ಬಂಟ್ವಾಳ: ಮಂಗಳೂರು ಮಹಾನಗರ ಪಾಲಿಕೆಯ ಜನತೆ ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್,ಡಾ.ವೈ. ಭರತ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಗಳ ನಿಯೋಗ ಸೋಮವಾರ ಸಂಜೆ ತುಂಬೆ ವೆಂಟೆಡ್ ಡ್ಯಾಂ ಹಾಗೂ ಶಂಭೂರು ಎಎಂಆರ್ ಕಿರು ಜಲವಿದ್ಯುತ್ ಘಟಕಕ್ಕೆ ಭೇಟಿ ನೀಡಿ ನೀರಿನ ಸಂಗ್ರಹದ ವಸ್ತು ಸ್ಥಿತಿಯನ್ನು ಪರಿಶೀಲಿಸಿದರು.

  ಸದ್ಯ ತುಂಬೆ ವೆಂಟೆಡ್ ಡ್ಯಾಂನಲ್ಲಿ 5.23 ಮೀ.ನೀರು ಸಂಗ್ರಹವಿದ್ದರೆ,ಎಎಂಆರ್ ಜಲವಿದ್ಯುತ್ ಘಟಕದಲ್ಲಿ 3 ಮೀ.ನಷ್ಟು ಮಾತ್ರ ನೀರು ಸಂಗ್ರಹವಾಗಿರುವುದು ಕಂಡುಬಂದಿದೆ.  ಎ ಎಂ ಆರ್ ನಿಂದ ಈ ನೀರನ್ನು ತುಂಬೆ ಡ್ಯಾಂನತ್ತ ಹರಿಯಬಿಟ್ಟರೂ, ಅಲ್ಪ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಬಹುದೇ ವಿನಹ ಇದರಿಂದ ಹೆಚ್ಚಿನ ಲಾಭವಾಗುವ ಸಾಧ್ಯತೆ ಇಲ್ಲ ಎಂದು ಎಎಂಆರ್ ನ ಅಧಿಕಾರಿಗಳು ಶಾಸಕರ ನೇತೃತ್ವದ ನಿಯೋಗಕ್ಕೆ ಈ  ಸಂದರ್ಭ ಮನವರಿಕೆ ಮಾಡಿದರು.                    ಎ.9 ರಂದು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಎಎಂಆರ್ ನಿಂದ ತುಂಬೆಯತ್ತ ನೀರು ಹರಿಯಬಿಟ್ಟಿದ್ದರಿಂದ ನೀರಿನ ಏರಿಕೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಹೆಚ್ಚಾಗಿತ್ತು ನೇತ್ರಾವತಿನದಿಯ ಜಲಾನಯನ ಪ್ರದೇಶದಲ್ಲಿ ನೀರು ಸಂಪೂರ್ಣ ಬತ್ತಿಹೋಗಿದ್ದು, ಇನ್ನು  ಮಳೆಯೇ ಬಂದರಷ್ಟೆ ನೀರಿಗೆ ಆಸರೆ.

ಜಿಲ್ಲಾಧಿಕಾರಿ ಜೊತೆ ಚರ್ಚೆ: ತುಂಬೆಯಲ್ಲಿ ಈ ಹಿಂದೆ  ಹಳೇ ಡ್ಯಾಂನಲ್ಲಿ  4 ಮೀ.ನಷ್ಟು ನೀರು ಇದ್ದಾಗಲೂ ಮಂಗಳೂರಿನ ಜನತೆಗೆ ರೇಷನಿಂಗ್ ನಲ್ಲಿ ನೀರು ಪೂರೈಸಿರಲಿಲ್ಲ,ಈಗಿನ ಹೊಸ ಡ್ಯಾಂನಲ್ಲಿ 5.23 ನಷ್ಟು ನೀರು ಇರುವಾಗ ಕುಡಿಯುವ ನೀರನ್ನು ರೇಷನಿಂಗ್ ನಲ್ಲಿ ಪೂರೈಸುವುದು ಅಸಮಂಜಸವಾಗಿದೆ.ಈ ಕುರಿತು ಮಂಗಳವಾರವೇ(ಎ.23) ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಚರ್ಚಿಸಲಾಗುವುದು ಎಂದು ಶಾಸಕದ್ವಯರಾದ ವೇದವ್ಯಾಸ ಕಾಮತ್,ಡಾ.ವೈ.ಭರತ್ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.

ಅಧಿಕಾರಿಗಳಿಗೆ ಈ ರೀತಿ ಕುಡಿಯುವ ನೀರಿನಲ್ಲೂ  ರೇಷನಿಂಗ್ ವ್ಯವಸ್ಥೆ ಜಾರಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಪ್ರಶ್ನಿಸಿದ ಶಾಸಕರು ಅಧಿಕಾರಿಗಳ ಈ ನೀತಿಯಿಂದಾಗಿ ಜನರು ನೀರಿಗಾಗಿ ತೊಂದರೆ ಅನುಭವಿಸುವಂತಾಗಿದೆ.ಈ ಬಗ್ಗೆ ಜಿಲ್ಲಧಿಕಾರಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಆರಂಭದಿಂದಲೇ ಹೂಳೆತ್ತಿ: ಮಂಗಳೂರಿನಲ್ಲಿ ರಾಜಕಾಲುವೆ ಮತ್ತು ಸಣ್ಣ ಕಾಲುವೆಯ ಹೂಳೆತ್ತುವ ಕಾಮಗಾರಿ ಆರಂಭವಾಗಿದೆಯಾದರೂ, ಕಾಲುವೆಯ ಆರಂಭದಿಂದಲೇ ಹೊಳೆತ್ತದೆ ಮಧ್ಯಭಾಗದಲ್ಲಿ ಹೂಳೆತ್ತಲಾಗುತ್ತಿದೆ ಎಂದು ಸಾರ್ವಜನಿಕರಿಂದ  ದೂರುಗಳು ಬಂದಿದ್ದು,ಕಾಲುವೆಯ ಆರಂಭದಿಂದ ನದಿ ಸೇರುವಲ್ಲಿವರೆಗೂ ಹೂಳೆತ್ತುವ ಕಾರ್ಯ ಅಗಬೇಕೆಂದ ಶಾಸಕ ಕಾಮತ್ ಅವರು ಈ ಬಗ್ಗೆಯು ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಲಾಗುವುದು ಎಂದರು. ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮಾಜಿ ಕಾರ್ಪೊರೇಟರ್ ಗಳಾದ  ಪ್ರೇಮಾನಂದ ಶೆಟ್ಟಿ,ಸುಧೀರ್ ಶೆಟ್ಟಿ ಕಣ್ಣೂರು, ವಿಜಯಕುಮಾರ್, ಸುರೇಂದ್ರ ಜಪ್ಪಿನಮೊಗರು, ರಾಜೇಶ್, ರೂಪ ಡಿ.ಬಂಗೇರ,ಪೂರ್ಣಿಮ,ಜಯಂತಿ ಆಚಾರ್ಯ, ಬಿಜೆಪಿ ಮುಖಂಡರಾದ ನತಿನ್ ಕುಮಾರ್, ರವಿಶಂಕರ್ ಮಿಜಾರ್ ಮೊದಲಾದವರಿದ್ದರು.  ಐವಾನ್ ಭೇಟಿ:  ಇದಕ್ಕು ಮೊದಲು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಅವರು ತುಂಬೆ ವೆಂಟೆಡ್ ಡ್ಯಾಂಗೆ ಭೇಟಿ ನೀಡಿ ನೀರಿನ ಪ್ರಮಾಣವನ್ನು ಪರಿಶೀಲಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here