Wednesday, October 18, 2023

ಮಣಿನಾಲ್ಕೂರು ಉದ್ಘಾಟನಾ ಭಾಗ್ಯ ಕಾಣದ ಮಣಿನಾಲ್ಕೂರು ಸರಕಾರಿ ಪಿಯು ಕಟ್ಟಡ! ೩ ವರ್ಷಗಳಿಂದ ಪಾಳು ಬಿದ್ದಿರುವ ನೂತನ ಕಟ್ಟಡ

Must read

ಬಂಟ್ವಾಳ, ಮಾ. ೧೯: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವು ಕಳೆದ ಮೂರು ವರ್ಷಗಳಿಂದ ಉದ್ಘಾಟನೆ ಭಾಗ್ಯ ಕಾಣದೇ ನಿಷ್ಪ್ರಯೋಜಕವಾಗಿದ್ದು, ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.


ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗವಾಗಿರುವ ಮಣಿನಾಲ್ಕೂರಿಗೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣವಾಗಿದ್ದು, ಮೂಲಭೂತ ಸೌಕರ್ಯ ಹಾಗೂ ಇನ್ನಿತರ ಕಾರಣಗಳಿಂದ ನೂತನ ಕಾಲೇಜು ಕಟ್ಟಡ ಉದ್ಘಾಟನೆಗೆ ತೊಡಕು ಉಂಟಾಗಿದೆ. ಸ್ವಂತ ಕಟ್ಟಡ ನಿರ್ಮಾಣಗೊಂಡರೂ ವಿದ್ಯಾರ್ಥಿಗಳಿಗೆ ತೆರಳುವ ಭಾಗ್ಯ ಕೂಡಿ ಬಂದಿಲ್ಲ. ಈ ನೂತನ ಕಟ್ಟಡದ ಸುತ್ತಲೂ ಗಿಡ, ಪೊದೆಗಳಿ ಬೆಳೆದಿದ್ದು, ಕಿಟಕಿಗಳು ತುಕ್ಕು ಹಿಡಿದಿದೆ. ಕೆಲವೊಂದು ಕಿಟಕಿಯ ಗಾಜುಗಳಿಗೆ ಹಾನಿಯಾಗಿದ್ದು, ನೂತನ ಕಟ್ಟಡ ಸಂಪೂರ್ಣ ಚಿತ್ರವು ಅವ್ಯವಸ್ಥೆಯಿಂದ ಕೂಡಿದೆ.
ಪ್ರೌಢಶಾಲೆಯಲ್ಲಿ ಕಾಲೇಜು ತರಗತಿ:
ಮಣಿನಾಲ್ಕೂರು ಗ್ರಾಮದಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಸರಕಾರಿ ಪ್ರೌಢಶಾಲೆಯು ಕಾರ್ಯಾಚರಿಸುತ್ತಿದೆ. ಇಲ್ಲಿನ ಸುತ್ತಮುತ್ತಲ ಗ್ರಾಮದ ಮಕ್ಕಳು ಇಲ್ಲಿಗೆ ಬಂದು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಇಲ್ಲಿಂದ ಬಂಟ್ವಾಳ ಪಟ್ಟಣಕ್ಕೆ ಸುಮಾರು ೨೦ ಕಿ.ಮೀ ದೂರವಿರುವ ಹಿನ್ನೆಲೆಯಲ್ಲಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜು ವಿದ್ಯಾಭ್ಯಾಸದಿಂದ ವಂಚಿರಾಗಬಾರದು ಎನ್ನುವ ಉದ್ದೇಶದಿಂದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಬೇಡಿಕೆಯಡಲಾಗಿತ್ತು. ವಿದ್ಯಾರ್ಥಿಗಳ ಅಂಕಿಅಂಶಗಳನ್ನು ಮನಗಂಡ ಸರಕಾರ ೨೫ ವರ್ಷಗಳ ಹಿಂದೆಯೇ ಪದವಿ ಪೂರ್ವ ಕಾಲೇಜನ್ನು ಮಂಜೂರು ಮಾಡಿತ್ತು.
ತಕ್ಷಣಕ್ಕೆ ಕಾಲೇಜು ತರಗತಿಗಳನ್ನು ನಡೆಸಲು ಸೂಕ್ತ ಕಟ್ಟಡಗಳು ಲಭ್ಯವಾಗದ ಕಾರಣ ಸ್ಥಳೀಯ ಸರಕಾರಿ ಪ್ರೌಢಶಾಲೆಯ ಕೊಠಡಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಕಾಲೇಜು ತರಗತಿಗಳನ್ನು ಆರಂಭಿಸಲಾಯಿತು. ಕಾಲೇಜಿಗೆ ಇಂದು ಕಟ್ಟಡ ನಿರ್ಮಾಣಗೊಳ್ಳುತ್ತದೆ, ನಾಳೆ ಕಟ್ಟಡ ನಿರ್ಮಾಣಗೊಳ್ಳುತ್ತದೆ ಎಂದು ಇಲ್ಲಿ ವಿದ್ಯಾರ್ಥಿಗಳು ಕಾದದ್ದೆ ಬಂತು, ಹಲವು ವರ್ಷಗಳ ಕಾಲ ಕಾಲೇಜಿಗೆ ಕಟ್ಟಡ ಮರೀಚಿಕೆಯಾಗಿಯೇ ಉಳಿಯಿತು. ಕಲಾ ವಿಭಾಗ ಮಾತ್ರವಿದ್ದ ಈ ಕಾಲೇಜಿಗೆ ವಾಣಿಜ್ಯ ವಿಭಾಗವೂ ಮಂಜೂರಾಯಿತು. ಆದರೂ ಹೊಸ ಕಟ್ಟಡದ ಭಾಗ್ಯ ಸಿಗಲಿಲ್ಲ. ಹೈಸ್ಕೂಲ್‌ನ ಆಶ್ರಯದಲ್ಲೇ ಕಾಲೇಜು ಮುಂದುವರೆದುಕೊಂಡು ಬಂತು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ರಮಾನಾಥ ರೈಯವರ ಅಧಿಕಾರವಧಿಯಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ೫೫ ಲಕ್ಷ ರುಪಾಯಿ ಅನುದಾನ ಬಿಡುಗಡೆಯಾಗಿ ಮೂರು ಕೊಠಡಿಗಳ ಹೊಸ ಕಟ್ಟಡವೂ ನಿರ್ಮಾಣವಾಯಿತು. ಈ ಹಿಂದೆ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದ ಜೆಓಸಿ ವಿಭಾಗದ ಎರಡು ಕೋಣೆಗಳನ್ನು ಸೇರಿಸಿಕೊಂಡು ಒಟ್ಟು ಐದು ಕೊಠಡಿಗಳ ಕಾಲೇಜು ಕಟ್ಟಡ ಸಿದ್ಧಗೊಂಡಿತು.

