ಬಂಟ್ವಾಳ: ಭಾರತೀಯರಾಗಿ ಹುಟ್ಟಿ ಭಾರತದ ಸಂಸ್ಕೃತಿಯನ್ನೇ ಮರೆತು ಬೇರೆ ದೇಶದ ವ್ಯಾಮೋಹದಿಂದಾಗಿ ಅಲ್ಲಿನ ಜೀವನ ಶೈಲಿಯನ್ನು ಅನುಸರಿಸಲು ಹಂಬಲಿಸುವ ಇಂದಿನ ಯುವಪೀಳಿಗೆಯೇ ಹೊರಜಗತ್ತಿನಲ್ಲಿ ಕಾಣಸಿಗುವ ಈ ದಿನಗಳಲ್ಲಿ ನನಗೆ ಭಾರತದ ನಿಜವಾದ ಸೌಂದರ್ಯ, ಸಂಸ್ಕೃತಿಯ ಚಿತ್ರಣ ಕಣ್ಣ ಮುಂದೆ ಬಂದಂತೆ ಈ ವಿದ್ಯಾಸಂಸ್ಥೆಯ ವಾತಾವರಣ ಹಾಗೂ ಇಲ್ಲಿನ ಶಿಕ್ಷಣದ ವ್ಯವಸ್ಥೆಯನ್ನು ನೋಡಿ ಬಳಿಕ ನನಗೆ ಭಾಸವಾಯಿತು ಎಂದು ತುಳು ರಂಗಭೂಮಿ ನಟ ಚಲನಚಿತ್ರ ಕಲಾವಿದ ಅರವಿಂದ ಬೋಳಾರ್ ನುಡಿದರು.

ಅವರು ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2018-19ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ನಿಮಿತ್ತ ನಡೆದ ಪ್ರತಿಭಾ ದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವಿದ್ಯಾಸಂಸ್ಥೆಗೆ ಕಾಲಿಟ್ಟ ಕೂಡಲೇ ತಾಯಿ ಶಾರದಾ ಮಾತೆಯ ಮಡಿಲಿಗೆ ಸೇರಿದ ಅನುಭವವಾಯಿತು. ಎಳೆಯ ವಯಸ್ಸಿನಲ್ಲಿಯೇ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತೆಗೆಯುವ ವಿಭಿನ್ನ ರೀತಿಯ ಶಿಕ್ಷಣ ಪದ್ಧತಿ ಹಾಗೂ ಮಕ್ಕಳಲ್ಲಿನ ಶಿಸ್ತು ಕಂಡು ಭಾರತದ ಸಂಸ್ಕೃತಿ -ಸಂಪ್ರದಾಯ ಮುಂದಿನ ಪೀಳಿಗೆ ಕೂಡ ಪಡೆಯುವ ದೃಡತೆ ನನ್ನ ಮನಸ್ಸಿಗೆ ಬಂತು. ಯಾಕೆಂದರೆ ಅಂತಹ ಸುಸಂಸ್ಕೃತ ಶಿಕ್ಷಣ ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ಸಿಗುತ್ತಿರುವುದು ಹೆಮ್ಮೆಯ ಸಂಗತಿ. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮೆಲ್ಲಾ ಸಾಧನೆಗೆ ಮೆಟ್ಟಿಲಾದ ತಂದೆ ತಾಯಿ, ಗುರು ಹಿರಿಯರಿಗೆ ಗೌರವ ನೀಡಿ ಬದುಕುವುದೇ ನಿಜವಾದ ಯಶಸ್ಸು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಭಾರತ ಇಂದು ಜಗತ್ತಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಬೆಳೆದು ನಿಂತಿರುವ ಪ್ರಮುಖ ರಾಷ್ಟ್ರಗಳ ಪೈಕಿ ಒಂದಾಗಿದೆ. ಇಲ್ಲಿನ ವಿಜ್ಞಾನಿಗಳ ಸಾಧನೆ ದೇಶದ ಎತ್ತರವನ್ನು ಇನ್ನಷ್ಟು ಮೇಲಕ್ಕೇರಿಸಿರುವುದು ಹೆಮ್ಮೆಯ ವಿಷಯ. ಇಂತಹ ಜ್ಞಾನಿಗಳ ಪರಂಪರೆಯೇ ನಮ್ಮದು ಎಂಬ ಭಾವ ಸದಾ ನಮ್ಮಲ್ಲಿರಲಿ ಎಂದರು.
ವೇದಿಕೆಯಲ್ಲಿ ವಿವೇಕಾನಂದ ಕಾಲೇಜು ಪುತ್ತೂರು ಇದರ ಸಂಚಾಲಕ ಜಯರಾಮ ಭಟ್, ಶ್ರೀರಾಮ ಕಾಲೇಜು ಅಭಿವೃದ್ಧಿ ಸಮಿತಿ ಕಲ್ಲಡ್ಕ ಇದರ ಅಧ್ಯಕ್ಷ ಶಶಿಧರ ಮಾರ್ಲ, ವಿವೇಕಾನಂದ ಕಾಲೇಜು ಪುತ್ತೂರು ಇದರ ಆಡಳಿತ ಮಂಡಳಿ ಸದಸ್ಯೆ ಶೋಭಾ ಕೊಳತ್ತಾಯ, ಮಂಗಳೂರಿನ ಸಿವಿಲ್ ಇಂಜಿನಿಯರ್ ರಾಮ ಪ್ರಸಾದ್ ಕೊಂಬಿಲ, ಗಣೇಶ್ ಮೆಡಿಕಲ್ಸ್ ಕಲ್ಲಡ್ಕ ಇದರ ಮಾಲಕ ಚಂದ್ರಶೇಖರ ರೈ, ಕಲ್ಲಡ್ಕ ರಸಗೊಬ್ಬರ ವ್ಯಾಪಾರಸ್ಥ ನಾರಾಯಣ ನಾಯಕ್ ದಂಡೆಮಾರ್ ಮತ್ತು ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್. ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಪ್ರದೀಪ್ತ ಸಾಂಸ್ಕೃತಿಕ ಸಂಘ ಹಾಗೂ ಪ್ರತಾಪ ಕ್ರೀಡಾ ಸಂಘದ ವತಿಯಿಂದ ನಡೆದ ವಿವಿಧ ಸ್ಪರ್ದೆಗಳ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಬಹುಮಾನ ಪಟ್ಟಿಯನ್ನು ಉಪನ್ಯಾಸಕರಾದ ಶುಭಲತಾ, ಶೈಲಜಾ ಹಾಗೂ ಗಂಧರ್ವ ವಾಚಿಸಿದರು.
ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಪೂಜನೃತ್ಯ, ಕಂಸಾಳೆ, ರಾಜಸ್ಥಾನದ ಬಂಜಾರ, ಗುಜರಾತಿನ ದಾಂಡೀಯ, ಶಿವತಾಂಡವ, ಯಕ್ಷಗಾನ ಮುಂತಾದ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.
ಪ್ರಾಂಶುಪಾಲ ಕೃಷ್ಣಪ್ರಸಾದ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಸಂತೋಷ್ ವಂದಿಸಿ, ವರದರಾಜ್, ಜಯರಾಜ್ ಕಾರ್ಯಕ್ರಮ ನಿರ್ವಹಿಸಿದರು.