ಬಂಟ್ವಾಳ: ಬಿ.ಸಿ.ರೋಡ್‌ನ ಸರ್ವಿಸ್ ರಸ್ತೆಯಲ್ಲಿ ಖಾಸಗಿ, ಸರಕಾರಿ ಬಸ್‌ಗಳ ಸಂಚಾರವನ್ನು ಏಕಾಏಕಿಯಾಗಿ ನಿರ್ಬಂಧಿಸಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಬಿ.ಸಿ.ರೋಡ್‌ನ ತಾಲೂಕು ಪಂಚಾಯತ್‌ನ ಸಭಾಂಗಣದಲ್ಲಿ ಗುರುವಾರ ಸಂಜೆ ಸಾರ್ವಜನಿಕರ ಅಭಿಪ್ರಾಯ ಮಂಡನಾ ಸಭೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆಯೇ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಪ್ರಸ್ತಾಪಿಸಿ. ಬಿ.ಸಿ.ರೋಡ್‌ಪೇಟೆ ಬಂಟ್ವಾಳದ ಕೇಂದ್ರಸ್ಥಾನವಾಗಿದ್ದು, ಎಲ್ಲ ಕೆಲಸ ಕಾರ್ಯಗಳ ಮೂಲಸ್ಥಾನವಾಗಿದೆ. ಬಸ್ ಸಂಚಾರ ನಿಬಂಧದಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ. ಮಕ್ಕಳನ್ನು ಕಂಕಳಲ್ಲಿರಿಸಿಕೊಂಡು ಮಹಿಳೆಯರು, ವೃದ್ಧರು ಮೇಲ್ಸತುವೆಯ ತುದಿಯಿಂದ ವಿವಿಧ ಕಚೇರಿಗೆ ಸುಮಾರು 200 ಮೀ. ನಷ್ಟು ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ, ಈ ಸರ್ವಿಸ್ ರಸ್ತೆ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಪಾದಚಾರಿಗಳಿಗೆ ನಡೆದಾಡಲು ಪುಟ್‌ಪಾತ್ ವ್ಯವಸ್ಥೆ ಇಲ್ಲ. ಸರ್ವಿಸ್ ರಸ್ತೆಯ ಪಕ್ಕದ ಜಾಗವನ್ನು ಅಂಗಡಿ ಮಾಲಕರು ಉದ್ದಕ್ಕೆ ಅಕ್ರಮವಾಗಿ ಶೀಟ್ ಅಳವಡಿಸಿ ವ್ಯಾಪಾರ ಮಾಡುತ್ತಿದ್ದಾರೆ. ಇದನ್ನು ಮೊದಲು ತೆರವುಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಅನಧೀಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.
ಆಟೋ ಚಾಲಕರ ಯೂನಿಯನ್‌ನ ಶಂಶುದ್ದೀನ್ ಪಲ್ಲಮಜಲು ಅಭಿಪ್ರಾಯ ಮಂಡಿಸಿ, ಸರ್ವಿಸ್ ರಸ್ತೆಯಲ್ಲಿ ಬಸ್ ಸಂಚಾರದಿಂದ ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗದು. ಬಂದ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿ, ಇಳಿಸಲು ಕೇವಲ 2 ನಿಮಿಷ ಅವಕಾಶ ಮಾಡಬೇಕು. ಬಿ.ಸಿ.ರೋಡ್‌ನಲ್ಲಿ ಗ್ರಾಮಾಂತರ ಆಟೊಗಳನ್ನು ನಿಲ್ಲಿಸಲು ಅವಕಾಶ ನೀಡಬಾರದು. ನಗರ ಮತ್ತು ಗ್ರಾಮಾಂತರ ಆಟೋ ಚಾಲಕರನ್ನು ವಿಂಗಡಿಸಿ, ಗುರುತಿಸುವ ಕಾರ್ಯ ಮಾಡಬೇಕು. ಆಟೊ ಚಾಲಕರಿಗೆ ಪರ್ಮಿಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬಿ.ಸಿ.ರೋಡ್ ನಿವಾಸಿ ಲೋಕೇಶ್ ಸುವರ್ಣ ಮಾತನಾಡಿ, ಬಿ.ಸಿ.ರೋಡ್‌ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುವ ಆಯಕಟ್ಟಿನ ಸ್ಥಳಗಳಲ್ಲಿ ಟ್ರಾಫಿಕ್ ಸಿಬ್ಬಂದಿಯನ್ನು ನೇಮಿಸದೇ ಮೂರ್ನಾಲ್ಕು ಹೋಂಗಾರ್ಡ್‌ಗಳನ್ನು ನಿಲ್ಲಿಸಲಾಗುತ್ತದೆ. ಇವರನ್ನು ಯಾವುದೇ ವಾಹನ ಚಾಲಕರು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹೋಂಗಾರ್ಡ್ ಎಷ್ಟೇ ವಿಸಿಲ್ ಒಡೆದರೂ ಬಸ್ ಚಾಲಕರು ಕ್ಯಾರೇ ಮಾಡುತ್ತಿಲ್ಲ ಎಂದು ದೂರಿದರು.