ಸರಕಾರದ ಅನುದಾನ ಮಂಜೂರಾದರೂ ಶಿಕ್ಷಣ ಇಲಾಖೆಯು ನೂತನ ಕಾಲೇಜಿನ ಕಟ್ಟಡವನ್ನು ಅಭಿವೃದ್ಧಿ ಪಡಿಸುವುದನ್ನೇ ಮರೆತೇ ಬಿಟ್ಟಿದೆ. ಈ ಅವ್ಯವಸ್ಥೆಯ ಬಗ್ಗೆ ಹಲವು ಭಾರೀ ಸಂಬಂಧಪಟ್ಟವರ ಗಮನಕ್ಕೂ ತರಲಾಗಿದೆ. ಆದರೆ, ಯಾವುದೇ ಪ್ರಯೋಜನ ವಾಗಿಲ್ಲ. ಇನ್ನು ಮುಂದಾದರೂ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಿಕ್ಷಣಾಭಿಮಾನಿಗಳು ಆಗ್ರಹಿಸಿದ್ದಾರೆ.ಈ ಮೊದಲು ಪದವಿಪೂರ್ವ ವಿದ್ಯಾರ್ಥಿಗಳ ತರಗತಿಗಳು ಪ್ರೌಢಶಾಲಾ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದವು. ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಟ್ಟಡ ಅಗತ್ಯತೆ ಇದ್ದ ಹಿನ್ನೆಲೆಯಲ್ಲಿ ಸರಕಾರಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಪ್ರಸ್ತಾವ ಮಾಡಿದ್ದು, ಕಟ್ಟಡಕ್ಕೆ ಮಂಜೂರಾತಿ ಸಿಕ್ಕಿ ಕಾಮಗಾರಿಯು ನಡೆದಿದೆ. ಈ ನೂತನ ಕಟ್ಟಡ ಆದಷ್ಟು ಬೇಗ ಉದ್ಘಾಟನೆಗೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರಿಯಾಗಬೇಕಿದೆ.
ಸ್ಮಿತಾ, ಪ್ರಬಾರ ಪ್ರಾಂಶುಪಾಲರು
ಮಣಿನಾಲ್ಕೂರು ಸರಕಾರಿ ಪದವಿ ಪೂರ್ವ ಕಾಲೇಜು

ಪಿಯು ಕಟ್ಟಡ ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಹಿತ ಇತರ ಕಾಲೇಜಿಗೆ ಬೇಕಾಗುವಂತಹ ಇನ್ನಿತರ ಸೌಕರ್ಯಗಳನ್ನು ಕಲ್ಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಮನ ಹರಿಸಿ ನೂತನವಾಗಿ ನಿರ್ಮಾಣಗೊಂಡಿರುವ ಸ್ವಂತ ಕಟ್ಟಡಕ್ಕೆ ಇಲ್ಲಿನ ಕಾಲೇಜನ್ನು ಶೀಘ್ರ ವರ್ಗಾಯಿಸಿ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.
ಫಾರೂಕ್, ಮಣಿನಾಲ್ಕೂರು ಗ್ರಾಪಂ ಸದಸ್ಯ

More articles

Latest article