


ಲೇ: ರಮೇಶ ಎಂ. ಬಾಯಾರು ಎಂ.ಎ; ಬಿ.ಎಡ್;
ರಾಜ್ಯ ಪ್ರಶಸ್ತಿ ಪುರಸ್ಕೃತ ಅಧ್ಯಾಪಕರು
ಮೊ: 9448626093
ನೀವು ಯಾವ ಇಲಾಖೆಯಲ್ಲಿ ಸೇವೆ ಮಾಡುತ್ತೀರಿ? ಅಪರಿಚಿತರು ಪರಸ್ಪರ ಮಾತನಾಡುತ್ತಾ ಅಥವಾ ಪರಿಚಯ ಮಾಡಿಕೊಳ್ಳುತ್ತಾ ಕೇಳುವ ಪ್ರಶ್ನೆಗಳಲ್ಲಿ ಇದೂ ಒಂದಾಗಿರುತ್ತದೆ. ನಾನು ಹಳ್ಳಿಯಲ್ಲಿ ಬೇಸಾಯ ಮಾಡುತ್ತೇನೆ ಎಂದರೆ ಆ ಕಡೆಯ ಸಿಂಡರಿತ ಮಹಾನುಭಾವ ಕೇಳುವ ನಂತರದ ಕುಹಕ ಭಾವನೆ ಸಮ್ಮಿಲಿತಗೊಂಡ ಪ್ರಶ್ನೆ: ಬೇಸಾಯನಾ? ಅದು ಗೀಟುತ್ತದಾ? ಪ್ರಶ್ನಿಸುವವನಿಗೆ ನೋಯಬಾರದೆಂದು ನಕ್ಕು ಸುಮ್ಮನಾಗಿರಬಹುದಾಗಿತ್ತಾದರೂ ನಾನು ಅವರಿಗೆ ಎದಿರೇಟು ನೀಡಲು ಪ್ರಶ್ನೆಗಳನ್ನು ಎಸೆಯುತ್ತೇನೆ. ಏನು? ಬೇಸಾಯ ಸೇವೆ ಅಲ್ಲವೇ? ಬೇಸಾಯದಿಂದ ಗೀಟದೇ ಹೋಗಿದ್ದರೆ ಇಡೀ ಪ್ರಪಂಚವೇ ತಿಂದು ತೇಗುವುದಾದರೂ ಹೇಗೆ ಸಾಧ್ಯವಾಯಿತು?. ಬೇಸಾಯವೆಂದೊಡನೆ ಅದನ್ನು ಕೀಳಾಗಿ ನೋಡುವ ಮತ್ತು ಅವರಲ್ಲಿ ಅಸಂಬದ್ಧ ಪ್ರಶೆಗಳನ್ನು ಕೇಳುವ ಹುಚ್ಚು ಮೂರ್ಖತನ ಯಾರಲ್ಲೂ ಇರಬಾರದು.
ಕೇವಲ ಬೇಸಾಯವೆಂದಾಗ ಮಾತ್ರವಲ್ಲ. ಯಾವುದೇ ಉದ್ಯೋಗದ ವಿಷಯಕ್ಕೆ ಬಂದಾಗಲೂ ಜನರ ಬಾಯಿಯಿಂದ ಹೊರಡುವ ಪ್ರಶ್ನೆಗಳು ಸಾಮಾನ್ಯವಾಗಿ, ದರ್ಜಿಯೇ? ಸಂಪಾದನೆ ಆಗುತ್ತದಾ? ಡ್ರೈವರಾ? ಸಂಬಳ ಎಲ್ಲ ರೂಂ ಬಾಡಿಗೆ ಮತ್ತು ಹೋಟೇಲಿಗೇ ಆಯಿತು. ಕೂಲಿಯೇ? ಮಕ್ಕಳಿಗೆ ಓದಿಸುತ್ತಿ ಹೇಗೆ? ಸಾರಣೆಯವನಾ? ಕೆಲಸ ಸಿಗ್ತದಾ? ಅಧ್ಯಾಪಕರೇ? ಹೈಸ್ಕೂಲಾ ಕಾಲೇಜಾ? ಸಂಗೀತ ಟೀಚರಾ? ಬಹಳ ಕಡಿಮೆ ಸಂಪಾದನೆ ಅಲ್ಲವೇ?
