ಕರುಳ ಕುಡಿ ಎಂಬುದಾಗಿ ಮಗುವನ್ನು ತಾಯಿಯು ಬಹಳ ಅಕ್ಕರೆಯಿಂದ ಬೆಳೆಸುತ್ತಾಳೆಯೆಂಬುದು ನಿರ್ವಿವಾದದ ಮಾತು. ತಾಯಿಯ ಮಮಕಾರ ಅಪ್ಪನ ಅಧಿಕಾರಗಳ ಆಶ್ರಯದಲ್ಲಿ ಮಗು ಬೆಳೆದರೆ ಸಮಾಜಕ್ಕೆ ಶಕ್ತಿಶಾಲಿಯಾದ ಒಬ್ಬ ವ್ಯಕ್ತಿ ದೊರೆತಂತೆಯೇ ಎಂಬುದು ಹಿರಿಯರ ಅನುಭವದ ಅನಿಸಿಕೆ. ಇತ್ತೀಚೆಗೆ ನಾವು ಆಚರಿಸಿದ ಸ್ವಾತಂತ್ರ್ಯದಿನಾಚರಣೆಯಂದು ನಮ್ಮ ಶಾಲೆಗೊಬ್ಬರು ಮಹಾತಾಯಿ ಬಂದಿದ್ದರು. ಅವರನ್ನು ನಾನು ಮಾಹಾತಾಯಿಯೆಂದು ಅಂದಿರುವುದಾದರೂ ಏಕೆ? ಎಂಬ ಸಂದೇಹವಿದ್ದರೆ, ಲೇಖನದ ಪೂರ್ಣ ಪಾಠವನ್ನು ತಾವು ಓದಲೇಬೇಕಾಗುತ್ತದೆ.
ಆಕೆಯ ಮಗ ನಮ್ಮ ಶಾಲಾ ವಿದ್ಯಾರ್ಥಿ. ತರಗತಿ ಮತ್ತು ಹೆಸರು ನನಗಷ್ಟೇ ತಿಳಿದಿರಲಿ. ಆದರೆ ಘಟನೆ ಮಾತ್ರ ಸತ್ಯ. ಅದೆಂತಹ ವಿಚಿತ್ರವಾದ ಘಟನೆಯಪ್ಪಾ? ಸುತ್ತು ಬಳಸಿ ಯಾಕೆ ಹೇಳುತ್ತಿದ್ದೀರಿ ಎಂದು ಪ್ರಶ್ನಿಸುವಿರಾ? ಹೌದು. ಘಟನೆ ವಿಚಿತ್ರವಾದ್ದರಿಂದ ಹೇಳಲು ಬಹಳ ಸಂಕೋಚ ಪಡುತ್ತೇನೆ. ಆ ವಿದ್ಯಾರ್ಥಿಯ ತವರು ಹಾಸನ ಜಿಲ್ಲೆ. ಈ ಊರಿನ ವಿದ್ಯಾರ್ಥಿನಿಲಯದಿಂದ ನಮ್ಮ ಶಾಲೆಗೆ ಬರುತ್ತಾನೆಯೆಂದುಕೊಳ್ಳೋಣ. ಎಂದು ಕೊಳ್ಳುವುದು ಯಾಕೆ? ಮುಚ್ಚು ಮರೆ ಬೇಡ. ಆತನು ದಿನಾ ಶಾಲೆಗೆ ಬರುತ್ತಿರುವುದು ವಿದ್ಯಾರ್ಥಿನಿಲಯದಿಂದಲೇ ಎಂಬುದು ದಿಟ.
