Wednesday, October 18, 2023

ಕಲ್ಲಡ್ಕದ ಕುಟುಂಬ ಸದಸ್ಯರಿಂದ ಮನೆ ನಿರ್ಮಾಣ: ನಾಳೆ ಗೃಹ ಪ್ರವೇಶ

Must read

ಬಂಟ್ವಾಳ: ಯುವಕರ ಕೈಗಳು ಸಮಾಜಮುಖಿ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿದಾಗ, ಬಡವರ ಪಾಲಿಗೆ ಆಶಾಕಿರಣವಾದಾಗ ಗ್ರಾಮ ರಾಮ ರಾಜ್ಯವಾಗಲು ಸಾಧ್ಯವಾಗಬಹುದು ಎಂಬುದಕ್ಕೆ ಕಲ್ಲಡ್ಕದ ಕುಟುಂಬ ಸದಸ್ಯರ ಕಾರ್ಯವೇ ಸಾಕ್ಷೀ.
ಕಲ್ಲಡ್ಕ ಎಂದರೆ ಜನರ ಮನಸ್ಸಿಗೆ ಬೇರೆ ಯಾವುದೋ ಇಲ್ಲಸಲ್ಲದ ಯೋಚನೆಗಳು ಬರುವುದು ಸಹಜ, ಆದರೆ ಇಂತಹ ಕಲ್ಲಡ್ಕದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಬಡವರ ಕಣ್ಣೀರೊರಸುವ ಯುವಕರು, ಸಂಘಟನೆಗಳು ನಮ್ಮ ಕಣ್ಣ ಮುಂದಿದೆ. ಅಂತಹ ಸಂಘಟನೆಯಲ್ಲಿ ನೆಟ್ಲ ಪರಿಸರದ ‘ಕುಟುಂಬ’ ಸದಸ್ಯರು ಕೂಡಾ ಒಂದು.

ಕಲ್ಲಡ್ಕ ಸಮೀಪ ನೆಟ್ಲ ಬಳಿಯ ಪಿಲಿಂಜ ಎಂಬ ಪ್ರದೇಶದಲ್ಲಿರುವ 65 ವರ್ಷದ ಧರ್ಣಮ್ಮಜ್ಜಿಯ ಮಗ ವರ್ಷದ ಮೊದಲು ಮೃತಪಟ್ಟಿದ್ದರು. ಕೇಳುವವರು ಎಂದು ಯಾರೂ ಇಲ್ಲದ ಈ ಅಜ್ಜಿಗೆ ಇವರ ಮನೆ ಬೀಳುವ ಹಂತಕ್ಕೆ ಬಂದಾಗ ದಿಕ್ಕೇ ತೋಚದಂತಾಗಿತ್ತು.
ಬೀಳುವ ಸ್ಥಿತಿಯಲ್ಲಿರುವ ಮನೆಯೇ ಅವರಿಗೆ ಆಧಾರ. ಮಳೆಗಾಲದಲ್ಲಿ ಈ ಮನೆ ಬೀಳುತ್ತದೆ ಎಂಬ ಆತಂಕದಲ್ಲಿದ್ದಾಗ ಸಹಾಯಕ್ಕೆ ಬಂದದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯ ಮಾಹಿತಿಯೊಂದಿಗೆ ನೆಟ್ಲ ಪರಿಸರದ ‘ಕುಟುಂಬ’ ಸದಸ್ಯರು.
ಸುಮಾರು 55 ಸದಸ್ಯರನ್ನು ಹೊಂದಿರುವ ಕುಟುಂಬ ತಂಡದ ಸದಸ್ಯರು ಧರ್ಣಮ್ಮ ಅವರ ಮನೆ ಮರುನಿರ್ಮಾಣಕ್ಕೆ ಕೈಜೋಡಿಸಿದರು. ತಾವೇ ಕಲ್ಲು ಹೊತ್ತು, ಗೋಡೆ ಕಟ್ಟಿ ಧರ್ಣಮ್ಮ ಅವರ ಕಣ್ಣಲ್ಲಿ ಆನಂದಬಾಷ್ಪ ತರಿಸಿದರು. ಇದಕ್ಕೆ ಸಾಲಿಯಾನ್ ಸರ್ವೀಸಸ್ ಮಾಲೀಕ ಚಂದ್ರಶೇಖರ್ ಮತ್ತು ಪಂಚಾಯತ್ ಸದಸ್ಯ ಗಿರೀಶ್ ಕುಲಾಲ್ ಅವರ ನೆರವೂ ಇತ್ತು. ಬಂಟ್ವಾಳ ನಗರ ಠಾಣಾ ಎಸ್.ಐ. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಬೀಟ್ ಪೊಲೀಸ್ ನಾಗರಾಜ್ ಕೆ ಮತ್ತು ಪೊಲೀಸ್ ಸಿಬ್ಬಂದಿ ಚೆನ್ನಪ್ಪ ಗೌಡ ಅವರು ಧರ್ಣಮ್ಮ ಅವರ ಸಂಕಷ್ಟದ ಸ್ಥಿತಿಯನ್ನು ಗಮನಿಸಿ ಕುಟುಂಬ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ಕೆ ತೊಡಗಿಸಿಕೊಂಡಿದ್ದಾರೆ.

