ಬಂಟ್ವಾಳ: ಕೇಂದ್ರ ಲೋಕಸೇವಾ ಆಯೋಗದ 2019ರ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಹುದ್ದೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಶೀಘ್ರವಾಗಿ ಒಬಿಸಿ/ಇಡ್ಲ್ಯೂಎಸ್ ಪ್ರಮಾಣಪತ್ರ ಒದಗಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿಯು ಬುಧವಾರ ಬಂಟ್ವಾಳ ತಹಶೀಲ್ದಾರ್ ಅವರಲ್ಲಿ ಮನವಿ ಮೂಲಕ ಒತ್ತಾಯಿಸಿತು.
ಕೇಂದ್ರ ಲೋಕಸೇವಾ ಆಯೋಗವು 2019ರ ಸಾಲಿನ ನಾಗರಿಕ ಸೇವಾ ಹುದ್ದೆಗಳಾದ ಐಎಎಸ್, ಐಪಿಎಸ್, ಐಎಫ್‌ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವಾಗ ಆಕಾಂಕ್ಷಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಜೊತೆಗೆ ಒಬಿಸಿ/ಇಡ್ಲ್ಯೂಎಸ್ ಪ್ರಮಾಣ ಪತ್ರಗಳನ್ನು ಕೂಡ ಸಲ್ಲಿಸಬೇಕಾಗಿದ್ದು, ಬಹಳಷ್ಟು ಮಂದಿ ಆಕಾಂಕ್ಷಿಗಳು ರಾಜ್ಯ ಸರಕಾರ ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಒಬಿಸಿ/ಇಡ್ಲ್ಯೂಎಸ್ ಪ್ರಮಾಣ ಪತ್ರಗಳೆಂದು ಭಾವಿಸಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಮಾ. 18 ಕೊನೆಯ ದಿನಾಂಕವಾಗಿರುವುದರಿಂದ ಒಬಿಸಿ/ಇಡ್ಲ್ಯೂಎಸ್ ಪ್ರಮಾಣ ಪತ್ರಗಳು ನಿಗದಿ ಸಮಯಕ್ಕೆ ಸರಿಯಾಗಿ ಅಭ್ಯರ್ಥಿಗಳ ಕೈ ಸೇರುವ ಸಾಧ್ಯತೆ ಕಡಿಮೆಯಿದೆ. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಒಂದು ವಾರದೊಳಗೆ ಒಬಿಸಿ/ಇಡ್ಲ್ಯೂಎಸ್ ಪ್ರಮಾಣ ಪತ್ರಗಳನ್ನು ದೊರೆಯುವಂತೆ ಮನವಿ ಮೂಲಕ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಕ್ಷೇತ್ರಾಧ್ಯಕ್ಷ ಯೂಸುಫ್ ಆಲಡ್ಕ, ಪುರಸಭಾ ಸದಸ್ಯ ಮುನೀಶ್ ಅಲಿ, ಎಸ್ಡಿಪಿಐ ಸಮಿತಿ ಸದಸ್ಯ ಮಜೀದ್ ನಂದಾವರ, ಬಶೀರ್ ಪಲ್ಲ ಹಾಜರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here