Thursday, October 19, 2023

ಅರ್ಕುಳ ಕ್ಷೇತ್ರದಿಂದ ಪೊಳಲಿ ಕ್ಷೇತ್ರಕ್ಕೆ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ

Must read

ಶ್ರೀ ಕ್ಷೇತ್ರ ಪೊಳಲಿಯ ಬ್ರಹ್ಮಕಲಶಾಭಿಷೇಕದ ಪುಣ್ಯವಸರದಲ್ಲಿ
ಅರ್ಕುಳದಿಂದ ಪೊಳಲಿಗೆ ಶ್ರೀ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆ
ಶ್ರದ್ಧಾಭಕ್ತಿಯ ದಿವ್ಯ ಸಂಚಲನವನ್ನು ಮೂಡಿಸಲಿರುವ ಪರಂಪರಾನುಗತ ಶೋಭಾಯಾತ್ರೆ

ತುಳುನಾಡು ದೇವಸ್ಥಾನ, ದೈವಸ್ಥಾನಗಳ ಆಗರ, ನಮ್ಮ ನಡೆ-ನುಡಿ ಸಂಪ್ರದಾಯಗಳು ಅನನ್ಯ. ನಿತ್ಯ ನಡೆಯುವ ಆರಾಧನೆಯಿಂದ ಮೊದಲ್ಗೊಂಡು ಉತ್ಸವಗಳವರೆಗೆ ವಿವಿಧ ಬಗೆಯಲ್ಲಿ ಪೂಜೆ-ಪುರಸ್ಕಾರ ಹೊಂದುತ್ತಿರುವ ದೈವಾರಾಧನೆ ಜನಪದರ ಶ್ರದ್ಧಾ ಭಕ್ತಿಗಳ ಆರಾಧನಾ ವಿಧಾನ.
ಶ್ರದ್ಧಾ ಭಕ್ತಿ ಹಾಗೂ ಸಾಮರಸ್ಯದ ಕ್ಷೇತ್ರವಾದ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಸಾನಿಧ್ಯಕ್ಕೆ ಹಲವು ಶತಮಾನಗಳ ಇತಿಹಾಸ ಇದೆ. ರಾಜಮನೆತನಗಳಿಂದ ಪೂಜಿಸಲ್ಪಡುತ್ತಿದ್ದ ಅರ್ಕುಳ ಧರ್ಮದೇವತೆಗಳ ಪೂಜೆ, ಮೆಚ್ಚಿ ಉತ್ಸವಗಳು ಅರ್ಕುಳ ಬೀಡು ಮನೆತನದವರ ಹಿರಿತನದಲ್ಲಿ ಧಾರ್ಮಿಕ ಪರಂಪರೆ, ಸಾಂಪ್ರದಾಯಿಕವಾದ ರೀತಿ ರಿವಾಜುಗಳಿಗೆ ಅನುಗುಣವಾಗಿ ಅನೂಚಾನವಾಗಿ ತಲ ತಲಾಂತರಗಳಿಂದ ಅವಿಚ್ಚಿನ್ನವಾಗಿ ನಡೆದುಕೊಂಡು ಬರುತ್ತಿದೆ. ಧಾರ್ಮಿಕ ಚೌಕಟ್ಟಿನಲ್ಲಿ ತಲತಲಾಂತರಗಳಿಂದ ವ್ಯವಸ್ಥಿತವಾಗಿ ನಡೆದು ಬರುತ್ತಿರುವ ನೇಮ ಉತ್ಸವಗಳಿಗೆ ಅದರದ್ದೇ ಆದ ನಂಬಿಕೆ ಕಟ್ಟುಪಾಡುಗಳಿವೆ.
ಅರ್ಕುಳ ಬೀಡು ಮಂಗಳೂರು ತಾಲೂಕಿನಲ್ಲಿ ಮಂಗಳೂರಿನಿಂದ 14 ಕಿಲೋಮಿಟರ್ ದೂರದಲ್ಲಿ ನೇತ್ರಾವತೀ ನದಿಯ ತೀರದಲ್ಲಿದೆ. ಅರ್ಕುಳ ಬೀಡು ಮನೆತನದವರು ಜೈನ ಮತಾವಲಂಬಿಗಳಾಗಿದ್ದು ತಲ ತಲಾಂತರಗಳಿಂದ ಬೀಡಿನ ಮನೆಯ ಶ್ರೀ ಪಾರ್ಶ್ವನಾಥ ಬಸದಿ, ಶೀ ಅನಂತನಾಥ ಬಸದಿ, ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನ ಹಾಗೂ ಅದಕ್ಕೆ ಸಂಭಂದಪಟ್ಟ ಪರಿವಾರ ದೈವಗಳ ವಿನಿಯೋಗಾದಿಗಳು ನಡೆಯುತ್ತಿದೆ. ಅರ್ಕುಳ ಬೀಡಿನ ನಾಯಕರು ಹಿಂದೆ 400 ಸೈನಿಕರನ್ನು ಹೊಂದಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಕೈಫ಼ಿತ್ತುಗಳು ಎಂಬ ಪುಸ್ತಕದಲ್ಲಿ ದಾಖಲಿಸಲಾಗಿದೆ. ಬೀಡಿನ ಹಿಂದೆ ಇರುವ ಕೋಟೆಯ ಕುರುಹು ಬೀಡಿನ ಹಿಂದಿನ ಚಟುವಟಿಕೆಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ.
ಅರ್ಕುಳ ಬೀಡಿನ ಶ್ರೀ ಪಾರ್ಶ್ವನಾಥ ಬಸದಿ, ಶ್ರೀ ಅನಂತನಾಥ ಬಸದಿ, ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದಲ್ಲಿ ನಿತ್ಯ ಪೂಜೆ, ಪ್ರತಿ ಸಂಕ್ರಮಣದಂದು ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯುತ್ತಿದೆ. ವಾರ್ಷಿಕವಾಗಿ ಗರಡಿ ಚಾವಡಿಯಲ್ಲಿ ಪುದ್ದಾರ್ದ ಮೆಚ್ಚಿ, ದೊಂಪದಬಲಿ ಹಾಗೂ ಸಾಣದ ಜಾತ್ರೆ ಹೀಗೆ ಮೂರು ಮೆಚ್ಚಿ ಉತ್ಸವಗಳು ಸಂಪನ್ನಗೊಳ್ಳುತ್ತದೆ.

