ಬಂಟ್ವಾಳ: ಕೇಂದ್ರ ಸರಕಾರದಿಂದ ಒಂದೇ ಒಂದು ಯೋಜನೆಯನ್ನು ಜಿಲ್ಲೆಗೆ ತರಲು ವಿಫಲರಾದ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಈ ಬಾರಿ ಮತ ಕೇಳುವ ನೈತಿಕತೆ ಇದೆಯೇ ಎಂದು ಸಚಿವ ಯು.ಟಿ.ಖಾದರ್ ಅವರು ಪ್ರಶ್ನಿಸಿದ್ದಾರೆ.
ತುಂಬೆ ವಲಯ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಗುರುವಾರ ನಡೆದ ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಗಮನ ಸೆಳೆಯುವ ಅರ್ಹತೆ ನಳಿನ್ ಕುಮಾರ್ ಕಟೀಲ್ ಗೆ ಇಲ್ಲದ್ದನ್ನು ಜನ ಗಮನಿಸಿ ಈ ಬಾರಿ ಬಿಜೆಪಿಗೆ ಅಚ್ಚರಿಯಾಗುವಂತೆ ಫಲಿತಾಂಶ ನೀಡಲಿದ್ದಾರೆ ಎಂದವರು ತಿಳಿಸಿದರು.
ಈ ಜಿಲ್ಲೆಗೆ ಬುದ್ಧಿವಂತ, ವಿದ್ಯಾವಂತ, ಪ್ರಜ್ಞಾವಂತ ಸಂಸದರ ಅಗತ್ಯಯಿದ್ದು, ಮಿಥುನ್ ರೈ ಎಲ್ಲ ರೀತಿಯಲ್ಲೂ ಸಮರ್ಥರಾಗಿದ್ದು, ಮತದಾರರು ಮಿಥುನ್ ಪರ ಇರುವುದಾಗಿ ಭರವಸೆ ನೀಡಿದರು.
ಬಳಿಕ ತುಂಬೆ ವ್ಯಾಪ್ತಿಯಲ್ಲಿ ಸಚಿವ ಖಾದರ್ ಮನೆ ಮನೆ ಭೇಟಿ ನಡೆಸಿ ಮಿಥುನ್ ಪರ ಮತಯಾಚನೆ ನಡೆಸಿದರು. ಪಕ್ಷ ಮುಖಂಡರಾದ ಯು.ಕೆ. ಮೋನ್, ಚಂದ್ರಪ್ರಕಾಶ್ ಶೆಟ್ಟಿ, ಗೋಪಾಲಕೃಷ್ಣ ತುಂಬೆ, ಗಣೇಶ ಸುವರ್ಣ, ಮೋನಪ್ಪ ಮಜಿ, ಡಾ.ಅಮೀರ್ ತುಂಬೆ ಈ ಸಂದರ್ಭದಲ್ಲಿ ಹಾಜರಿದ್ದರು.
