ಬಂಟ್ವಾಳ: ಎ. 18ರ ಬೆಳಗ್ಗೆ 7ಗಂಟೆಯಿಂದ ಆರಂಭಗೊಳ್ಳುವ ಲೋಕಸಭಾ ಚುನಾವಣೆಯ ಮಸ್ಟರಿಂಗ್ ಕಾರ್ಯ ಬುಧವಾರ ಮೊಡಂಕಾಪು ಶಾಲೆಯಲ್ಲಿ ನಡೆಯಿತು.
ರಾಜ್ಯ ಚುನಾವಣಾ ಪರಿವೀಕ್ಷಕರು ಬೆಳಿಗ್ಗೆಯಿಂದಲೇ ಮೊಡಂಕಾಪುವಿಗೆ ಆಗಮಿಸಿ, ಜಿಪಂ ಸಿಇಒ ಡಾ. ಸೆಲ್ವಮಣಿ, ಎಆರ್‌ಒ ಮಹೇಶ್, ತಹಶೀಲ್ದಾರ್ ಸಣ್ಣ ರಂಗಯ್ಯ ಮತ್ತು ತಾಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರಿಂದ ಮಸ್ಟರಿಂಗ್ ಕಾರ್ಯದ ಮಾಹಿತಿ ಪಡೆದರು.


ಶಾಂತಿಯುತ ಮತದಾನಕ್ಕೆ ಹೆಚ್ಚಿನ ಬಂದೋಬಸ್ತ್ ಕಾರ್ಯಗಳನ್ನು ನಡೆಸಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆಯಲಿದೆ. ಚುನಾವಣೆಗೆ ತಾಲೂಕು ಆಡಳಿತ ಸಂಪೂರ್ಣವಾಗಿ ಸಜ್ಜಾಗಿದೆ. ಯಾವುದೇ ಬೂತ್‌ಗಳಲ್ಲಿ ಗೊಂದಲಗಳ ನಡೆಯದಂತೆ ಹೆಚ್ಚಿನ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚಿನ ನಿಗಾ ವಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಡಾ.ಸೆಲ್ವಮಣಿ ಮಾಹಿತಿ ನೀಡಿದರು.

ಬಂಟ್ವಾಳದಲ್ಲಿ 2,22,166 ಮತದಾರರು:
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,22,166 ಮತದಾರರಿದ್ದು, 1,09,351 ಪುರುಷ ಹಾಗೂ 1,12,810 ಮಹಿಳಾ ಮತದಾರಿದ್ದು, ಐವರು ಇತರ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 249 ಮತಗಟ್ಟೆಗಳಿವೆ.
ಇವುಗಳಲ್ಲಿ 85 ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ ವಿಂಗಡಿಸಿ ಗುರುತು ಮಾಡಲಾಗಿದೆ. 35 ಮತಗಟ್ಟೆಗಳಲ್ಲಿ ಮೈಕ್ರೋ ಅಫೀಸರ್‌ಗಳನ್ನು ನೇಮಕ ಮಾಡಲಾಗಿದೆ. ಅದೇ ರೀತಿ 17 ಕಡೆಗಳಲ್ಲಿ ನೇರವಾಗಿ ವೆಬ್ ಕಾಸ್ಟಿಂಗ್ ಸಿಸ್ಟೆಮ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ವಿಶೇಷವಾಗಿ 15 ಮತಗಟ್ಟೆಗಳ ಕಡೆಗಳಲ್ಲಿ ಪೂರ್ಣ ಪ್ರಮಾಣದ ವೀಡಿಯೋ ಗ್ರಾಫರ್‌ಗಳನ್ನು ನೇಮಿಸಲಾಗಿದೆ ಎಂದು ಎಆರ್‌ಒ ಮಹೇಶ್ ಮಾಹಿತಿ ನೀಡಿದರು.
ಬಂಟ್ವಾಳದ ಬೂತ್ ನಂ. 61 ಅನ್ನು ಪಿಂಕ್ ಬೂತ್ ಎಂದು ಪರಿಗಣಿಸಿ ಅಲ್ಲಿಗೆ ವಿಶೇಷವಾಗಿ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ.
ಪ್ರತಿ ಬೂತ್‌ಗಳಲ್ಲಿ ಬಿಎಲ್‌ಒ ಹಾಗೂ ಬೂತ್ ಲೆವಲ್ ಅಸಿಸ್ಟೆಂಟ್ ಅನ್ನು ನೇಮಕ ಮಾಡಲಾಗಿದೆ. ವಿಶೇಷ ಚೇತನರಿಗೆ ವೀಲ್ ಚೇರ್ ಕೂಡಾ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿರುವ ಸಿಬ್ಬಂದಿಗಳಿಗೆ ನೀರಿನ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಬಂಟ್ವಾಳ ಕ್ಷೇತ್ರದ 249 ಮತಗಟ್ಟೆಗಳಿಗೆ ಮತಗಟ್ಟೆಯ ಸಿಬ್ಬಂದಿಗಳು ಮತದಾನ ಪ್ರಕ್ರಿಯೆಗೆ ಬೇಕಾದ ಇವಿಎಂ ಯಂತ್ರಗಳ ಸಹಿತ ನಾನಾ ಸಿದ್ಧತೆಗಳನ್ನು ಪರಿಶೀಲಿಸಿ ತಮ್ಮ ಬೂತ್‌ಗಳಿಗೆ ತೆರಳಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here