ಹಳ್ಳಿ ಹಳ್ಳಿಗಳ ಜಾತ್ರೆಗಳಲ್ಲಿ, ಯುವಕ ಸಂಘದ ವಾರ್ಷಿಕೋತ್ಸವಗಳಲ್ಲಿ, ಶಾಲಾ ವರ್ದಂತ್ಯುತ್ಸವಗಳಲ್ಲಿ, ವೇದಿಕೆಯಲ್ಲಿ, ಗದ್ದೆಯಲ್ಲಿ, ಬಯಲಿನಲ್ಲಿ; ಊರವರೇ ಸೇರಿ ಕತೆ ರಚಿಸಿ, ಅವರೇ ನಿರ್ದೇಶನ ಮಾಡಿ, ನಟನೆ ಮಾಡುತ್ತಿದ್ದ ಕಲೆ ಎಂದರೆ ಅದು ತುಳು ನಾಟಕ ರಂಗ. ಊರಲ್ಲೊಬ್ಬ ನಾಟಕ ರಚನಾಕಾರ, ನಿರ್ದೇಶಕ, ಹಾರ್ಮೊನಿಸ್ಟ್ ಅಥವಾ ಸಂಗೀತಗಾರ, ರಂಗಸಜ್ಜಿಕೆ ಮಾಲಕ ಕಂ ಕೆಲಸಗಾರ… ಹೀಗೆ ಅನೇಕರು. ಹಲವಾರು ದಿನಗಳ ನಿರಂತರ ಅಭ್ಯಾಸ. ಅಂಕದ ಪರದೆ ತೆರೆದರೆ ಮಾರ್ಗ, ಪಾರ್ಕ್, ಮನೆ ಸೇರಿದಂತೆ ಹಲವು ದೃಶ್ಯಾವಳಿಗಳ ಪರದೆಗಳು ತೆರೆತೆರೆಯಾಗಿ ಬಿಡಿಸಿಕೊಳ್ಳುತ್ತವೆ. ಸಂಭಾಷಣೆ, ನಟನೆ ಮುಗಿಯುತ್ತಲೇ ಮುದುಡಿಕೊಳ್ಳುತ್ತವೆ. ಅವುಗಳ ಮುಂದೆ ಕಲಾವಿದರು ಹಿಂದೆ ಸಂಭಾಷಣೆ ಪಿಸುಗುಟ್ಟುವ (ಫ್ರಾಂಪ್ಟ್) ತೆರೆಮರೆಯಲ್ಲಿ ನಟರ ನರಳಾಗುವವರು ಒಂದಷ್ಟು ಮಂದಿ. ಎಲ್ಲರ ಭಾಗವಹಿಸುವಿಕೆಯಲ್ಲಿ ಅದ್ಭುತ ನಾಟಕ ಮೂಡಿಬರುತ್ತಿತ್ತು. ಆಗಲೂ ತುಳು ನಾಟಕ ಅಷ್ಟೇ ಅದ್ಭುತ. ಆವಾಗ ತೆಳು ಹಾಸ್ಯವನ್ನೊಳಗೊಂಡ ಸಾಮಾಜಿಕ ಕಥಾನಕಗಳಿಗೆ ಪ್ರಮುಖ ಪ್ರಾಶಾಸ್ತ್ಯವಿತ್ತು. ಬರಬರುತ್ತಾ ಪೂರ್ಣ ನಾಟಕ ಕಥೆಯನ್ನು ಹೇಳುವ ಬದಲು ಹಾಸ್ಯಕ್ಕೆ ಪ್ರಾಧಾನ್ಯತೆ ಕೊಡುವ, ಕಡೆಯ ಕೆಲವು ದೃಶ್ಯಗಳು ಮಾತ್ರ ಕಥೆಯನ್ನು ತಿಳಿಸುವ ನಾಟಕಗಳು ಜನಪ್ರಿಯ ಕಂಪೆನಿಗಳ ಮೂಲಕ ಹರಿದಾಡಲು ಪ್ರಾರಂಭವಾಯಿತು. ಕ್ರಮೇಣ ಯುವಕ ಸಂಘದ ಸದಸ್ಯರೆ ಮಾಡುತ್ತಿದ್ದ ನಟನೆ ಬೆರಳೆಣಿಕೆಯ ಘಟನೆ ಯಾಗುತ್ತಾ ಸಾಗಿತು. ಹಳ್ಳಿಗರ ವಾರ್ಷಿಕೋತ್ಸವಕ್ಕೆ ಕೂಡ ಆಹ್ವಾನಿತ ತಂಡಗಳ ನಾಟಕಗಳು ಮೆರುಗು ನೀಡುವ ಮೂಲಕ ಊರ ಕಲಾವಿದರು ಹಿಂದಕ್ಕೆ ಸರಿಯುವಂತಾಯಿತು.
