ಬಂಟ್ವಾಳ : ಇತಿಹಾಸವೆಂದರೆ ಕೇವಲ ರಾಜ ಮಹಾರಾಜರ ಸಾಧನೆ ಸಾಹಸಗಳ ದಾಖಲೆ ಎಂದು ಭ್ರಮಿಸಿದ ಕಾಲವೊಂದಿತ್ತು. ಆದರೆ, ಬದಲಾದ ಈ ಕಾಲ ಘಟ್ಟದಲ್ಲಿ ಇತಿಹಾಸದ ಬಗೆಗಿನ ದೃಷ್ಟಿಕೋನವೂ ಬದಲಾಗಿದೆ ಎಂದು ಪುತ್ತೂರಿನ ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದ್ದಾರೆ.
ಅವರು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ.ತುಕಾರಾಂ ಪೂಜಾರಿ ಹಾಗೂ ಡಾ.ಆಶಾಲತ ಸುವರ್ಣ ಅವರು ಸಂಪಾದಿಸಿ ಪ್ರಕಟಿಸಿದ “ಭೌತಿಕ ಶೋಧ ಸ್ವರೂಪ ಮತ್ತು ತಾತ್ವಿಕತೆ” ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಇದೀಗ ಸಾಮಾನ್ಯರೂ ಇತಿಹಾಸದ ಒಂದು ಭಾಗ. ಅವರ ಬೇಕು ಬೇಡಗಳ, ದುಃಖ ದುಮ್ಮಾನಗಳ ಅಥವಾ ಅವರ ಕೊಡುಗೆಗಳು ದಾಖಲಾಗದೇ ಹೋದಲ್ಲಿ ಅದು ಪರಿಪೂರ್ಣ ಇತಿಹಾಸವೆನಿಸಲಾರದು ಎಂದು ಅಭಿಪ್ರಾಯಪಟ್ಟರು.
ಬಿ.ಸಿ.ರೋಡಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ಭಟ್ ಅಜೆಕ್ಕಳ ಅವರು ಕೃತಿಯ ಕುರಿತಾಗಿ ಮಾತನಾಡಿ, ದಾಖಲೆಗಳ ಆಧಾರದಲ್ಲಿ ರಚಿಸಲಾಗುವ ಇತಿಹಾಸದಲ್ಲಿ ಘಟನಾವಳಿಗಳಿಗಷ್ಟೇ ಸೀಮಿತವಾಗಿರುತ್ತದೆ. ಈ ಸಾಂಪ್ರದಾಯಿಕ ಮಾದರಿಯ ಇತಿಹಾಸದ ರಚನೆಯ ಹೊರತಾಗಿಯೂ ಚರಿತ್ರೆ ರಚನೆ ಸಾಧ್ಯ ಎಂಬುವುದನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ವಿವಿಧ ವಿದ್ವಾಂಸರುಗಳ ಪ್ರಬುದ್ಧ ಲೇಖನಗಳನ್ನೊಳಗೊಂಡ ಈ ಕೃತಿಯು ಒಂದು ಅಮೂಲ್ಯ ಸಂಶೋಧನಾ ಕೃತಿಯಾಗಿ ಮೂಡಿಬಂದಿದೆ ಎಂದು ಅಭಿಪ್ರಾಯಪಟ್ಟರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಹಿರಿಯ ಸಾಹಿತಿ    ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ ವಹಿಸಿದ್ದರು.    ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ.ಗಣೇಶ್ ಅಮೀನ್ ಸಂಕಮಾರ್, ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ.ಶ್ರೀಷ ಕುಮಾರ್, ಕೆ.ಎಂ.ಬಾಲಕೃಷ್ಣ, ಕೃತಿಯ ಸಂಪಾದಕರಾದ ಪ್ರೊ.ತುಕಾರಾಂ ಪೂಜಾರಿ ಮತ್ತು ಡಾ ಆಶಾಲತಾ ಸುವರ್ಣ ಉಪಸ್ಥಿತರಿದ್ದರು.
ಮಹಾಬಲೇಶ್ವರ ಹೆಬ್ಬಾರ್ ಸ್ವಾಗತಿಸಿ, ವಂದಿಸಿದರು. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಕ್ಯುರೇಟರ್ ನಯನ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here