Thursday, October 19, 2023

ದ.ಕ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯ: ಇಲ್ಯಾಸ್ ಮುಹಮ್ಮದ್ ತುಂಬೆ

Must read

ಬಂಟ್ವಾಳ: ಕಳೆದ 70 ವರ್ಷಗಳಿಂದ ದ.ಕ. ಜಿಲ್ಲೆಯಲ್ಲಿ ಎರಡೂ ಪಕ್ಷಗಳು ಯಾವುದೇ ಕೊಡುಗೆ ನೀಡಿಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯ ಎಂದು ಲೋಕಸಭಾ ದ.ಕ. ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.
ಅವರು ಶನಿವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದುವರಿಯುತ್ತಿರುವ ಜಿಲ್ಲೆ ಎಂದು ಹೇಳಲಾಗುತ್ತಿರುವ ದ.ಕ.ದಲ್ಲಿ ಪ್ರಾಥಮಿಕ ಸೌಕರ್ಯಗಳೇ ಮರೀಚಿಕೆಯಾಗಿವೆ. ಸರಿಯಾದ ರಸ್ತೆ ವ್ಯವಸ್ಥೆಗಳಿಲ್ಲ. ಶಾಲೆಗಳ ಅವ್ಯವಸ್ಥೆ ಬಹಳ ಶೋಚನೀಯವಾಗಿವೆ. ಉದ್ಯೋಗವಿಲ್ಲದೆ ದೊಡ್ಡಮಟ್ಟದ ಪದವೀಧರ ನಿರುದ್ಯೋಗಿಗಳ ತಂಡವೇ ಜಿಲ್ಲೆಯಲ್ಲಿದೆ. ಪರಿಸರ ಮಾಲಿನ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ ಎಂದು ಹೇಳಿದರು.
ಮೀನುಗಾರ ಸಂಕಷ್ಟ ಬಹಳಷ್ಟಿದ್ದು, ಬೋಟ್ ಹೊಂದಿರುವ ಮೀನುಗಾರರಿಗೆ ಸಬ್ಸಿಡಿಯಲ್ಲಿ ಡಿಸೆಲ್ ಸಿಗುತ್ತಿಲ್ಲ. ಅದಲ್ಲದೆ, ಬೋಟ್ ಸಹಿತ ಮೀನಿಗಾರ ತಂಡವೇ ನಾಪತ್ತೆಯಾಗಿದ್ದು, ಅವರನ್ನು ಹುಡುಕುವ ಕಾರ್ಯಕ್ಕೆ ಸರಕಾರ ಮುಂದಾಗದೇ ಇರುವುದು ಖೇದಕರ. ಮರಳು ಮಾಫಿಯ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದ ಸಾಂಪ್ರದಾಯಿಕ ಮರಳುಗಾರಿಕೆಗೆ ತೊಂದರೆಯಾಗುತ್ತಿದೆ. ಜಿಲ್ಲೆಯ ಸಂಸದರಿಗೆ ಕಳೆದ ೧೦ ವರ್ಷಗಳಿಂದ ಸೇತುವೆಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಗಳು ಹದಗೆಟ್ಟಿವೆ. ಅಡಿಕೆ, ಗೇರು, ರಬ್ಬರ್ ಬೆಳೆಗಾರರಿಗೆ ಸಂಕಷ್ಟದ ಬದುಕು ಎದುರಾಗಿದೆ ಎಂದರು.
ನಳಿನ್ ಕುಮಾರ್ ಕಟೀಲು ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರ ಸಂಚಾರ ಮಾಡುತ್ತಾರೆಯೇ ವಿನಃ ಈ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವೇ ಅವರಿಗಿಲ್ಲ. ಕೋಮುವಾದ, ಶವ ರಾಜಕೀಯ, ಜಿಲ್ಲೆಯ ಬೆಂಕಿ ಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ. ಇದರಿಂದ ಜನರ ನಡುವೆ ಅವಿಶ್ವಾಸದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು, ಜಿಲ್ಲೆಯ ಅಭಿವೃದ್ಧಿ ಹಾಗೂ ಶಾಂತಿ ಸೌಹಾರ್ದತೆಗಾಗಿ ಎಸ್ಡಿಪಿಐ ಕಣಕ್ಕಿಳಿದಿದ್ದು, ಗ್ಯಾಸ್ ಸಿಲಿಂಡರ್ ನಮ್ಮ ಚಿಹ್ನೆ ಎಂದು ಹೇಳಿದರು.
ಕಾಂಗ್ರೆಸ್-ಬಿಜೆಪಿಯ ದುರಾಡಳಿತದ ಬಗ್ಗೆ ಜನರು ಬೇಸತ್ತಿದ್ದು, ಜಿಲ್ಲೆಯ ಎಲ್ಲ ಸಮುದಾಯದ ಜನರು ಎಸ್ಡಿಪಿಐಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಒಟ್ಟು ೧೮೬೧ ಬೂತ್‌ಗಳಲ್ಲಿದ್ದು, ಪ್ರತೀ ಬೂತ್‌ಗಳಿಂದ ೨೦ ಮಂದಿ ಕಾರ್ಯಕರ್ತರು ಮನೆ, ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಎಸ್ಡಿಪಿಐ ಹಾಗೂ ಬಿಜೆಪಿಯ ನಡುವೆ ನೇರ ಪೈಪೋಟಿಯಿದ್ದು, ಎಸ್ಡಿಪಿಐಗೆ ಜಯ ಅಥವಾ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಎಸ್ಡಿಪಿಐ ದೊಡ್ಡ ಪಕ್ಷವಾಗಿ ನೆಲೆನಿಲ್ಲಲಿದೆ. ಪ್ರಚಾರದಲ್ಲಿ ವೇಳೆ ಎಲ್ಲ ಸಮುದಾಯದ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದು, ವಿಶೇಷವಾಗಿ ಯುವ ಜನತೆಯು ಪಕ್ಷದದತ್ತ ಒಳವು ತೋರುತ್ತಾ ಪಕ್ಷಕ್ಕಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಸದಸ್ಯ ಅನ್ವರ್ ಸಾದತ್, ಜಿಲ್ಲಾ ಮುಖಂಡರಾದ ಶಾಹುಲ್ ಎಸ್.ಎಚ್., ಹನೀಫ್ ಖಾನ್ ಕೊಡಾಜೆ, ಇಸ್ಮಾಯಿಲ್ ಬಾವ, ಮುನೀಶ್ ಅಲಿ ಉಪಸ್ಥಿತರಿದ್ದರು.

More articles

Latest article