ತುಳು ನಾಟಕ ತಂಡಗಳ ಪ್ರಾರಂಭದ ದಿನಗಳಲ್ಲಿ ಕೇವಲ ಕೆಲವೇ ಕಂಪೆನಿಗಳು ಮಾತ್ರ ಇದ್ದವು. ತುಳುನಾಡಿನಲ್ಲೂ ಅವರದೇ ಕಾರುಬಾರು, ಮುಂಬೈಯಲ್ಲೂ ಅವರದೇ ಪಾರುಪತ್ಯ. ಆದರೆ ಈ ಮೂಲಕವೇ ಒಂದಷ್ಟು ಮಂದಿ ಕಲಾವಿದರು ಖ್ಯಾತಿಗೆ ಬಂದಿರುವುದನ್ನು ಅಲ್ಲಗೆಳೆಯಲಾಗದು. ಕಲಾವಿದರು ಗಟ್ಟಿಯಾಗುತ್ತಲೇ ಇನ್ನು ಕೆಲವು ಕಂಪೆನಿಗಳು ಸೃಷ್ಟಿಯಾದವು. ತೆಲಿಪಾಲೆ ಸೀಝನ್‌ಗಳ ಮೂಲಕ ಇನ್ನೊಂದಷ್ಟು ಟೀಮ್‌ಗಳು ಮುನ್ನೆಲೆಗೆ ಬರಲು ಸಹಾಯಕವಾದುವು. ಜೊತೆಜೊತೆಗೆ ಕೆಲವು ತಂಡಗಳು ಅಸಹ್ಯ, ಅಸಭ್ಯ ಸಂಭಾಷಣೆಯನ್ನು (ಡಬ್ಬಲ್ ಮೀನಿಂಗ್) ಆಡುತ್ತಾ ನಗಿಸುವ ಪರಿಪಾಠವನ್ನು ಬೆಳೆಸಿಕೊಂಡಿತು. ಇದರಿಂದ ಅವರಿಗಿರುವ ಬೇಡಿಕೆಯು ಹೆಚ್ಚಾಯಿತಾದರೂ ಸಾಮಾಜಿಕವಾಗಿ ಆ ತಂಡಕ್ಕೆ ಅಷ್ಟಕ್ಕೆ ಅಷ್ಟೆ ಮರ್ಯಾದೆ ಪಡೆಯುವ ಮಟ್ಟಕ್ಕೆ ನಿಂತಿತು.