ಶ್ರೀ ರಾಜರಾಜೇಶ್ವರಿ ದೇವಿಯು ದುಷ್ಟ ಸಂಹಾರಕ್ಕಾಗಿ ಘೋರರೂಪದ ಮಹಾಘೋರದೇವಿಯಾಗಿ ಮೂಡಿ ಬಂದು ದುಷ್ಟರ ಸಂಹಾರ ಮಾಡಿ ಭಕ್ತರ ಸಂರಕ್ಷಣೆ ಮಾಡುವ ಮಹಾತಾಯಿಯಾಗಿ ನೆಲೆಗೊಂಡಿರುವುದಾಗಿ ಪುರಾಣಗಳಲ್ಲಿ ತಿಳಿದುಬರುತ್ತದೆ.
ಪೊಳಲಿಯಿಂದ ದಕ್ಷಿಣದಲ್ಲಿರುವ ಶ್ರೀ ಕ್ಷೇತ್ರ ಅರ್ಕುಳದಲ್ಲಿ ಮಹಾಘೋರದೇವಿಯು ಭಕ್ತರನ್ನು ಮಕ್ಕಳಂತೆ ಪೊರೆಯುವ ಮಾತೃಸ್ವರೂಪಿ ಮಕರಂತಾಯಿ/ ಮಗೃಂತಾಯಿ ನಾಮಾಂಕಿತದೊಂದಿಗೆ ದುಷ್ಟ ನಿಗ್ರಹ, ಶಿಷ್ಟ ಸಂರಕ್ಷಣೆಗಾಗಿ ಧರ್ಮದೇವತೆಯಾಗಿ ಶಂಕಚಕ್ರ ಖಡ್ಗಧಾರಿಣಿಯಾಗಿ ಭಕ್ತರಿಗೆ ಅಭೀಷ್ಟಪ್ರದಾಯಿನಿಯಾಗಿ ನೆಲೆನಿಂತಿರುವುದಾಗಿ ಪ್ರತೀತಿ.
ಧರ್ಮಸಂಸ್ಥಾಪನೆಗಾಗಿ ಧರೆಗಿಳಿದ ಉಳ್ಳಾಕ್ಲು ಧರ್ಮದೇವತೆಗಳು ಮಗೃಂತಯಿಯ ಕಾರಣಿಕ ಹಾಗೂ ಅರ್ಕುಳ ಬೀಡಿನ ನಾಯಕರ ಧರ್ಮನಿಷ್ಠೆಗೆ ಒಲಿದು ಅರ್ಕುಳದಲ್ಲಿ ನೆಲೆನಿಂತರೆಂದು ಪಾಡ್ದನಗಳಿಂದ ತಿಳಿದುಬರುತ್ತದೆ.
ಶ್ರೀ ಕ್ಷೇತ್ರ ಪೊಳಲಿಯ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಶ್ರೀ ಕ್ಷೇತ್ರ ಅರ್ಕುಳದ ಧರ್ಮದೇವತೆಗಳಿಗೂ ಅವಿನಾಭಾವ ಸಂಬಂಧ. ಈ ಹಿನ್ನೆಲೆಯಲ್ಲಿ ಪೊಳಲಿಯ ಶ್ರೀ ರಾಜರಾಜೇಶ್ವರಿ ಸನ್ನಿಧಾನದಲ್ಲಿ ವರ್ಷಾವಧಿ ಜಾತ್ರೆಯ ಸಂದರ್ಭದಲ್ಲಿ ದ್ವಜಾವರೋಹಣದ ದಿನ ರಾತ್ರಿ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ನೇಮವು ಹಲವು ಶತಮಾನಗಳಿಂದ ನಡೆಯುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ. ಆದರೆ ಕಾರಣಾಂತರಗಳಿಂದ ಸುಮಾರು ಏಳೆಂಟು ದಶಕಗಳಿಂದ ಈ ಸೇವೆಯು ನಡೆಯುತ್ತಿಲ್ಲ.
ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪುನರ್ನಿರ್ಮಾಣದ ಆಶಯದ ಹಿನ್ನೆಲೆಯಲ್ಲಿ ಶ್ರೀ ಪೊಳಲಿ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆ ನಡೆಸಿದಾಗ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಮಾಡ ಹಾಗೂ ಸಾಣವನ್ನು ಪುನರ್ನವೀಕರಣ ಮಾಡಿ ವರ್ಷಾವಧಿ ಜಾತ್ರೆಯ ಸಮಯದಲ್ಲಿ ಪೂರ್ವಕಟ್ಟುಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ಶ್ರೀ ಕ್ಷೇತ್ರ ಪೊಳಲಿಗೆ ಆಗಮಿಸಿ ಮೆಚ್ಚಿ ಸೇವೆ ನಡೆಯಲೇ ಬೇಕೆಂದು ತಿಳಿದುಬಂದಿದೆ.
ಪ್ರಶ್ನಾಚಿಂತನೆಯಲ್ಲಿ ತಿಳಿದುಬಂದಂತೆ ಶ್ರೀ ಕ್ಷೇತ್ರ ಪೊಳಲಿಯಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ವಾಸ್ತುಶಿಲ್ಪಗಳಿಗೆ ಅನುಗುಣವಾಗಿ ಹಾಗೂ ಶಾಸ್ತ್ರೋಕ್ತವಾಗಿ ಸುಂದರವಾದ ಮಾಡ ಹಾಗೂ ಸಾಣವನ್ನು ಪುನರ್ನವೀಕರಣ ಮಾಡಿ ಮೆಚ್ಚಿ ಸೇವೆಯ ವ್ಯವಸ್ಥೆಯನ್ನು ಮಾಡಿರುತ್ತಾರೆ.
ಆ ಪ್ರಯುಕ್ತ ಈ ವರ್ಷ ಅರ್ಕುಳ ಬೀಡಿನಿಂದ ಶ್ರೀ ಕ್ಷೇತ್ರ ಪೊಳಲಿಗೆ ಎರಡು ಬಾರಿ, ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೆಯ ಪುಣ್ಯವಸರದಲ್ಲಿ ಭಂಡಾರ ಹೋಗಿ ನೇಮ ಸೇವೆಯು ಸಂಪನ್ನಗೊಳ್ಳಲಿದೆ. ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವವುಳ್ಳ ಮತ್ತು ತುಳುನಾಡಿನಲ್ಲಿಯೇ ಅತೀ ದೀರ್ಘವಾದ ಪರಂಪರಾನುಗತ ಶೋಭಾಯಾತ್ರೆಯು ಧಾರ್ಮಿಕತೆಯ ಸೊಗಡಿನೊಂದಿಗೆ ಜನಮಾನಸದಲ್ಲಿ ಶ್ರದ್ಧಾಭಕ್ತಿಯ ದಿವ್ಯ ಸಂಚಲನವನ್ನು ಮೂಡಿಸಲಿದೆ.

