ಬಂಟ್ವಾಳ: ಕೇಂದ್ರ ಸರಕಾರದ ರೈತ ಸಮ್ಮಾನ ಯೋಜನೆಗೆ ಇದುವರೆಗೆ 2068 ಅರ್ಜಿಗಳು ಸಲ್ಲಿಕೆಯಾಗಿದ್ದು,   ಗ್ರಾಮೀಣ ಮಟ್ಟದಲ್ಲಿ ರೈತಸಮ್ಮಾನ್ ಅರ್ಜಿ ಈ ಯೋಜನೆಗೆ ರೈತರಿಂದ ಅರ್ಜಿ ಸ್ವೀಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಬಂಟ್ವಾಳ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಹೇಳಿದರು.

ಬಂಟ್ವಾಳ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,  ಗ್ರಾಮಮಟ್ಟದಲ್ಲಿರುವ ಬಾಪೂಜಿ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರ, ಅಟಲ್ ಜೀ ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರ ಮಾಡಲಾಗುತ್ತಿದ್ದು, ರೈತರು ಯಾವುದೇ ಗೊಂದಲಕ್ಕೊಳಗಾಗುವ ಅವಶ್ಯಕತೆ ಇಲ್ಲ. ಪ್ರತಿಯೊಂದು ಪಂಚಾಯತ್ ಗಳಲ್ಲಿ ರೈತರ ಪಟ್ಟಿಯನ್ನು ಈಗಾಗಲೇ ನೀಡಲಾಗಿದ್ದು, ಇದಕ್ಕಾಗಿಯೇ ಗ್ರಾಮಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಅವರಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಮಾ.15ರ ಒಳಗಾಗಿ ಇಲಾಖೆಗಳಿಗೆ ನೀಡಲಾಗಿರುವ ಗುರಿಯನ್ನು ಪೂರ್ಣಗೊಳಿಸಿ,  ಯಾವುದೇ ಸರಕಾರಿ ಯೋಜನೆಯ ಅನುದಾನ ಲ್ಯಾಪ್ಸ್ ಆಗದಂತೆ  ಎಚ್ಚರ ವಹಿಸುವಂತೆ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ   ಸೂಚಿಸಿದರು.

ಒಂದು ಅಡುಗೆ  ಮನೆಗೆ ಒಂದೇ ಪಡಿತರ:  ಒಂದು ಮನೆಗೆ ಒಂದೇ ಪಡಿತರ ಇರಬೇಕಾಗಿದೆ. ಕೆಲವೆಡೆ ಒಂದು ಮನೆಗೆ ಎರಡು ಪಡಿತರ ಕಾಢ್೯ ಇರುವ ಪ್ರಕರಣಗಳಿದ್ದು, ಅವುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಇದೀಗ ಬಯೋಮೆಟ್ರಿಕ್, ತಂಬ್ ವ್ಯವಸ್ಥೆಯಿಂದ ಬೋಗಸ್ ಪಡಿತರ ಕಾಡ್೯ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಆಹಾರ ಪೂರೈಕೆಯ ಅಧಿಕಾರಿ ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರ ಪ್ರಶ್ನೆಗೆ ತಿಳಿಸಿದರು. ವಿವಿಧ ಕಾರಣಗಳಿಗೆ ಐವರು ಬಿಪಿಎಲ್ ಪಡಿತರದಾರರು ವಾಪಾಸ್ ನೀಡಿದ್ದು, ಅದನ್ನು ಅಮಾನತಿನಲ್ಲಿಡಲಾಗಿದೆ. 4320 ಅರ್ಜಿಗಳು ಬಂದಿದ್ದು, ಈ ಪೈಕಿ 521 ಅರ್ಜಿ ವಿಲೇವಾರಿಗೆ ಬಾಕಿ ಇದೆ ಎಂದು ಆಹಾರ ಪೂರೈಕೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಪಿಡಬ್ಲುಡಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಉಮೇಶ್ ಭಟ್ ಇಲಾಖೆಯ ಪ್ರಗತಿಯ ವಿವರಗಳನ್ನು ನೀಡಿ, ಆಗಬೇಕಾದ ರಸ್ತೆ ಕಾಮಗಾರಿಗಳ ಪಟ್ಟಿಯನ್ನು ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಬಿ.ಸುರೇಶ್, ಪ್ರವೀಣ್ ಜೋಷಿ, ನಾರಾಯಣ ಭಟ್, ಸುಧಾ ಜೋಷಿ, ಮಲ್ಲಿಕಾ, ಶಿವಪ್ರಕಾಶ್, ದೀಪಾ ಪ್ರಭು, ನೋಣಯ್ಯ ತಮ್ಮ ಇಲಾಖೆಗಳ ಮಾಹಿತಿಗಳನ್ನು ಒದಗಿಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಲಹೆ ಸೂಚನೆಗಳನ್ನು ನೀಡಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here