ವಿಧಾತ್ರಿ
ಈ ಮಧ್ಯೆ ಸಮಾಜಕ್ಕೆ ಹಾಸ್ಯದೊಂದಿಗೆ ನೀತಿಯನ್ನು ಸಾರುವ, ಸಮಾಜದಲ್ಲಿರುವ ಕೆಲವು ಅನಿವಾರ್ಯವಲ್ಲದ ರೂಢಿಗಳನ್ನು ಪ್ರಶ್ನಿಸುವ ಮೌಲ್ಯವನ್ನು ಹೊತ್ತುಕೊಂಡ ಕಥೆ ನಾಟಕಗಳು ಕೂಡ ಹೊರಬಂದವು. ಇವೆಲ್ಲವುಗಳ ಮಧ್ಯೆ ಅನೇಕ ಸಭ್ಯ ತಂಡವಾಗಿ ಬೆಳೆದು ತನ್ನದೇ ಛಾಪನ್ನು ಮೂಡಿಸಿದ ತಂಡಗಳಲ್ಲೊಂದು ಎಂದರೆ ಅದು ಕೈಕಂಬ ಕುಡ್ಲದ ವಿಧಾತ್ರಿ ಕಲಾವಿದೆರ್. ಇಲ್ಲಿ ಕೇವಲ ಹಾಸ್ಯ ನಾಟಕಗಳು ಮಾತ್ರ ಇಲ್ಲ. ಹಾಸ್ಯದೊಂದಿಗೆ ಜನಪದೀಯ, ಐತಿಹಾಸಿಕ, ಸಾಮಾಜಿಕ ನಾಟಕಗಳನ್ನು ಸಮರ್ಥವಾಗಿ ಮನಮುಟ್ಟಿಸಿರುವ ಕೀರ್ತಿ ವಿಧಾತ್ರಿ ಕಲಾವಿದರಿಗೆ ಸಲ್ಲುತ್ತದೆ. ೩೦೦ಕ್ಕೂ ಹೆಚ್ಚು ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿದ ನಿಕ್ ಗೊತ್ತುಂಡಾ ನಾಟಕದ ಜೊತೆ ನಮ್ಮ ಮರ್ಯಾದಿದೆ ಪ್ರಶ್ನೆ, ನಮ ಎನ್ನಿಲೆಕ ಆಪುಜಿ. ಕುಸಾಲ್ ಬೊಡ್ಚಿ, ಕಾಸ್ ಬೋಡಾ…? ಛತ್ರಪತಿ ಶಿವಾಜಿ, ರಾಮಪಗರಿ, ದೈವರಾಜ ಬಬ್ಬುಸ್ವಾಮಿ, ಕಾರ್ಣಿಕದ ಕಲ್ಲುರ್ಟಿ ಕಲ್ಕುಡ, ಕಾರ್‍ಣಿಕದ ದೈವ ಪಂಜುರ್ಲಿ, ಬಯ್ಯಮಲ್ಲಿಗೆ ಮುಂತಾದ ನಾಟಕಗಳನ್ನು ಆಡುತ್ತಾ ಆಯಾಯ ಅವಶ್ಯಕತೆಗನುಸಾರವಾಗಿ ಪ್ರೇಕ್ಷಕರ ಬೇಡಿಕೆಯನ್ನು ಪೂರೈಸುತ್ತಾ ಬಂದಿದೆ.
