಶ್ರೀ ರಾಮನಾಮತಾರಕ ಜಪ ಯಜ್ಙ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ತಿಳಿಸಿದ್ದಾರೆ. ಗುರುವಾರ ಸಂಜೆ ಕಳ್ಳಿಗೆ ಗ್ರಾಮದ ಪೆರಿಯೋಡಿ ಬೀಡಿನ ಬಾಕಿಮಾರು ಗದ್ದೆಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳ್ಳಿಗೆ, ತುಂಬೆ, ಪುದು, ಕೊಡ್ಮಾಣ್, ಮೇರಮಜಲು ಈ 5 ಗ್ರಾಮವನ್ನೊಳಗೊಂಡು ಶ್ರೀ ರಾಮನಾಮತಾರಕ ಜಪಯಜ್ಙ ವನ್ನು ಆಯೋಜಿಸಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಐದು ಗ್ರಾಮಗಳನ್ನು ಸೇರಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.



ಈ ಯಾಗದಲ್ಲಿ 5 ಗ್ರಾಮಗಳ ಪರಿಸರದ ಪ್ರತಿಯೊಂದು ಹಿಂದುಗಳು ತಮ್ಮ ಮನೆಗಳಲ್ಲಿ 21 ದಿನಗಳಲ್ಲಿ ರಾಮನಾಮತಾರಕ ಜಪನಡೆಸಿ ಒಟ್ಟು ಕೋಟಿ ಜಪಮಾಡುವ ಸಂಕಲ್ಪ ಮಾಡಿದ್ದು, ಈಗಾಗಲೇ ನೋಂದಣಿಯಾಗಿರುವ 432 ಕುಟುಂಬಗಳಿಗೆ 4 ಅವೃತ್ತಿಯಲ್ಲಿ ಯಜ್ಙಕ್ಕೆ ಹವಿಸ್ಸು ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಒಳ್ಳೆಯ ಸಂಸ್ಕಾರವನ್ನು ನೀಡಬೇಕು, ಧಾರ್ಮಿಕ ಮನೋಭಾವವನ್ನು ಬೆಳೆಸಬೇಕು, ಲೋಕಹಿತಕ್ಕೋಸ್ಕರ ನಾವೇನಾದರೂ ಮಾಡಬೇಕೆಂಬ ಮನೋಭಾವ ಮೂಡಿಸಬೇಕೆಂಬ ಉದ್ದೇಶದೊಂದಿಗೆ ಶ್ರೀ ರಾಮ ನಾಮ ತಾರಕ ಜಪ ಯಜ್ಞ ನಡೆಸಲಾಗುತ್ತಿದೆ ಎಂದ ಅವರು, ಈಗಾಗಲೇ ಸುತ್ತಲಿನ ಗ್ರಾಮಗಳಲ್ಲಿ ವಿವಾಹ ಸಮಾರಂಭದಲ್ಲಿ ಸಂಸ್ಕಾರಯುತವಾದ ಬದಲಾವಣೆಗಳು ಕಂಡಿದೆ ಎಂದರು.
ಯಾಗದ ವೈಶಿಷ್ಟ: ಸುಮಾರು 3600 ಚದರ ಅಡಿಯ ವಿಸ್ತೀರ್ಣದ ಅಂತರ ಚಪ್ಪರದ ಸಂಪ್ರಾದಾಯಿಕ ಯಜ್ಞ ಮಂಟಪ, ದಶಾವತಾರ ನೆನಪಿಸುವ 10 ಯಜ್ಞ ಕುಂಡಗಳು, 432 ಮಂದು ಯಜ್ಞೆ ದೀಕ್ಷಿತರಿಂದ ವೈದಿಕ ಸಹಕಾರದೊಂದಿಗೆ ಯಜ್ಞ ಸಂಪನ್ನ, 2400 ಮಂದಿ ನಾಮಜಪ ಸೇವಾಕಾರ್ಯಕರ್ತರ ಭಾಗವಹಿಸುವಿಕೆ ಸುಮಾರು ಏಳು ಸಾವಿರ ರಾಮಭಕ್ತರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದ್ದು, ಒಂದು ಎಕ್ರೆ ಪ್ರದೇಶದಲ್ಲಿ ಸಭಾಂಗಣ, ಊಟೋಪಚಾರ , ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಹೊರೆಕಾಣಿಕೆ: ಫರಂಗಿಪೇಟೆ ವರದೇಶ್ವರ ದೇವಸ್ಥಾನದಿಂದ ಕಳ್ಳಿಗೆ ಬೀಡುವಿಗೆ ಹಸಿರುಹೊರೆಕಾಣಿಕೆ ಸಮರ್ಪಣೆಯ ಶೋಭಾಯಾತ್ರೆಯು ಎಪ್ರಿಲ್ 5 (ಶುಕ್ರವಾರ) ರಂದು ಸಂಜೆ 4 ಗಂಟೆಗೆ ಹೊರಡಲಿದೆ ಎಂದರು. ಎ.6 ರಂದು ಯುಗಾದಿಯ ಪ್ರಯುಕ್ತ 5 ಗ್ರಾಮಗಳಲ್ಲಿ ವಿಶೇಷ ಸಾಮೂಹಿಕ ರಾಮನಾಮಜಪ, ಸಂಜೆ ವೈಧಿಕ ಕಾರ್ಯಕ್ರಮ ನಡೆಯುವುದು, ಎ.7 ರಂದು ಬೆಳಿಗ್ಗೆ ಯಜ್ಞಾರಂಭ, ಪೂರ್ಣಾಹುತಿ, ಮಂಗಳಾರತಿ ನಂತರ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸುಧರ್ಮ ಸಭೆಯಲ್ಲಿ ಆಧ್ಯಾತ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ ಭಟ್ ಶ್ರೀ ರಾಮ ಪಥದರ್ಶನದ ಮಾಡಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆಯ ನಂತರ ಪುತ್ತೂರು ಜಗದೀಶ್ ಆಚಾರ್ಯರವರಿಂದ ಭಕ್ತಿಗಾನ ವೈಭವ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ದಾಮೋದರ ನೆತ್ತರಕೆರೆ, ವಿವಿಧ ಸಮಿತಿ ಪ್ರಮುಖರಾದ ದೇವಸ್ಯ ಪ್ರಕಾಶ್‌ಚಂದ್ರ ರೈ, ಎಂ. ಆರ್. ನಾಯರ್, ಪ್ರವೀಣ್ ಜ್ಯೋತಿಗುಡ್ಡೆ, ಪದ್ಮನಾಭ ರಾವ್, ದಯಾನಂದ ಜಾರಂದಗುಡ್ಡೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಶ್ರೀಕಾಂತ್, ಚೇತನ್ ಮುಂಡಾಜೆ , ಪದ್ಮನಾಭ ಶೆಟ್ಟಿ ಪುಂಚಮೆ, ಮಾಧವ ವಳವೂರು, ಸಂತೋಷ್ ಕೊಡ್ಮಾಣ್, ಮನೋಹರ ಕಂಜತ್ತೂರು, ಯೋಗೀಶ್ ಕುಮ್ಡೇಲು ಮೊದಲಾದವರು ಉಪಸ್ಥಿತರಿದ್ದರು.