ಇಂತಹ ಕುಹಕದ ಮಾತುಗಳನ್ನು ಕೇಳುವ ದರ್ಜಿ, ಡ್ರೈವರ್, ಕೂಲಿಯಾಳು, ಸಾರಣೆ ಮಾಡುವ ಮೇಸ್ತ್ರಿ, ಅಧ್ಯಾಪಕ, ಸಂಗೀತ ಟೀಚರ್ ಮುಂತಾದವರು ತಮ್ಮ ಬಗ್ಗೆ ಕೀಳರಿಮೆ ಹೊಂದ ಬೇಕೇ? ಅವರ ಸೇವೆಗಳು ಡಾಕ್ಟರ್, ಪ್ರೊಫೆಸ್ಸರ್, ಇಂಜಿನಿಯರ್, ಮಿನಿಸ್ಟರ್ ಮುಂತಾzವರ ಸೇವೆಗಳಿಗೆ ತುಲನಾತ್ಮಕವಾಗಿ ಸಮಾನವಲ್ಲವೇ? ಉದ್ಯೋಗದ ಬಗ್ಗೆ ಕೀಳು ಮೇಲೆಂದು ದರ್ಜೆ ನೀಡುವುದು ಯೋಗ್ಯವೇ? ಎಲ್ಲವನ್ನೂ ಒಬ್ಬನಿಂದಲೇ ಮಾಡಲು ಅಸಾಧ್ಯ. ವೈದ್ಯನು ತನ್ನ ಉಡುಪನ್ನು ತಾನೇ ಹೊಲಿಯಲಾರ, ತನ್ನ ಕೂದಲನ್ನು ತಾನೇ ಕತ್ತರಿಸಲಾರ, ಮೇಲಾಗಿ ವೈದ್ಯನಾಗಿದ್ದೂ ತನ್ನ ಶಸ್ತ್ರ ಚಿಕಿತ್ಸೆಯ ಅಗತ್ಯಗಳಿಗೆ ಇತರರನ್ನೇ ಅವಲಂಬಿಸಬೇಕಗುತ್ತದೆ. ಯಾವುದೇ ಸೇವೆಯನ್ನು ಆ ಸೇವೆಯಿಂದ ಬರುವ ಆದಾಯ ಮತ್ತು ಪರಿಶ್ರಮದ ಪ್ರಮಾಣಾಧಾರಿತವಾಗಿ ಮೇಲು ಕೀಳು ಎಂದರೆ ತಪ್ಪಾಗುತ್ತದೆ. ಒಬ್ಬ ವ್ಯಕ್ತಿಗೆ ಬದುಕಿನುದ್ದಕ್ಕೂ ಅಗತ್ಯವಾಗುವ ಸೇವೆಗಳ ಸಂಖ್ಯೆ ಅಪರಿಮಿತ. ಆದರೆ ಓರ್ವನು ನೀಡಬಹುದಾದ ಸೇವೆಗಳ ಸಂಖ್ಯೆ ಒಂದೋ ಎರಡೋ ಮಾತ್ರ. ಪಡೆಯುವ ಸೇವೆ ಅಧಿಕವಾಗಿದ್ದು ನೀಡುವ ಸೇವೆಗಳ ಸಂಖ್ಯೆ ಕಡಿಮೆಯಾದಾಗ ಆತನು ಯಾವ ಶ್ರೇಣಿಯ ಸೇವೆ ಮಾಡುವವನಾದರೂ ಅದು ಮಾತ್ರವೇ ಹಿರಿದಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲವೇ? ಹೆಚ್ಚಿನದನ್ನು ನಾವು ಇತರರಿಂದ ಸ್ವೀಕರಿಸುವವರಾದರೆ ನಮ್ಮದು ಪಡೆಯುವ ಕೈಗಳು ತಾನೇ? ಯಾವತ್ತೂ ಪಡೆಯುವ ಕೈಗಳಿಗಿಂತ ಕೊಡುವ ಕೈಗಳು ಮೇಲಿರುತ್ತವೆ ತಾನೇ?