ಗೃಹಪ್ರವೇಶ:
ಏಪ್ರಿಲ್ 24 ನಾಳೆ ಸಾಂಕೇತಿಕವಾಗಿ ಪೂಜೆ ಇನ್ನಿತರ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಜ್ಜಿಯ ಮನೆಯ ಗೃಹ ಪ್ರವೇಶ ನಡೆಯುತ್ತದೆ . ಬಳಿಕ 28 ರಂದು ಈ ಮನೆಗೆ ನೆರವು ನೀಡಿದ ದಾನಿಗಳನ್ನು ಕರೆದು ಗೃಹ ಪ್ರವೇಶದ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬದ ಸದಸ್ಯರು ಹಾಗೂ ತಂಡದ ಅಧ್ಯಕ್ಷ ಧನಂಜಯ ಗುಂಡಿಮಜಲು ತಿಳಿಸಿದರು. ತಿಳಿಸಿದ್ದಾರೆ.
ಕುಟುಂಬ ತಂಡ ನೆಟ್ಲ ದೇವಸ್ಥಾನದ ಶುಚಿತ್ವ ಸಹಿತ ಹಲವು ಕಾರ್ಯಗಳನ್ನು ನಿಸ್ವಾರ್ಥವಾಗಿ ನಡೆಸುವ ಮಹದುದ್ದೇಶದಿಂದ ಆರಂಭಗೊಂಡಿದೆ.

ಕುಟುಂಬ ವೈಶಿಷ್ಟ:
ಕುಟುಂಬ ಎಂಬುದು ನೆಟ್ಲ, ಗೋಳ್ತಮಜಲು ಪರಿಸರದ ಸಾಮಾನ್ಯ ಕೆಲಸಗಳನ್ನು ದೈನಂದಿನ ಜೀವನೋಪಾಯಕ್ಕಾಗಿ ನಿರ್ವಹಿಸುವ ನಿಸ್ವಾರ್ಥಿ ಯುವಕರ ತಂಡ. ಧನಂಜಯ ಗುಂಡಿಮಜಲು ಅಧ್ಯಕ್ಷ. ದಿನೇಶ್ ಕೆದ್ಲ ಇದರ ಉಪಾಧ್ಯಕ್ಷ. ಕಾರ್ಯದರ್ಶಿಗಳಾಗಿ ಗೋಪಾಲಕೃಷ್ಣ ಗುಂಡಿಮಜಲು ಮತ್ತು ಪುರುಷೋತ್ತಮ ಗೋಳ್ತಮಜಲು ಇದ್ದಾರೆ. ಸಂಸ್ಥೆಯಲ್ಲಿ ಯಾವುದೇ ರಾಜಕಿಯ ಪಕ್ಷದ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ, ಜಾತಿ ಭೇದ ತಾರತಮ್ಯವಿಲ್ಲದೆ ನಾವೆಲ್ಲರೂ ಒಂದೇ ಎಂಬ ಮೂಲತತ್ವದಡಿ ಯಾವುದೇ ಆರ್ಥಿಕ ಚಿಂತನೆಗೆ ಒಳಪಡದೆ ಸೇವೆಯನ್ನಷ್ಟೇ ಮಾಡುವುದು ಇದರ ಮೂಲ ಉದ್ದೆಶ.

ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ, ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ, ಕಷ್ಟಕಾಲದಲ್ಲಿ ರೋಗಿಗಳಿಗೆ ಆರ್ಥಿಕ ಬಲದ ಸಹಾಯಕೊಡಲಾಗದಿದ್ದರೂ ರಕ್ತ ಕೊಡುವುದು, ಪರಿಸರ ಸಂರಕ್ಷಣೆ, ಹಳ್ಳಿ ಪ್ರದೇಶಗಳಲ್ಲಿ ಇರುವ ಅತ್ಯಂತ ಬಡ ಕುಟುಂಬಗಳಿಗೆ ನೆರವು, ಬಡ ಕುಟುಂಬದ ವಿದ್ಯಾರ್ಥಿಗಳಿಗೆ ನೆರವು, ಬಡ ಕುಟುಂಬಗಳಿಗೆಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಬಂಸಿದ ಇಲಾಖೆಗಳೊಂದಿಗೆ ಚರ್ಚಿಸಿ ನೆರವು ಒದಗಿಸುವುದು, ಪ್ರಾಕೃತಿಕ ವಿಕೋಪದ ಸಂದರ್ಭ ರಕ್ಷಣಾ ತಂಡಕ್ಕೆ ಸಹಕರಿಸುವುದು ಸಂಸ್ಥೆಯ ಕೆಲಸ ಕಾರ್ಯಗಳು

ಷರತ್ತಿನ ಕುಟುಂಬ:
ಕುಟುಂಬದ ಕೆಲಸ ಮಾಡುವ ಸಂದರ್ಭ ಸಂಸ್ಥೆಯ ಯೂನಿಫಾರ್ಮ್ ಧರಿಸಬೇಕು, ಕೆಲಸಕ್ಕೆಹೋದ ಕಡೆ ಮೊಬೈಲ್ ಬಳಕೆಗೆ ಅವಕಾಶವಿಲ್ಲ. ಶಿಸ್ತು ಕಾಪಾಡುವುದು, ಮಹಿಳೆಯರೊಂದಿಗೆ, ಮನೆಯವರೊಂದಿಗೆ ಗೌರವದಿಂದ ನಡೆದುಕೊಳ್ಳುವುದು ಹೀಗೆ ಹಲವು ಕಠಿಣ ಷರತ್ತುಗಳೂ ಕುಟುಂಬ ತಂಡಕ್ಕಿದೆ.

ಮನೆಗೆ ಹೊಸ ಲುಕ್ :
ಕುಸಿದು ಬೀಳುವ ಧರ್ಣಮ್ಮಜ್ಜಿ ಮನೆಗೆ ಹೊಸ ಮಾಡು, ಹೊಸ ಟ್ಲಾಯೆಟ್, ಹೊಸ ಪೈಂಟ್ ಹೀಗೆ ಹೊಸದಾಗಿ ಎಲ್ಲಾ ಮೂಲಭೂತ ಸೌಕರ್ಯ ಗಳೊಂದಿಗೆ ಧರ್ಣಮ್ಮ ಅಜ್ಜಿಗೆ ನೂತನ ಮನೆಯನ್ನು ನಾಳೆ ಹಸ್ತಾಂತರ ಮಾಡಲಿದ್ದಾರೆ. ಯಾವುದೇ ಗೌಜಿ ಗದ್ದಲಗಳಿಲ್ಲದೆ ಕಾಯಕವೇ ನಮ್ಮ ಮುಖ್ಯ ಗುರಿಯಾಗಬೇಕು , ಆ ಮೂಲಕ ಸಮಾಜದ ಒಳಿತನ್ನು ಕಾಪಾಡಬೇಕು ಎಂಬುದೇ ಇವರ ಆಶಯ. ಈ ಸಂಘಟನೆಗಳಿಂದ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

More articles

Latest article