ಬಂಟ್ವಾಳ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಮನೆಮಾಡಿದೆ. ಮಾ.4ರಿಂದ 13ರವರೆಗೆ ವೈವಿಧ್ಯಮಯ ವೈದಿಕ-ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಭಾಗಗಳಿಂದ ಹಸಿರುವಾಣಿ ಹೊರೆಕಾಣಿಕೆ ಹರಿದುಬರುತ್ತಿದೆ.  ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಹಾಗೂ ಮೂಡಬಿದಿರೆಯ ಚೌಟರಸರ ಅರಮನೆಯಿಂದ,ಬಂಟ್ವಾಳ ತಾ.ನಿಂದ ಹೊರೆಕಾಣಿಕೆ ಆಗಮಿಸಿದ್ದು, ದೇವಸ್ಥಾನದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಪುತ್ತಿಗೆ ಹಾಗು ಚೌಟರಸರರಿಗೂ ಪೊಳಲಿಗೆ ಒಂದು ರೀತಿಯ ವಿಶೇಷ ಸಂಬಂಧವಿದೆ. ಯಾಕೆಂದರೆ ಪೊಳಲಿಯ ಜಾತ್ರೆಯ ದಿನ ನಿಗದಿಪಡಿಸುವ ಮುನ್ನ ಪೊಳಲಿಯ ನಟ್ಟೋಜರು ಪುತ್ತಿಗೆ ಜೋಯಿಸರಲ್ಲಿಗೆ ತೆರಳಿ ದಿನ ನಿಗದಿ ಮಾಡಿ ಬರುತ್ತಾರೆ. ಮರುದಿನ ಕುದಿ ಕರೆಯುವ ಮುನ್ನ ಆರಾಡದ ದಿನಗಳನ್ನು ಸೇರಿಗಾರನ ಕಿವಿಯಲ್ಲಿ ಉಸುರಿ, ಸೇರಿಗಾರರು ಕುದಿ ಕರೆಯುವ ಪಂಬದರಲ್ಲಿ ಹೇಳುತ್ತಾರೆ. ಪಂಬದರು ಡಂಗೂರದ ರೀತಿಯಲ್ಲಿ ದೇವಸ್ಥಾನದಲ್ಲಿ ನಡೆಯಲಿರುವ ಜಾತ್ರಾದಿನಗಳ ಬಗ್ಗೆ ಹೇಳಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆಯುವ ವೈದಿಕ ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿದ್ದು ಮಂಗಳವಾರ ಬೆಳಗ್ಗಿನಿಂದ ಅಥರ್ವಶೀರ್ಷ ಗಣಯಾಗ, ಶ್ರೀ ದುರ್ಗಾಪರಮೇಶ್ವರಿ ಮತ್ತು ಸಹಪರಿವಾರ ರಾಜರಾಜೇಶ್ವರಿ ದೇವರುಗಳಿಗೆ ಕ್ಷಾಲಾನಾದಿ ಬಿಂಬಶುದ್ಧಿ, ಶಾಂತಿಹೋಮಗಳು, ಪ್ರಾಯಶ್ಚಿತ ಹೋಮಗಳು, ಹೋಮ ಕಲಶಾಭಿಷೇಕ ನಡೆಸಿ ಮಧ್ಯಾಹ್ನ ಮಹಾಪೂಜೆ ನಡೆಸಲಾಯಿತು. ಸಂಜೆ ಅಂಕರಾರೋಹಣೆ, ಭದ್ರಕಾಳಿಗೆ ಮಂಡಲಪೂಜೆ, ಮಹಾಪೂಜೆ ಹಾಗು ಕುಂಡ ಶುದ್ಧಾದಿ ಪ್ರಕ್ರಿಯೆಗಳು ನಡೆದವು.
