ರಾಜನು ಒಂದು ಮಂಗವ ಸಾಕಿದ
ಸಲುಗೆಯಿಂದಿದ್ದನು ಅದರ ಜೊತೆ
ಸಿಂಹಾಸನದಲಿ ಕುಳಿತರೂ ಅವನು
ಅದುವೂ ಕುಳಿತಿತು ಕೇಳಿ ಕತೆ



ದಂಡಿಗೆ ಹೊರಟರೆ ತಾನೂ ಹೊರಟಿತು
ರಾಜನ ಪಡಿನೆಳಲಿನ ಹಾಗೆ
ಒಂದು ದಿನವದು ರಾಜನು ಮಲಗಿದ
ತಾಳದಾಯಿತು ಬಿಸಿಲ ಧಗೆ
ಬೆವರಿದ ರಾಜನ ನೋಡಿತು ಮಂಗವು
ಕೂಡಲೇ ತಂದಿತು ಬೀಸಣಿಕೆ
ಮುಖದ ಮೇಲಿನ ನೊಣ ಓಡಿಸಲು
ಮಾಡಿತು ಒಂದು ಹವಣಿಕೆ
ಬೀಸಣಿಕೆಯನು ಬೀಸಿದ ಭರಕೆ
ನೊಣವದು ಹಾರಿತು ಒಂದು ಕಡೆ
ಬಿಡದೇ ಬಂದಿತು ಪದೆ ಪದೆ ಕುಳಿತಿತು
ಮಂಗನು ತೋರಿತು ಜಾಣ ನಡೆ
ರಾಜನ ಪಕ್ಕದ ಖಡ್ಗವ ಹಿಡಿದು
ನೊಣಕೆ ಕೊಟ್ಟಿತು ಎಚ್ಚರಿಕೆ
ಕತ್ತರಿಸದೆ ಬಿಡೆ ನಿನ್ನನು ಈ ಸಲ
ಬರೆದುಕೊ ಬೇಕಿರೆ ಮುಚ್ಚಳಿಕೆ
ಬುರ್ರನೆ ಹಾರಿ ಬಂದಿತು ನೊಣವು
ಕುಳಿತಿತು ರಾಜನ ಕತ್ತಿನಲಿ
‘ಕಚ್ಚನೆ’ಕಡಿಯಿತು ಮಂಗವು ಕೂಡಲೆ
ರೋಷಾವೇಶದ ಮತ್ತಿನಲಿ
ನೊಣವೂ ಹಾರಿತು ಪ್ರಾಣವೂ ಹೋಯಿತು
ರುಂಡವು ಬಿದ್ದಿತು ಒಂದು ಕಡೆ
ಮೂರ್ಖ ಮಂಗನ ಸ್ನೇಹವ ಮಾಡಿ
ರಾಜನು ತಪ್ಪಿದ ಜಾಣ ನಡೆ
ಸ್ನೇಹವ ಮಾಡುವ ಮೊದಲೇ ಎಲ್ಲರೂ
ಯೋಚಿಸುವುದನು ಮರೆಯದಿರಿ
ಘಟಿಸುವ ಮುಂಚೆಯೇ ಎಚ್ಚರವಿರುವ
ನೈಜ ಬುದ್ಧಿಯನು ತೊರೆಯದಿರಿ
#ನೀ.ಶ್ರೀಶೈಲ ಹುಲ್ಲೂರು