


ಆಮೆ ಮೊಲಗಳೆರಡು ಸೇರಿ
ಊರ ಬದಿಯಲೊಂದು ಸಾರಿ
ಭೇಟಿಯಾಗಿ ಗೆಳೆತನಕೆ
ಒಪ್ಪಿಕೊಂಡವು
ಪಂದ್ಯ ಕಟ್ಟಿ ಖುಷಿಯಪಟ್ಟು
ನಕ್ಕು ನಲಿದು ಸಮಯ ಕಳೆದು
ಮನಸು ಹಗುರಗೊಳಿಸೊ ಆಟ
ಇಟ್ಟುಕೊಂಡವು
ರಸ್ತೆಗುಂಟ ಹೋಗಿ ಮೊದಲು
ಗೆರೆಯ ತಲುಪಿದವರೆ ವಿಜಯಿ
ಎಂದುಕೊಂಡ ಆಮೆ ಮೊಲವು
ಹೊರಟು ನಿಂತವು
ಓಟ ಕಿತ್ತ ಮೊಲವು ಕೊಂಚ
ದೂರ ಸಾಗಿ ಗಿಡದ ನೆರಳ
ಕೆಳಗೆ ಕುಳಿತು ಆಮೆಯೋಟ
ಕಂಡು ನಕ್ಕಿತು
ಒಂದು ಸಣ್ಣ ನಿದ್ದೆ ತಾಗಿ
ಮೊಲವು ಅಲ್ಲೆ ತಲೆಯದೂಗಿ
ತಣ್ಣನೆಯ ನೆರಳಿನಲ್ಲಿ
ಮಲಗಿಬಿಟ್ಟಿತು
ಆಮೆ ಸಾವಧಾನದಿಂದ
ತಾನು ಮೊದಲು ಗುರಿಯ ತಲುಪಿ
ಹರುಷದಿಂದ ಕೇಕೆ ಹಾಕಿ
ಕುಣಿದು ಬಿಟ್ಟಿತು
ಆಗ ಎದ್ದ ಮೊಲವು ತಾನು
ಓಡಿ ದಣಿದು ಬಂದರೂನು
ಆಮೆ ವಿಜಯ ತಡೆಯದೆಯೆ
ಬಿಕ್ಕಿ ಅತ್ತಿತು
ಸಮಯವರಿತು ನಡೆಯುವವನು
ಗೆಲುವನೆಂದು ಬಿಡನು ಎನುವ
ಗಾದೆ ಮರೆತ ಮೊಲದ ಎದುರೆ
ಗೆಲುವು ಸತ್ತಿತು
#ನೀ.ಶ್ರೀಶೈಲ ಹುಲ್ಲೂರು