ಕಲಿಕೆಯಲ್ಲಿ ಆತ ಸ್ವಲ್ಪ ಹಿಂದೆ. ಆತನ ತಂದೆಯು ಈ ಬಟಾಣಿ ಮತ್ತು ಅವನ ತಮ್ಮ ಪುಟಾಣಿಯನ್ನು ಚಿಕ್ಕಂದಿನಲ್ಲೇ ಬಿಟ್ಟು ಹೊಸ ಹೆಂಡತಿಯ ಸೆರಗಿನೊಳಗೆ ಹೊಕ್ಕಿದ್ದ. ತಾಯಿ ಸಾಕುತ್ತಿರುವ ಈ ಮಕ್ಕಳಲ್ಲಿ ಕಿರಿಯವನು ಕಲಿಕೆಯಲ್ಲಿ ಮುಂದಾಗಿದ್ದು ಹಿರಿಯವನು ಕಲಿಯುವುದರಲ್ಲಿ ಮುಂದೆ ಬರುತ್ತಿಲ್ಲವಲ್ಲಾ ಎಂಬುದೇ ಆ ತಾಯಿಯ ದುಗುಡ. ಶಿಕ್ಷಕರ ಜೊತೆ ಮಾತುಕತೆ ಮಾಡುತ್ತಾ ಆ ತಾಯಿ ಹೇಳಿದರು, ಈತ ಹಿಂದೆ ಓದಿದ ಶಾಲೆಯಲ್ಲೂ ಇದೇ ಮಾತು ಕೇಳಿದೆ, ಎಲ್ಲೂ ಕಲಿಯಲ್ಲ, ಹೇಳಿ ಹೇಳಿ ಸಾಕಾಯಿತು. ತಂದೆಯಿಲ್ಲದ ಮಕ್ಕಳೆಂದು ಚೆನ್ನಾಗಿ ಸಾಕಿದೆ, ನನ್ನ ಕಷ್ಟ ಇವಕ್ಕೆಲ್ಲಿ ಅರ್ಥವಾಗಬೇಕು?…….. ಹೀಗೆ ಮಾತು ಬೆಳೆಯುತ್ತಿತ್ತು. ಇದೂ ಒಂದು ವಿಚಿತ್ರ ಘಟನೆಯೇ? ಮಾಮೂಲಿ ವಿಷಯವಲ್ಲವೇ? ಇದಕ್ಕೆ ಯಾಕೆ ಭಾರೀ ಸುತ್ತು ಬಳಕೆಯ ಮಾತು ಎಂದೆನ್ನುವಿರಾದರೆ ಮುಂದಿನ ವಿಷಯ ಓದಿ.
ನನಗೆ ಒಬ್ಬ ಮಗ ಸಾಕು, ನೀನು ಭಾಷೆಯಿಲ್ಲದವನು. ನನಗೆ ಸಣ್ಣ ಮಗ ಮಾತ್ರ ಸಾಕು. ನಿನಗೆ ವಿಷ ಕೊಟ್ಟು ಸಾಯಿಸಿ ಹಾಯಾಗಿ ತಮ್ಮನೊಂದಿಗೆ ಇರುತ್ತೇನೆ ಎಂದೆಲ್ಲಾ ಹಿರಿಯ ಮಗನನ್ನುದ್ದೇಶಿಸಿ ಹೇಳಿದ ಆ ಮಹಾ ತಾಯಿಯ ಮಾತು ಆಲಿಸುತ್ತಿದ್ದಂತೆ ನನ್ನ ಜಂಘಾಬಲವೇ ಉಡುಗಿ ಹೋಯಿತು. ತಾಯಿಗೆ ಬುದ್ದಿವಾದ ಹೇಳೋಣವೆಂದರೆ ಆ ತಾಯಿಯ ಕರುಳಿನ ರೋದನವದು. ಆದರೆ ರೋದನವನ್ನು ಬಿಚ್ಚಿಡುವ ವಿಧಾನವೇ ಇದು? ಎಂದು ನನಗೆ ಅಚ್ಚರಿಯಾಯಿತು. ಹೆತ್ತ ಮಗುವನ್ನು ಪೊದೆಗಳಲ್ಲಿ ಬಿಸಾಡಿದ್ದ ಸುದ್ದಿಗಳನ್ನು ಓದಿದ ನೆನಪಿದೆ. ಈ ತಾಯಿಯೂ ಆ ವರ್ಗದ ತಾಯಂದಿರ ಸಮೀಪದಲ್ಲೇ ಇದ್ದಾರೆಯೇ ಎಂದು ಅರೆ ಚಣ ಯೋಚಿಸಿದೆ. ನನಗೆ ತಡೆಯಲಾಗಲಿಲ್ಲ.