ಬುಧವಾರ ಬೆಳಗ್ಗೆ ೬ರಿಂದ ಪುಣ್ಯಾಹ, ಗಣಪತಿ ಹೋಮ, ವಿಷ್ಣುಸಹಸ್ರನಾಮ ಹೋಮ, ಸಪರಿವಾರ ಶ್ರೀರಾಜರಾಜೇಶ್ವರಿ ದೇವರುಗಳಿಗೆ ಕ್ಷಾಲನಾದಿ ಬಿಂಬಶುದ್ಧಿ, ಸ್ಕಂದಪ್ರೋಕ್ತ ಹೋಮ, ವಿಘ್ನಪ್ರೋಕ್ತಹೋಮ, ದ್ವಾರಶಾಂತಿ, ಭದ್ರಕಾಳಿ ದೇವರಿಗೆ ವಿಶೇಷ ಶಾಂತಿಹೋಮ, ಹೋಮ ಕಲಶಾಭಿಷೇಕ, ಅಂಕುರ ಪೂಜೆ ಮಧ್ಯಾಹ್ನ ಮಹಾಪೂಜೆ ಜರುಗಲಿದೆ. ಸಾಯಂಕಾಲ ೫ರಿಂದ ದುರ್ಗಾಪೂಜೆ, ಕುಂಡಶುದ್ಧಾದಿಗಳು, ಅಂಕುರ ಪೂಜೆ ಹಾಗು ಮಹಾಪೂಜೆ ನಡೆಯಲಿದೆ.
ವೇದಿಕೆಯಲ್ಲಿ ಬೆಳಿಗ್ಗೆ 8.30ರಿಂದ ಮೇಘ ಸಾಲಿಗ್ರಾಮ ಹಾಗು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, 9.30ರಿಂದ ಶ್ರೀಮಂಜುನಾಥೇಶ್ವರ ಕಾಳಭೈರವ  ಭಜನಾ ಮಂದಿರ ಮಟ್ಟಿ ಮಳಲಿ ತಂಡದಿಂದ ಭಜನೆ, 10.30ರಿಂದ ಶ್ರೀದೇವಿ ಭಜನಾ ಮಂಡಳಿ ಮೂಡುಶೆಡ್ಡೆ ತಂಡದಿಂದ ಭಜನೆ, ಸಂಜೆ 4ರಿಂದ ಶ್ರೀಗಣೇಶ್ ಮತ್ತು ಪಾಂಡುರಂಗ ಭಜನಾ ಮಂಡಳಿ ವಾಮದಪದವು ತಂಡದಿಂದ ಭಜನೆ ನಡೆಯಲಿದೆ.
ಶ್ರೀರಾಜರಾಜೇಶ್ವರಿ ವೇದಿಕೆಯಲ್ಲಿ 11.30ರಿಂದ ರಾಜೇಶ್ ಪೊಳಲಿ ಅವರಿಂದ ಸ್ಯಾಕ್ಸೋಫೋನ್ ವಾದನ, ಮಧ್ಯಾಹ್ನ 12.30ರಿಂದ ಶಿವಾಂಕಂ ಬೆಂಗಳೂರು ಅವರಿಂದ ಭರತನಾಟ್ಯ, ಮಧ್ಯಾಹ್ನ 1.30ರಿಂದ ಅತ್ರೇಯಿ ಕೃಷ್ಣ ಕಾರ್ಕಳ ಇವರಿಂದ ಕರ್ಣಾಟಕ ಸಂಗೀತ, 2.30ರಿಂದ ಅಶ್ವಿನಿ ಕುಂಡದಕುಳಿ ಅವರಿಂದ ಯಕ್ಷಗಾನ ನಡೆಯಲಿದೆ.  ಸಂಜೆ 7ರಿಂದ ಫಯಾಸ್‌ಖಾನ್ ಮತ್ತು ಬಳಗ ಬೆಂಗಳೂರು ಇವರಿಂದ ಹಿಂದೂಸ್ಥಾನಿ ಗಾಯನ, ರಾತ್ರಿ 9ರಿಂದ ನೃತ್ಯ ನಿಕೇತನ ಕೊಡವೂರು ಪ್ರಸ್ತುತ ಪಡಿಸುವ ನೃತ್ಯ ವೈವಿಧ್ಯ-ನಿರ್ದೇಶನ ವಿದ್ವಾನ್ ಸುದೀರ್ ರಾವ್ ಕೊಡವೂರು, ರಾತ್ರಿ 10ರಿಂದ ಶ್ರೀ ಭಗವತೀ ತೀಯಾ ಸೇವಾ ಸಮಿತಿ ಪೊಳಲಿ ಇವರಿಂದ ಯಕ್ಷಗಾನ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ: ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು, ಶ್ರೀಗುರುದೇವದತ್ತ ಸಂಸ್ಥಾನಂ ಶ್ರೀಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here