Tuesday, September 26, 2023

ಬಿಎಸ್ಸೆನ್ನೆಲ್ ಗುತ್ತಿಗೆ ನೌಕರರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

Must read

ಬಂಟ್ವಾಳ: ಆರು ತಿಂಗಳ ವೇತನ ಬಾಕಿಯಿರುವ ಹಿನ್ನೆಲೆಯಲ್ಲಿ ಬಿಎಸ್ಸೆನ್ನೆಲ್ ದೂರವಾಣಿ ಎಕ್ಸೆಂಜ್‌ನ ಬಂಟ್ವಾಳ ತಾಲೂಕು ಗುತ್ತಿಗೆ ಕಾರ್ಮಿಕರು ಕುಟುಂಬ ಸಹಿತ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದೆ.
ಈ ಬಗ್ಗೆ ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರು ಸೋಮವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ತಮ್ಮ ಒಮ್ಮತ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬಂಟ್ವಾಳ ತಾಲೂಕು ಗುತ್ತಿಗೆ ಕಾರ್ಮಿಕ ಮುಹಮ್ಮದ್ ಹನೀಫ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂಟ್ವಾಳ ತಾಲೂಕು ಗುತ್ತಿಗೆ ಕಾರ್ಮಿಕರು ಕಳೆದ 20 ವರ್ಷಗಳಿಂದ ಬಿಎಸ್ಸೆನ್ನೆಲ್ ದೂರವಾಣಿ ಎಕ್ಸೆಂಜ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾ ಬಂದಿರುತ್ತಾರೆ. 2018ರ ಅಕ್ಟೋಬರ್ ತಿಂಗಳಿಂದ 2019ರ ಮಾರ್ಚ್ ತಿಂಗಳವರೆಗೆ ವೇತನ ಬಾಕಿದ್ದು, ಈವರೆಗೆ ಯಾವುದೇ ಕಾರ್ಮಿಕರಿಗೆ ವೇತನ ಪಾವತಿಯಾಗಿಲ್ಲ ಎಂದು ಹೇಳಿದರು.
ಕೂಲಿ ವೇತನವನ್ನೇ ನಂಬಿಕೊಂಡು ಅನೇಕ ಕಾರ್ಮಿಕರು ಮನೆ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಹಾಗೂ ಜೀವನೋಪಯೋಗ ವಸ್ತುಗಳನ್ನು ಕೊಂಡುಕೊಳ್ಳಲು ಹಣವಿಲ್ಲದೆ ಕಂಗಾಲಾಗಿದ್ದು, ಸಂಕಷ್ಟದ ಜೀವನವನ್ನು ಎದುರಿಸುವಂತಾಗಿದೆ. ಈ ಬಗ್ಗೆ ಬಿಎಸ್ಸೆನ್ನೆಲ್ ಪ್ರಧಾನ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ಮನವಿ ಮೂಲಕ ಒತ್ತಾಯಿಸಲಾಗಿದೆ. ಅದಲ್ಲದೆ, ಪ್ರಧಾನಿ, ಸಂಸದರು, ಮಂತ್ರಿಗಳಿಗೆ, ಗುತ್ತಿಗೆದಾರ ಹಾಗೂ ಕಾರ್ಮಿಕ ಆಯುಕ್ತರಿಗೂ ಮನವಿ ಸಲ್ಲಿಸಿದ್ದು, ಯಾವುದೇ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಕಷ್ಟವನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಅಳವತ್ತುಕೊಂಡರು.
ಎ. 1ರಿಂದ ಕೆಲಸಕ್ಕೆ ಹೋಗುವುದಿಲ್ಲ:
ದ.ಕ. ಜಿಲ್ಲೆಯಲ್ಲಿ ಒಟ್ಟು 580 ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಎಲ್ಲ ಕಾಮೀಕರಿಗೆ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಕಾರ್ಮಿಕರ ಕುಟುಂಬ ಸಹಿತ ಲೋಕಸಭಾ ಚುನಾವಣೆಯಲ್ಲಿ ಮತನದಾನವನ್ನು ಬಹಿಷ್ಕರಿಸುತ್ತಿದ್ದೇವೆ. ಅದಲ್ಲದೆ, ವೇತನ ಪಾವತಿಯಾಗುವವರೆಗೂ ಎ. 1ರಿಂದ ಕೆಲಸಕ್ಕೆ ಹೋಗುವುದಿಲ್ಲ ಎಂದು ಗುತ್ತಿಗೆ ಕಾರ್ಮಿಕರು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆ ಕಾರ್ಮಿಕರಾದ ಯಶೋಧರ, ಹೊನ್ನಯ್ಯ, ಸುನೀಲ್, ಮನೋಹರ್  ಮೊದಲಾದವರಿದ್ದರು.

More articles

Latest article