ಉಜಿರೆ: ಸ್ಥಳೀಯ ಎಸ್.ಡಿ.ಎಂ. ಕಾಲೇಜಿನಲ್ಲಿರುವ ಡಾ. ಹಾಮಾನಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಸ್.ಡಿ. ಶೆಟ್ಟಿ ಹೊಂಬುಜ ಜೈನ ಮಠದಿಂದ ನೀಡಲಾಗುವ ಸಿದ್ದಾಂತ ಕೀರ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಹೊಂಬುಜ ಜೈನ ಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಶಸ್ತಿ ಮೂವತ್ತೈ ಸಾವಿರ ರೂ. ನಗದು ಮತ್ತು ಫಲಕವನ್ನೊಳಗೊಂಡಿದ್ದು ಮಾ.26 ರಂದು ಹೊಂಬುಜ ಜೈನಮಠದಲ್ಲಿ ನಡೆಯುವ ಧಾಮಿಕ ಸಭೆಯಲ್ಲಿ ಪ್ರಶಸ್ತಿ ನೀಡಿ ಡಾ. ಎಸ್.ಡಿ. ಶೆಟ್ಟಿ ಅವರನ್ನು ಗೌರವಿಸಲಾಗುವುದು.
ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ೩೦ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ. ಎಸ್.ಡಿ. ಶೆಟ್ಟಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹಳದೀಪುರ ನಿವಾಸಿ. ಕನ್ನಡ ಸಾಹಿತ್ಯ, ಸಂಶೋಧನೆ, ವಿಮರ್ಶೆ, ಗ್ರಂಥ ಸಂಪಾದನೆ, ಶಾಸನ ಅಧ್ಯಯನದಲ್ಲಿ ಪರಿಣತರು.
ಪ್ರಸ್ತುತ ಅವರು ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಮತ್ತು ಮಂಜೂಷಾ ವಸ್ತು ಸಂಗ್ರಹಾಲಯ ಹಾಗೂ ಉಜಿರೆಯಲ್ಲಿರುವ ಡಾ. ಹಾಮಾನಾ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