ಇನ್ನಿತರ ಸಲಹೆಗಳು:
ನಿಯಮ ಉಲ್ಲಂಘನೆ ಮಾಡಿದ ಬಸ್‌ಗಳಿಗೆ ದಂಡ ವಿಧಿಸಿ, ಮುಟ್ಟುಗೋಲು ಹಾಕುವುದು, ಸರ್ವಿಸ್ ರಸ್ತೆಯ ಪಕ್ಕದಲ್ಲಿಯೇ ಹಳೆ ತಾಲೂಕು ಕಚೇರಿಯಿದ್ದ ಜಾಗವನ್ನು ಖಾಸಗಿ ಬಸ್ ನಿಲ್ದಾಣಕ್ಕಾಗಿ ನೆಲಸಮ ಮಾಡಿ ಆ ಜಾಗದಲ್ಲಿ ಬಸ್ ಬೇ ಅಥವಾ ತಾತ್ಕಾಲಿಕ ಬಸ್ ನಿಲ್ದಾಣ ನಿರ್ಮಾಣ ಮಾಡುವುದು, ಸರ್ವಿಸ್ ರಸ್ತೆಯಲ್ಲಿ ಬ್ಯಾರಿಕೇಡ್, ರಿಪ್ಲೇಕ್ ಕೋನ್ ಅಳವಡಿಸುವುದು, ಟ್ರಾಫಿಕ್ ಸಿಬ್ಬಂದಿ ನೇಮಿಸುವುದು, ಬಿ.ಸಿ.ರೋಡ್‌ನಲ್ಲಿ ಪಾರ್ಕಿಂಗ್‌ಗಾಗಿ ಜಾಗವನ್ನು ಗುರುತಿಸುವುದು, ಅಂಗಡಿಗಳ ಮುಂಭಾಗದಲ್ಲಿ ಅಳವಡಿಸಲಾಗಿರುವ ಅಕ್ರಮ ಶೆಡ್‌ಗಳ ತೆರವುಗೊಳಿಸುವುದು, ಮೇಲ್ಸೇತುವೆ ಕೆಳಭಾಗವನ್ನು ಸಮತಟ್ಟು ಮಾಡಿ ಫುಟ್‌ಪಾತ್ ನಿರ್ಮಿಸುವ ಬಗ್ಗೆ ಇನ್ನಿತರ ಸಲಹೆಗಳು ಸಾರ್ವಜನಿರಿಂದ ಕೇಳಿಬಂದವು.
ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಮಾಹಿತಿ ನೀಡಿ, ಬಸ್ ನಿರ್ಬಂಧದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯಗಳಿವೆ. ಈ ರಸ್ತೆಯಲ್ಲಿ ಲೋಕಲ್ ಬಸ್‌ಗಳಿಗೆ ಅನುವು ಮಾಡಿಕೊಡಲಾಗಿದೆ. ಮಂಗಳೂರು, ಬೆಂಗಳೂರು, ಧರ್ಮಸ್ಥಳ ಬಸ್‌ಗಳನ್ನು ಮಾತ್ರ ನಿರ್ಬಂಧಿಸಲಾಗಿದೆ. ಅದಲ್ಲದೆ, ಈ ಸರ್ವಿಸ್ ರಸ್ತೆಯಲ್ಲಿ ಯಾವುದೇ ಅಧಿಕೃತ ತಂಗುದಾಣಗಳು ಇರುವುದಿಲ್ಲ. ಸರ್ವಿಸ್ ರಸ್ತೆಯಲ್ಲಿ ಪ್ರಸ್ತುತ ಬಸ್‌ಗಳು ನಿಲ್ಲಿಸುತ್ತಿರುವ ಸ್ಥಳದಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಕೇವಲ ಅಂದಾಜು 100-150 ಮೀ. ದೂರವಿರುವ ಕಾರಣ
ಈ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ಸರ್ವಿಸ್ ರಸ್ತೆಯ ಅಗಲವು ಕೇವಲ 17 ರಿಂದ 22 ಅಡಿ ಅಗಲವಿದ್ದು, ಇದರಿಂದ ಇಲ್ಲಿ ಬಸ್ ಬಂದು ನಿಲುಗಡೆ ಮಾಡಿದಲ್ಲಿ ಅದರ ಹಿಂದೆ ಹಲವಾರು ವಾಹನಗಳು ಬಂದು ನಿಲ್ಲುವುದರಿಂದ ನಿರಂತರವಾಗಿ ವಾಹನ ಸಂಚಾರಕ್ಕೆ ತಡೆ ಉಂಟಾಗುತ್ತದೆ. ಇದನ್ನು ನಿಭಾಯಿಸಬೇಕಾದರೆ ನಮ್ಮಲ್ಲಿ ಟ್ರಾಫಿಕ್ ಸಿಬ್ಬಂದಿಯ ಕೊರತೆಯಿದೆ ಎಂದು ಹೇಳಿದರು.
ಅಟೊ ಚಾಲಕರೊಂದಿಗೆ ಮಾತುಕತೆ ನಡೆಸಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತ್ಯೇಕ ಅಟೊ ರಿಕ್ಷಾ ಪಾರ್ಕಿಂಗ್ ಮಾಡಲು ಕ್ರಮಕೈಗೊಳ್ಳುವುದಾಗಿ ತಿಳಿಸಲಾಗಿದೆ ಎಂದ ಅವರು, ಅದೇ ರೀತಿ ಆಟೋ ಚಾಲಕರಿಗೆ ಕಲರ್ ನಂಬರ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಎಲ್ಲ ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಸಂಚಾರ ಸಮಯ ನಿಗದಿ ಪಡಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗದು ಕೆಎಸ್ಸಾರ್ಟಿಸಿ ಬಿ.ಸಿ.ರೋಡ್ ವಿಭಾಗದ ಅಧಿಕಾರಿ ಎಚ್.ಬಿ.ಲೋಕಯ್ಯ ತಿಳಿಸಿದರು.
ಸುಗಮ ಸಂಚಾರಕ್ಕಾಗಿ ಸೂಕ್ತ ಕ್ರಮ: ಎಡಿಸಿ
ನಿಮ್ಮ ಅಭಿಪ್ರಾಯಗಳನ್ನು ಸಂಗ್ರಹಿಸಿ, ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸ್, ಆರ್‌ಟಿಒ, ಕೆಎಸ್ಸಾರ್ಟಿಸಿ ಇಲಾಖೆಯೊಂದಿಗೆ ಬಸ್ ಸಂಚಾರದ ಸಾಧಕ-ಬಾಧಕಗಳ ಇನ್ನೊಮ್ಮೆ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಧನಾತ್ಮಕ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಡಿಸನಲ್ ಎಸ್.ಪಿ.ವಿಕ್ರಂ ಬಿ.ಅಮ್ಸೆ ಅವರು ಸಭೆಗೆ ತಿಳಿಸಿದರು.
ಅಡಿಸನಲ್ ಎಸ್.ಪಿ.ವಿಕ್ರಂ ಬಿ.ಅಮ್ಟೆ ಅವರು ಸಭೆಯ ಅಧ್ಯಕ್ಷತೆ ವಹಿಸಿದರು. ಟ್ರಾಫಿಕ್ ಎಸ್ಸೈ ಮಂಜುನಾಥ್ ಅವರು ಸರ್ವಿಸ್ ಬಸ್‌ಗಳ ಸಂಚಾರದಿಂದ ಆಗುವ ಟ್ರಾಫಿಕ್ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ ಗೌಡ, ಬಂಟ್ವಾಳ ಅಪರಾಧ ವಿಭಾಗದ ಎಸ್ಸೈ ಸುಧಾಕರ್ ಜಿ.ತೋನ್ಸೆ, ಬಂಟ್ವಾಳ ಗ್ರಾಮಾಂತರ ಎಸ್ಸೈ ಪ್ರಸನ್ನ, ಟ್ರಾಫಿಕ್ ಪೊಲೀಸರು ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here