ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಭಾನುವಾರ ಮೂಡಬಿದ್ರೆ ಜೈನಮಠದಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.
ಮೂಡಬಿದ್ರೆಯಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರನ್ನು ಗೌರವಿಸಿದ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಗವಾನ್ ಬಾಹುಬಲಿಯಆದರ್ಶತತ್ವಗಳಾದ ಅಹಿಂಸೆ, ತ್ಯಾಗ, ಸಂಯಮ, ತಾಳ್ಮೆ ನಮ್ಮ ಬದುಕಿಗೆ ಪ್ರೇರಕವಾಗಲಿ. ಎಲ್ಲೆಲ್ಲೂ ಶಾಂತಿ, ಸಾಮರಸ್ಯ, ಸೌಹಾರ್ದತೆ ಮೂಡಿ ಬರಲಿ ಎಂದು ಹಾರೈಸಿದರು.
ಬಾಹುಬಲಿಯ ಪಂಚಮಹಾವೈಭವ ಹಾಗೂ ಮಹಾಮಸ್ತಕಾಭಿಷೇಕವನ್ನು ನಾವೆಲ್ಲ ನೋಡಿ, ಕಣ್ತುಂಬಿಕೊಂಡು ಧನ್ಯತೆಯನ್ನು ಪಡೆದಿದ್ದೇವೆ. ಧರ್ಮಸ್ಥಳದ ಎಲ್ಲಾ ಭಕ್ತರು, ಊರಿನವರು, ಸಿಬ್ಬಂದಿ ಹಾಗೂ ವಿವಿಧ ಸಮಿತಿಯವರು ಶ್ರದ್ಧಾ-ಭಕ್ತಿಯಿಂದ ಮಾಡಿದ ಸಂಘಟಿತ ಪ್ರಯತ್ನದೊಂದಿಗೆತಮ್ಮಕರ್ತವ್ಯ ನಿರ್ವಹಣೆ ಮಾಡಿರುವುದರಿಂದ ಮಹಾಮಸ್ತಕಾಭಿಷೇಕ ಅತ್ಯಂತ ಯಶಸ್ವಿಯಾಗಿ ನಡೆಯಿತುಎಂದು ಮೆಚ್ಚುಗೆ ವ್ಯಕ್ತಪಡಿಸಿದರು.



ಭಾನುವಾರ ನಡೆದ ಮಹಾಮಸ್ತಕಾಭಿಷೇಕದಲ್ಲಿ ದೆಹಲಿ, ರಾಜಸ್ಥಾನ, ಬಿಹಾರ, ಕೇರಳ, ತಮಿಳುನಾಡು ಮೊದಲಾದ ವಿವಿಧ ರಾಜ್ಯಗಳ ಭಕ್ತರು ಭಾಗವಹಿದ್ದು ರಾಷ್ಟ್ರಮಟ್ಟದ ಸಮಾರಂಭವಾಗಿ ಮೂಡಿ ಬಂತು.
ಮಸ್ತಕಾಭಿಷೇಕದ ಯಶಸ್ವಿಗೆ ವಿಶೇಷವಾಗಿ ಶ್ರಮಿಸಿದ ಹೇಮಾವತಿ ವಿ. ಹೆಗ್ಗಡೆ, ಪ್ರಧಾನ ಸಂಚಾಲಕ ಡಿ. ಸುರೇಂದ್ರಕುಮಾರ್, ಸಂಚಾಲಕ ಡಿ. ಹರ್ಷೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಕಾರ್ಯದರ್ಶಿ ಕೆ. ಮಹಾವೀರಅಜ್ರಿ ಮತ್ತು ಎ.ವಿ. ಶೆಟ್ಟಿ ಅವರ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿದರು.