ಮಾ.8ನೇ ಶುಕ್ರವಾರ ಪ್ರಾತಕಾಲ 6.30ಕ್ಕೆ ಅರ್ಕುಳ ಬೀಡಿನಿಂದ ಹೊರಟು ಮೇರಮಜಲು(7.30), ಕುಟ್ಟಿಕಳ(8.15) ತೇವುಕಾಡು(8.45) ಮಹಮ್ಮಾಯಿ ಕಟ್ಟೆ(9.15), ಅಮ್ಮುಂಜೆ(10.30), ಬಡಕಬೈಲು(11) ಪುಂಚಮೆ(11.15) ಮಾರ್ಗವಾಗಿ ಶ್ರೀ ಧರ್ಮದೇವತೆಗಳ ಭಂಡಾರದ ಶೋಭಾಯಾತ್ರೆಯು 11.30 ಕ್ಕೆ ಶ್ರೀ ಕ್ಷೇತ್ರ ಪೊಳಲಿ ತಲುಪಲಿದೆ.
ಮಾ.13ನೇ ಬುಧವಾರ, ಬ್ರಹ್ಮಕಲಶಾಭಿಷೇಕದಂದು ರಾತ್ರಿ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳಿಗೆ ನೇಮ ಸೇವೆಯು ಸಂಪನ್ನಗೊಳ್ಳಲಿದೆ.
ಮಾ.14ನೇ ಗುರುವಾರ ಮಹಾಸಂಪ್ರೋಕ್ಷಣೆಯ ನಂತರ ಅಪರಾಹ್ನ 3 ಗಂಟೆಗೆ ಭಂಡಾರವು ಪೊಳಲಿಯಿಂದ ಹೊರಟುಬ॒ಡಕಬೈಲು(3.30), ಧನುಪೂಜೆ(4), ಕ॒ಲ್ಪನೆ(4.30), ನೆತ್ರೆಕೆರೆ(5) ಕಡೆಗೋಳಿ (5.30) ಫರಂಗಿಪೇಟೆ ಮಾರ್ಗವಾಗಿ ಸಂಜೆ 6 ಗಂಟೆಗೆ ಅರ್ಕುಳ ಬೀಡು ತಲುಪಲಿದೆ.
ನಮ್ಮ ವಿಶಿಷ್ಟ ಆಚಾರ, ವಿಚಾರ, ನಂಬಿಕೆ, ನಡವಳಿಕೆ, ಸಂಪ್ರದಾಯ ಹಾಗೂ ಆಚರಣೆಗಳನ್ನು ಉಳಿಸಿ ಬೆಳೆಸಿ ನಮ್ಮ ಮುಂದಿನ ತಲೆಮಾರಿಗೆ ತಲುಪಿಸಬೇಕಾದದ್ದು ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ಸುಮಾರು ಏಳೆಂಟು ದಶಕಗಳ ಬಳಿಕ ಶ್ರೀ ದೇವಿಯ ಆಶಯದಂತೆ ಅರ್ಕುಳದಲ್ಲಿ ನಿತ್ಯ ಪೂಜೆ ಹಾಗೂ ಉತ್ಸವಗಳ ಮೂಲಕ ಸೇವೆಯನ್ನು ಪಡೆಯುವ ಭಕ್ತರ ಪಾಲಿನ ಅಭೀಷ್ಟಫಲದಾಯಿನಿಯರಾದ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಭಂಡಾರದ ಶೋಭಾಯತ್ರೆಯು ಅರ್ಕುಳ ಬೀಡಿನಿಂದ ಪೊಳಲಿಗೆ ತೆರಳಿ ಪುನರ್ನವೀಕೃತ ಗುಡಿಯಲ್ಲಿ ಪ್ರಥಮ ಮೆಚ್ಚಿ ಸೇವೆಯನ್ನು ಪಡೆಯುವ ಪುಣ್ಯವಸರದಲ್ಲಿ ಪಾಲ್ಗೊಂಡು ಶ್ರೀ ದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಕ್ಷೇತ್ರದ ಧರ್ಮದರ್ಶಿಗಳು  ವಜ್ರನಾಭ ಶೆಟ್ಟಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   

More articles

Latest article