Tuesday, October 31, 2023

’ಆತ್ಮವಿಶ್ವಾಸದಿಂದ ಎಲ್ಲವೂ ಸಾಧ್ಯ’-ಒಡಿಯೂರುಶ್ರೀ

Must read

ಒಡಿಯೂರು : ಆತ್ಮವಿಶ್ವಾಸದಿಂದ ಅಸಾಧ್ಯವೂ ಸಾಧ್ಯವಾಗುತ್ತದೆ. ಯಶಸ್ವಿಯಾಗುತ್ತದೆ. ವ್ಯಕ್ತಿಗಿಂತ ಸಂಘ-ಸಂಸ್ಥೆ ಶ್ರೇಷ್ಠವಾದುದು. ಈ ಬಾರಿಯೂ ಶ್ರೀಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆಯಲ್ಲಿ ಅವಿರತವಾಗಿ ಶ್ರಮಿಸಿದ ಕಾರ್‍ಯಕರ್ತರ ಅಭಿನಂದನೆ ಸಭೆಯಲ್ಲಿ ಆಶೀರ್ವಚನ ನೀಡಿದರು. ಅಭಿನಂದನ್ ಅವರ ದೇಶಸೇವೆಗೆ ಅಭಿನಂದನೆ ಸಲ್ಲಿಸಬೇಕು. ಸೈನಿಕರ ಸೇವೆಯನ್ನು ರಾಜಕೀಯವಾಗಿ ಬಳಸಕೂಡದು. ರಾಷ್ಟ್ರಕ್ಕೆ ಅನ್ಯಾಯವಾಗುತ್ತಿರುವಾಗ ರಾಜಕೀಯ ತೊರೆದು ಎಲ್ಲ ಮನಸ್ಸುಗಳು ಸಂಘಟಿತರಾಗಬೇಕು. ಅಪಾಯ ಸನ್ನಿವೇಶವನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕು ಎಂದು ಸ್ವಾಮೀಜಿ ಹೇಳಿದರು.
ವಿಶೇಷ ಆಹ್ವಾನಿತರಾಗಿ ತುಳುನಾಡ್ದ ಜಾತ್ರೆ ಸಂಚಾಲಕ ಡಾ.ವಸಂತ ಕುಮಾರ್ ಪೆರ್ಲ, ಒಡಿಯೂರು ತುಳುಕೂಟದ ಸ್ಥಾಪಕ ಅಧ್ಯಕ್ಷ ಮಲಾರು ಜಯರಾಮ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ.ಸುರೇಶ್ ರೈ, ಸಂಸ್ಥೆಯ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ವಿವಿಧ ಸಮಿತಿ ಪದಾಧಿಕಾರಿಗಳಾದ ದೇವಿಪ್ರಸಾದ್ ಶೆಟ್ಟಿ, ಕೆ.ಪಿ.ರಘುರಾಮ ಶೆಟ್ಟಿ, ಲಿಂಗಪ್ಪ ಗೌಡ ಪನೆಯಡ್ಕ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮವಿಕಾಸ ಯೋಜನೆ ಬಂಟ್ವಾಳ ತಾ.ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಪ್ರಚಾರ ಸಮಿತಿಯ ಅಜಿತ್‌ನಾಥ್ ಶೆಟ್ಟಿ ಒಡಿಯೂರು, ನಾರಾಯಣ ಶೆಟ್ಟಿ ಸಂಕೊಳಿಗೆ ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು. ಯಶವಂತ ವಿಟ್ಲ ಸ್ವಾಗತಿಸಿದರು. ಸಂತೋಷ್ ಭಂಡಾರಿ ವಂದಿಸಿದರು.

More articles

Latest article