ಅಟ್ಟಳಿಗೆಯನ್ನು ವಿಶೇಷ ವಿನ್ಯಾಸದಿಂದ ರೂಪಿಸಿದ ಮಂಗಳೂರಿನ ಅನಿಲ್ ಹೆಗ್ಡೆ ಮತ್ತು ಸನತ್ ಕುಮಾರ್ ಹಾಗೂ ಕಾರ್ಯಗತಗೊಳಿಸಿದ ಬಂಟ್ವಾಳದ ಮಾಣಿಯ ಪದ್ಮಪ್ರಸಾದ್ ಮತ್ತು ಮಹಾವೀರ ಪ್ರಸಾದ್ ಅವರನ್ನು ಹೆಗ್ಗಡೆಯವರು ಸನ್ಮಾನಿಸಿದರು.
ರಾಜಸ್ಥಾನದತಿಜಾರಜೈನ ಮಠದ ಪೂಜ್ಯ ಸೌರಭಸೇನ ಭಟ್ಟಾರಕ ಸ್ವಾಮೀಜಿ ಮತ್ತು ಲಕ್ಕವಳ್ಳಿ ಜೈನಮಠದ ವೃಷಭ ಸೇನ ಭಟ್ಟಾರಕ ಸ್ವಾಮೀಜಿ ಆಶೀವರ್ಚನ ನೀಡಿ ಹೆಗ್ಗಡೆಯವರ ಧರ್ಮಪ್ರಭಾವನಾಕಾರ್ಯ ಹಾಗೂ ಬಹುಮುಖಿ ಸಮಾಜ ಸೇವೆಯನ್ನು ಶ್ಲಾಘಿಸಿದರು.
ಮೂಡಬಿದ್ರೆಜೈನ ಮಠದಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಧರ್ಮಸ್ಥಳದಲ್ಲಿ ನಡೆದ ನಾಲ್ಕು ಮಹಾಮಸ್ತಕಾಭಿಷೇಕಗಳಲ್ಲಿಯೂ ಪ್ರಥಮ ಕಲಶ ಪಡೆಯುವ ಸೌಭಾಗ್ಯ ಮೂಡಬಿದ್ರೆ ಜೈನ ಮಠಕ್ಕೆದೊರಕಿದೆ. ಧರ್ಮಸ್ಥಳಕ್ಕೂ ಮೂಡಬಿದ್ರೆಗೂ ಅವಿನಾಭಾವ ಸಂಬಂಧವಿದೆ. ಧರ್ಮಸ್ಥಳ ಭಕ್ತಿ ಮತ್ತು ಮುಕ್ತಿಯಕ್ಷೇತ್ರವಾಗಿದೆ. ಅರಮನೆ, ಗುರುಮನೆ ಮತ್ತು ನೆರೆಮನೆಯವರೆಲ್ಲ ಮಸ್ತಕಾಭಿಷೇಕದಲ್ಲಿ ಭಾಗವಹಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆಎಂದು ಹೇಳಿದರು.
1008 ಕಲಶಗಳಿಂದ ಮಹಾಮಸ್ತಕಾಭಿಷೇಕದ ಬಳಿಕ ಮಹಾಮಂಗಳಾರತಿ, ಪುಷ್ಪವೃಷ್ಟಿ ಮತ್ತು ಶಾಂತಿ ಮಂತ್ರ ಪಠಣದೊಂದಿಗೆ ಮಸ್ತಕಾಭಿಷೇಕ ಸಮಾಪನಗೊಂಡಿತು.
ಸಂಜೆ ನಾಲ್ಕು ಗಂಟೆಗೆ ಬಿಂಬಶುದ್ಧಿ ಮತ್ತು ಓಕುಳಿ ಕಾರ್ಯಕ್ರಮದೊಂದಿಗೆ ಈ ಬಾರಿಯ ಮಹಾಮಸ್ತಕಾಭಿಷೇಕ ಮುಕ್ತಾಯಗೊಂಡಿದೆ.
ಸಂಪ್ರದಾಯದಂತೆಇನ್ನು 12 ವರ್ಷಗಳ ಬಳಿಕ ಮಹಾಮಸ್ತಕಾಭಿಷೇಕ ನಡೆಯಲಿದೆ.