


ಬಂಟ್ವಾಳ, ಮಾ. ೧೫: ಕರಿಯಂಗಳ ಗ್ರಾಮದ ಫಲ್ಗುಣಿ ನದಿತಟದಲ್ಲಿ ಪರವಾನಿಗೆಯಿಲ್ಲದೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆಯೊಂದಕ್ಕೆ ಬಂಟ್ವಾಳ ಎಎಸ್ಪಿ ನೇತೃತ್ವದ ತಂಡ ಶುಕ್ರವಾರ ಮುಂಜಾನೆ ದಾಳಿ ನಡೆಸಿ ವಾಹನ ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್ ಅವರ ನೇತೃತ್ವದ ಈ ದಾಳಿ ನಡೆಸಿದ್ದು, ೧೭೦ ಲೋಡ್ ಮರಳು, ೪.೫೦ ಲಕ್ಷ ರೂ. ಮೌಲ್ಯದ ೩ ನಾಡದೋಣಿ, ೫ ಲಕ್ಷ ರೂ. ಮೌಲ್ಯದ ೧ ಹಿಟಾಚಿ ಸಹಿತ ಅಕ್ರಮ ಮರಳುಗಾರಿಕೆಗೆ ಉಪಯೋಗಿಸುತ್ತಿದ್ದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಕೊಂಡಿರುವ ಸೊತ್ತುಗಳ ಮೌಲ್ಯ ೧೦.೨೬ ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯ ವೇಳೆ ಕಾರ್ಮಿಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಪ್ರಕರಣವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.


