Thursday, September 28, 2023

ಮಂಚಿ ಜಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ

Must read

ಬಂಟ್ವಾಳ: ತಾಲೂಕಿನ ಮಂಚಿ-ಕೊಳ್ನಾಡು ಶ್ರೀಗೋಪಾಲಕೃಷ್ಣ ದೇವಸ್ಥಾನದ ಪ್ರಥಮ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ “ಮಂಚಿ ಜಾತ್ರೆ” ಯ ಅಮಂತ್ರಣ ಪತ್ರಿಕೆಯ ಬಿಡುಗಡೆಯ ಸರಳ ಸಮಾರಂಭ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಸಂಪೂರ್ಣ ಅಜೀರ್ಣಾವಸ್ಥೆಯಲ್ಲಿದ್ದ ಶ್ರೀ ಕ್ಷೇತ್ರವನ್ನು ಕಳೆದ ವರ್ಷ ಪುನರ್ ನವೀಕರಿಸಿ ಪುನರ್ ಅಷ್ಠಬಂಧ, ಬ್ರಹ್ಮಕಲಶವನ್ನು ಅದ್ದೂರಿಯಾಗಿ ನೆರವೇರಿಸಲಾಗಿದ್ದು, ಇದರ ಪ್ರಥಮ ಪ್ರತಿಷ್ಠಾ ವರ್ಧಂತಿ ಶ್ರೀ ಮಂಕಡೆ ರಾಮಣ್ಣಾಚಾರ್ಯರ  ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಎ.28-29 ರಂದು ನಡೆಯಲಿದೆ ಎಂದರು. ಜಾತ್ರೆಯ ಪ್ರಯುಕ್ತ ಶ್ರೀ ಗಣಪತಿಹೋಮ, ಶ್ರೀ ರಂಗಪೂಜೆ, ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ, ಶ್ರೀ ದುರ್ಗಾನಮಸ್ಕಾರ, ಶತರುದ್ರಾಭಿಷೇಕ, ಆರ್ಧ ಏಕಾಹ ಭಜನೆ, ಬಲಿವಾಡು ಸೇವೆ, ಸುಡುಮದ್ದು ಪ್ರದರ್ಶನ, ಶ್ರೀ ದೇವರ ಬಲಿಹೊರಟು ಉತ್ಸವ, ದೈವಗಳ ನೇಮ ನಡೆಯಲಿದೆ. ಹಾಗೆಯೇ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆಯು ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾಲಮಿತಿ ಯಕ್ಷಗಾನ ಬಯಲಾಟವನ್ನು ಆಯೋಜಿಸಲಾಗಿದೆ ಎಂದರು. ಈ ಸಂದರ್ಭ ಸಮಿತಿ ಸದಸ್ಯರಾದ ಸೀತಾರಾಮ ಶೆಟ್ಟಿ, ವಿಠಲಪ್ರಭು, ವಕೀಲ ರವೀಂದ್ರ ಕುಕ್ಕಾಜೆ ಅವರು ಉಪಸ್ಥಿತರಿದ್ದರು.

More articles

Latest article