ಬಂಟ್ವಾಳ: ಜೈ ಹಿಂದ್ ಕ್ರಿಕೆಟರ್‍ಸ್ ಬಂಟ್ವಾಳ ವತಿಯಿಂದ ಆಹ್ವಾನಿತ ತಂಡಗಳ ಬಿಪಿಎಲ್ 2019 ಕ್ರಿಕೆಟ್ ಪಂದ್ಯಾಟ ಮತ್ತು ಜಿ ಎಸ್ ಬಿ ಫುಡ್ ಫೆಸ್ಟಿವಲ್ ಏಪ್ರಿಲ್ 6 ಮತ್ತು 7ರಂದು ಬಂಟ್ವಾಳ ಎಸ್. ವಿ.ಎಸ್.ಹೈ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೈಹಿಂದ್ ಕ್ರಿಕೆಟಸ್೯ ಪ್ರಧಾನ ಕಾರ್ಯದರ್ಶಿ ಗಿರೀಶ್ ಪೈ, ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಲಿದ್ದು, ಇದು ಜಿಎಸ್‌ಬಿ ಬಾಂಧವರಿಗೆ ಒಳಪಟ್ಟ ಪಂದ್ಯಾಟ ಎಂದರು. ಮಾಣೂರು ಲಕ್ಷ್ಮಣ ಕಾಮತ್ ಸ್ಮರಣಾರ್ಥ ನಡೆಯುವ ಈ ಕೂಟದಲ್ಲಿ 6 ತಂಡಗಳು ಹೊನಲು ಬೆಳಕಿನಲ್ಲಿ ಸೆಣಸಲಿದ್ದು, ಮೊದಲ ಬಹುಮಾನವಾಗಿ 30,501, ಎರಡನೇ ಬಹುಮಾನವಾಗಿ 20,501 ರೂ ಮತ್ತು ಫಲಕಗಳನ್ನು ನೀಡಲಾಗುವುದು. ಉದ್ಘಾಟನಾ ಪಂದ್ಯಾಟವಾಗಿ ಗುರುಪುರ ಗ್ಲೇಡಿಯೇಟರ್‍ಸ್ ಮತ್ತು ಪಾಣೆಮಂಗಳೂರು ರೈಡರ್‍ಸ್ ತಂಡದ ಮಹಿಳಾ ಕ್ರೀಡಾಳುಗಳ ನಡುವೆ ಪಂದ್ಯಾಟ ನಡೆಯುವುದು. 6ರಂದು ಸಂಜೆ ಉದ್ಘಾಟನಾ ಸಮಾರಂಭ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಎಸ್.ವಿ.ಎಸ್.ದೇವಳ ವಿದ್ಯಾಸಂಸ್ಥೆಗಳ ಸಂಚಾಲಕ ಗೋವಿಂದ ಪ್ರಭು ಸಹಿತ ಗಣ್ಯರು ಪಾಲ್ಗೊಳ್ಳುವರು. ಫುಡ್ ಫೆಸ್ಟಿವಲ್ ನಲ್ಲಿ ಸಸ್ಯಾಹಾರಿ ವಿಶೇಷ ಖಾದ್ಯಗಳು ಇರಲಿದ್ದು, ಸುಮಾರು 1 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಅವರು ವಿವರಿಸಿದರು. ಈ ಸಂದರ್ಭ ಜೈಹಿಂದ್ ಕ್ರಿಕೆಟರ್‍ಸ್ ಅಧ್ಯಕ್ಷ ಅರ್ಜುನ್ ಭಂಡಾರ್‌ಕಾರ್, ಪ್ರಮುಖ ಆಯೋಜಕರಾದ ಪಾಂಡುರಂಗ ಶೆಣೈ ಉಪಸ್ಥಿತರಿದ್ದರು.