ಮಾನವನ ಜೀವನವು ಪರಾವಲಂಬಿಯೇ ಹೊರತು ಸ್ವಾವಲಂಬಿಯಲ್ಲ. ಆತನಿಗೆ ಡ್ರೈವರ್, ದರ್ಜಿ, ಕೂಲಿ, ಮೇಸ್ತ್ರಿ, ಡೋಬಿ, ಕ್ಷೌರಿಕ, ವ್ಯಾಪಾರಿ, ಕೃಷಿಕ, ಅಡುಗೆಯವನು……………………..ಹೀಗೆ ಎಲ್ಲರ ಸೇವೆಗಳೂ ಸಂದರ್ಭಕ್ಕೆ ಸರಿಯಾಗಿ ಒದಗಲೇ ಬೇಕು. ಇದು ಬದುಕಿನ ನಿಯಮ. ಆದುದರಿಂದ ಕೆಲವು ಸೇವೆಗಳನ್ನು ಶ್ರೇಷ್ಠ, ಉಳಿದವುಗಳೆಲ್ಲಾ ನಿಕೃಷ್ಠ ಎನ್ನುವ ದೋಷಯುತ ಕಲ್ಪನೆ ಎಲ್ಲರ ಮನದೊಳಗಿನಿಂದ ತೊಲಗಲೇಬೇಕು. ಎಲ್ಲವೂ ಸಮಾವಾದ ಗೌರವ, ಸ್ಥಾನ ಮಾನಗಳಿಗೆ ಪಾತ್ರವೇ ಆದ ಉದ್ಯೋಗಗಳು ಎಂಬ ಪ್ರಜ್ಞಾವಂತ ಹೃದಯ ನಮ್ಮದಾಗಿರಲಿ. ಒಂದು ಕೈಯ ಐದೂ ಬೆರಳುಗಳು ನೀಳ ಮತ್ತು ಗಾತ್ರಗಳಲ್ಲಿ ವಿಭಿನ್ನತೆ ಹೋಂದಿವೆ. ಆದರೆ ದಪ್ಪ ಗಾತ್ರದ ಹೆಬ್ಬೆರಳೂ ನಾವು ಭಗವಂತನಿಗೆ ನಮಿಸುವ ಸಂದರ್ಭದಲ್ಲಿ ಇದಿರಿಗೆ ಬರುವದಿಲ್ಲ. ಕಿರಿದಾದ ಬೆರಳೇ ಮುಂದೆ ಬರುತ್ತದೆ ಅಲ್ಲವೇ? ಎಂತಹ ವಿಧಿ ವಿಪರ್ಯಾಸ ಅಂತ ಅನ್ನಿಸುವುದಿಲ್ಲವೇ? ಆದರೆ ಇದು ವೈಪರೀತ್ಯವಲ್ಲ. ನಾವು ಕಿರಿದೆಂದು ಕಡೆಗಣಿಸಿರುವಂತಹವುಗಳೂ ಸಮಯ ಸಂದರ್ಭಗಳಿಗೆ ಸರಿಯಾಗಿ ಪ್ರಮುಖವಾಗುತ್ತವೆ ಎಂಬುದರ ಸಂಕೇತವಿದು. ಕಿರಿದರಲ್ಲಿ ಹಿರಿದನ್ನು ಕಾಣುವ ಗುಣ ನಮ್ಮಲ್ಲಿರಬೇಕೆಂದು ದೃಷ್ಟಾರರು ಹೇಳಿರುವುದನ್ನು ನಾವು ನಮ್ಮಲ್ಲಿ ರೂಢಿಸಿಕೊಳ್ಳೋಣ.