ಕುಸಾಲ್ ಬೊಡ್ಚಿ
ಇತ್ತೀಚಿಗೆ ಪ್ರದರ್ಶನ ಕಂಡ ನಾಟಕ ಕುಸಾಲ್ ಬೊಡ್ಚಿ, ಸಾಮಾಜಿಕ ಪಿಡುಗಾದ ಡ್ರಗ್ ಬಗ್ಗೆ ಪ್ರೇಕ್ಷಕರನ್ನು ಆಲೋಚನೆಗೆ ಹಚ್ಚುವ ಮೆಲು ಸಂದೇಶ ನೀಡುತ್ತದೆ. ಆರೋಗ್ಯ ತೊಂದರೆ ಅನುಭವಿಸುವ ಜೀವಂತ ಸ್ಥಿತಿಯ ಜೊತೆಗೆ ಮರಣದ ಭೀಕರತೆಯನ್ನು ತೆರೆದಿಡುತ್ತದೆ. ಅತ್ಯಾಚಾರದಂತಹ ಮಹಾಪಿಡುಗಿನ ಬಗ್ಗೆ ಸಮಾಜ ತಳೆಯಬೇಕಾದ ದೃಢ ನಿರ್ಧಾರವನ್ನು ದಿಟ್ಟವಾಗಿ ಮುಂದಿಡುತ್ತದೆ. ಯಾರದೋ ತಪ್ಪಿಗೆ ಯಾರನ್ನೋ ಅಪರಾಧಿಯಾಗಿಸುವ ನಿಕೃಷ್ಟ ಮನಸನ್ನು ಅಲುಗಾಡಿಸುತ್ತದೆ. ಅತ್ಯಾಚಾರಿಗೆ ಮದುವೆ ಮಾಡುವ ನಿರ್ಧಾರ ಸರಿಯೇ ತಪ್ಪೆ ಎಂಬುದನ್ನು ಕೊನೆಯ ಭಾಗದಲ್ಲಿ ಮನಮುಟ್ಟುವಂತೆ ಚರ್ಚಿಸುತ್ತದೆ. ತಕ್ಷಣಕ್ಕೆ ಪ್ರೇಕ್ಷಕರು ಇದನ್ನು ಒಪ್ಪುತ್ತಾರೋ ಗೊತ್ತಿಲ್ಲ. ಆದರೆ ಅದರ ಔಚಿತ್ಯವನ್ನು ಅಗತ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ವೈಚಾರಿಕವಾದ ಒಂದು ವಿಷಯವನ್ನು ಭಾವಾನಾತ್ಮಕವಾಗಿ ಜನರ ಮನದೊಳಗೆ ಸರಿಸಿ ಹಾಸ್ಯದಷ್ಟೆ ಪ್ರಮುಖವಾಗಿ ವಿಷಯವೂ ಮೆಲುಕು ಹಾಕುವಂತೆ ಮಾಡುತ್ತದೆ ಈ ನಾಟಕ. ವಿಶೇಷವೆಂದರೆ ಈ ನಾಟಕದಲ್ಲಿ ಒಂದೇ ಒಂದು ಕಡೆಯೂ ಡಬಲ್ ಮೀನಿಂಗ್, ಅಸಹ್ಯ, ಅಸಭ್ಯ ಸಂಭಾಷಣೆಯನ್ನಾಗಲಿ ಪದವನ್ನಾಗಲಿ ಬಳಸದೆ ಹೇಗೆ ಪ್ರೇಕ್ಷಕರನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬಹುದು ಎಂಬುದನ್ನು ಕುಸಾಲ್ ಬೊಡ್ಚಿ ನಾಟಕ ಎತ್ತಿತೋರಿಸುತ್ತದೆ. ಧ್ವನಿ ಬೆಳಕು ಸಂಗೀತದ ವಿಚಾರದಲ್ಲಿ ಸಣ್ಣ ಪ್ರಮಾಣದ ಪ್ರಯೋಗ ನಡೆಸಬಹುದಾದರೂ ಸದ್ಯದ ನಾಟಕಕ್ಕೆ ಅವೆಲ್ಲೂ ತೊಡಕಾಗುವುದಿಲ್ಲ.
