ಪಕ್ಕದ ರಾಜನ ದಾಳಿಗೆ ನಲುಗಿ
ತಡವರಿಸಿದನು ರವಿತೇಜ
ದುಷ್ಟ ರಾಜನ ಉಪಟಳ ಸಹಿಸದೆ
ಕಾಡಲಿ ಅವಿತನು ಮಹಾರಾಜ



ಸೈನ್ಯವು ಸಣ್ಣದು ರಾಜ್ಯವು ಸಣ್ಣದು
ಸೋತು ಸೇರಿದ ಗವಿಯನ್ನು
ಹೇಗಾದರು ಸರಿ ಸೋಲಿಸಬೇಕು
ಕೊರೆಯಿತು ಚಿಂತೆಯು ತಲೆಯನ್ನು
ಇಂತಿರೆ ಗವಿಯಲಿ ಜೇಡವು ಒಂದು
ಬಲೆಯನು ಹೆಣೆಯುತ ನಡೆದಿತ್ತು
ಬಲೆಯಾ ಎಳೆಯನು ಏರುತ ಜಾರುತ
ಸರ್ರನೇ ಕೆಳಗೇ ಬರುತಿತ್ತು
ಛಲವನು ಬಿಡದೇ ಹೊರಟಿತು ಜೇಡವು
ತಲುಪಿತು ತನ್ನಯ ಗುರಿಯನ್ನು
ನೋಡುತ ಕುಳಿತಿಹ ರಾಜನು ಅಂದನು
ಪಡೆದೇ ಪಡೆಯುವೆ ಜಯವನ್ನು
ಸಣ್ಣಯ ಹುಳುವಿದು ಬಿದ್ದರೂ ಏರಿತು
ಸೋತ ನನಗಿದುವೆ ಹೊಸ ಪಾಠ
ಏನಾದರು ಸರಿ ಸೈನ್ಯ ಸಂಘಟಿಸಿ
ಬಿಡದೆ ಸಾಧಿಸುವೆ ನನ್ನ ಹಠ
ಪಕ್ಕದಲಿರುವ ರಾಜರ ಸೇರಿಸಿ
ಕಟ್ಟಿದನೊಂದು ದೊಡ್ಡ ಪಡೆ
ದುಷ್ಟ ರಾಜನ ಸೋಲಿಸಿ ಹಿಗ್ಗಿದ
ವಿಜಯ ದುಂದುಭಿ ಎಲ್ಲ ಕಡೆ
ವಿಫಲರಾದರೂ ಬಿಡದಿರಿ ಮಕ್ಕಳೆ
ನೋಟವು ಇರಲಿ ಗೆಲುವಿನೆಡೆ
ಸೋಲಿಗೆ ತಪ್ಪದೆ ಹೊಡೆಯಿರಿ ಸೆಡ್ಡು
ನುಗ್ಗಿರಿ ಸಾಗಿಸಿ ನಲಿವಿನೆಡೆ
#ನೀ.ಶ್ರೀಶೈಲ ಹುಲ್ಲೂರು