ರೋದಿಸುವ ತಾಯಿಗೆ ಸಾಂತ್ವನ ಹೇಳಿದೆ. ನಿಮ್ಮ ಮಾತುಗಳು ಮಗುವನ್ನು ಮಾರ್ಗದರ್ಶಿಸುವ ಮಾದರಿಯಲ್ಲಿರಬೇಕು, ಅವನು ನಿಮ್ಮ ಕುರಿತು ಪ್ರತಿರೋಧ ಹೊಂದುವಂತಹ ಮಾತುಗಳನ್ನಾಡಬಾರದಿತ್ತು. ಅವನಿಗೆ ಭದ್ರತೆಯ ಭಾವನೆ ಬರುವಂತಹ ರೀತಿಯಲ್ಲಿ ನಿಮ್ಮ ಮಾತುಗಳಿರುತ್ತಿದ್ದರೆ ನನಗೆ ಸಂತಸವಾಗುತ್ತಿತ್ತು. ಮಗುವು ತನ್ನನ್ನು ತಿದ್ದಿಕೊಂಡು ಬೆಳೆಯುವ ಅವಕಾಶ ನೀಡಬೇಕೇ ಹೊರತು ಆತನ ಮನಸ್ಸಿನಲ್ಲಿ ಯಾವುದೇ ಕ್ರೌರ್ಯದ ಭಾವನೆ ತುಂಬದಂತೆ ಹೆತ್ತವರು ಜಾಗರೂಕತೆ ವಹಿಸಬೇಕು. ನಿಮ್ಮ ಮಾತುಗಳಿಂದ ಅವನ ತಮ್ಮನೂ, ಅಣ್ಣನನ್ನು ನಾಲಾಯಕ್ಕು ಎಂದು ತುಚ್ಛೀಕರಣದಿಂದ ವರ್ತಿಸನೇ? ಎಂಬಿತ್ಯಾದಿಯಾದ ಬುದ್ಧಿವಾದದ ಮಾತುಗಳನ್ನೂ ಹೇಳಿದೆ. ಬಹುಶಃ ಆ ಮಹಾ ತಾಯಿ ನನ್ನಲ್ಲಿ ಕೋಪಿಸಿರಬಹುದು.
ಹೌದು. ಮಕ್ಕಳ ಮೊದಲ ಭದ್ರತೆಯ ಆಸರೆ ಹೆತ್ತವರು. ಹೆತ್ತವರ ಮಾತುಗಳಿಂದ ಮಕ್ಕಳ ಭಾವನೆಯೊಳಗೆ ಅಭದ್ರತೆಯ ಕಲ್ಪನೆಗಳು ಉಗಮಿಸಬಾರದು. ಹೆತ್ತವರು ಉತ್ತೇಜನದ ಮಾತುಗಳಿಂದ ಮಕ್ಕಳನ್ನು ಬೆಳೆಸಬೇಕು. ನಮ್ಮ ಹೆತ್ತವರು ಸ್ವಾರ್ಥದಿಂದ ನಮ್ಮನ್ನು ಸಾಕುತ್ತಿದ್ದಾರೆ ಎಂಬ ಕಲ್ಪನೆಯು ಮಕ್ಕಳಲ್ಲಿ ದೃಢಗೊಂಡರೆ ಅವರೆಂದೂ ಹೆತ್ತವರನ್ನು ಪ್ರೀತಿಸರು, ಭೀತರಾಗಿಯೇ ಬೆಳೆದು, ಇತರರಿಗೂ ಭೀತಿಯನ್ನೇ ಉಣಿಸುವರು ಎಂಬುದನ್ನರಿತಿರೋಣ.

 

ಲೇ: ರಮೇಶ ಎಂ. ಬಾಯಾರು ಎಂ.ಎ; ಬಿ.ಎಡ್;
ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here