ಪ್ರಬುದ್ಧ ಕಲಾವಿದರಿಗೆ ಮಾತ್ರ ಇವೆಲ್ಲವನ್ನು ಮಾಡಲು ಸಾಧ್ಯವೆಂದರೆ ತಪ್ಪಾಗಲಾರದು. ಸಮಾಜ ಸೇವಾ ರಂಗದಲ್ಲಿ ಅರಿವು ನೀಡುವ ಮೂಲಕ ಅನೇಕ ಕೆಲಸಗಳನ್ನು ಮಾಡುತ್ತಿರುವ ಭರತ್ ಎಸ್ ಕರ್ಕೇರ ಈ ನಾಟಕವನ್ನು ರಚಿಸಿದರೆ ಪ್ರಭುದ್ಧ ಕಲಾವಿದ ಚಿದಾನಂದ ಅದ್ಯಪಾಡಿಯವರು ನಿರ್ದೇಶಿಸಿ, ನಟಿಸಿದ್ದಾರೆ. ಒಟ್ಟು ತಂಡವನ್ನು ಮುನ್ನಡೆಸುವತ್ತ ರಮೇಶ್ ರೈ ಕುಕ್ಕುವಳ್ಳಿಯವರು ನೇಪತ್ಯವನ್ನು ವಹಿಸಿಕೊಂಡಿರುವುದರ ಜೊತೆಗೆ ನಿವೃತ್ತ ಮಾಸ್ಟ್ರ್ ಆಗಿ ನಟಿಸಿದ್ದಾರೆ. ದೀಪಿಕಾ ಕುಡ್ಲ ನಾಯಕಿ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಬಾಚು ಅದ್ಯಪಾಡಿ, ಸಚಿನ್ ಅಡ್ಯಾರ್, ಸುನಿತಾ ಎಕ್ಕೂರು, ಸಚಿನ್ ಅತ್ತಾಜೆ, ರಕ್ಷಣ್ ಮಾಡೂರು, ರಂಜನ್ ಬೋಳೂರು, ಯಜ್ಞಾ ಪೂರ್ಣಿಮಾ, ವರದ್‌ರಾಜು ನೆತ್ತೆರ್‍ಕೆರೆ.. ಹಾಗೂ ಇನ್ನೂ ಅನೇಕ ಕಲಾವಿದರ ಸಮಗ್ರ ಕಲಾ ಪ್ರೌಢಿಮೆ ನೋಡುಗರನ್ನು ಹಾಸ್ಯಗಡಲಲ್ಲಿ ತೇಲಿಸುವುದರ ಜೊತೆಗೆ ಭಾವನಾ ದೃಶ್ಯಗಳು ಮಂತ್ರಮುಗ್ದರನ್ನಾಗಿಸುತ್ತದೆ. ಉತ್ತಮ ಸಂದೇಶ ಮತ್ತು ಹಾಸ್ಯ ಒಂದೇ ಕಡೆ ದೊರೆಯುವ ಈ ನಾಟಕ ವಿಧಾತ್ರಿ ಕಲಾವಿದರ ಕುಸಾಲ್ ಬೊಡ್ಚಿ ನಾಟಕ ಇನ್ನಷ್ಟು ಪ್ರೇಕ್ಷಕರ ಜೊತೆಯಾಗಿ ಮೆರುಗು ಪಡೆಯಲಿ. ಪ್ರೋತ್ಸಾಹಕರ, ಪ್ರಾಯೋಜಕರ ನೆರವಿನಿಂದ ನೆರವು ಹೆಚ್ಚು ಹೆಚ್ಚು ದೊರೆಯುತು ಇನ್ನಷ್ಟು ಸಾಮಾಜಿಕ ಕಳಕಳಿಯ ನಾಟಕ ನೀಡುವ ಮೂಲಕ ತನ್ನ ಅನನ್ಯತೆ ಉಳಿಸಿ ಬೆಳೆಸಲಿ. ಅಸಭ್ಯ ಮಾತುಗಳು ಅಸಹ್ಯ ನಟನೆಯ ಡಬ್ಬಲ್ ಮೀನಿಂಗ್‌ಗೆ ಅನುವು ಮಾಡಿಕೊಡದ ಕುಟುಂಬ ಸಮೇತರಾಗಿ ನೋಡುವ ನಾಟಕ ತಂಡಗಳ ಪಟ್ಟಿಯಲ್ಲಿರುವ ವಿಧಾತ್ರಿಯು ತನ್ನ ಸ್ಥಾನವನ್ನು ಉಳಿಸಿಬೆಳೆಸಲಿ ಎಂಬ ಸದಾಶಯ ಪ್ರೇಕ್ಷಕರದ್ದು.
ಗುಲಾಬಿ ಮೊಗ್ಗು. ಜ್ಯೋತಿಗುಡ್ಡೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here