ಟೋಪಿಯ ಮಾರಲು ಬುಟ್ಟಿಯ ಹೊತ್ತು
ಹನುಮನು ಹೊರಟನು ಪಟ್ಟಣಕೆ
ಬಿರು ಬಿಸಿಲಿಗೆ ಬಾಯಾರಿತು ಎಂದು
ನಡೆದನು ಕೆರೆಯ ಅಂಗಳಕೆ



ನೀರನು ಕುಡಿದು ಮರದಡಿ ಕುಳಿತು
ವಿರಮಿಸಲು ಮೈಯೊಡ್ಡಿದನು
ತಣ್ಣೆಳಲಿಗೆ ತಂಗಾಳಿಗೆ ಕರಗಲು
ಸಣ್ಣಗೆ ನಿದ್ದೆಗೆ ಜಾರಿದನು
ಗಿಡದಲಿ ಕುಳಿತ ಮಂಗವು ಕೆಳಗೆ
ದಡ ದಡ ಇಳಿದು ಬಂದಿತು
ಬುಟ್ಟಿಯ ಎತ್ತಿ ಟೋಪಿಯನೆಲ್ಲ
ಮಂಗನ ಹಿಂಡಿಗೆ ಹಾಕಿತು
ತುಸು ಸಮಯದಲಿ ನಿದ್ದೆಯ ಮುಗಿಸಿ
ಹನುಮನು ಎದ್ದನು ದಡಬಡಿಸಿ
ಬುಟ್ಟಿಯೂ ಇಲ್ಲ ಟೋಪಿಗಳಿಲ್ಲ
ಗಾಬರಿಯಾದನು ತಳಮಳಿಸಿ
ಆ ಕಡೆ ಈ ಕಡೆ ಹುಡುಕಿದ ಅವನು
ಗಿಡದ ಮೇಲೆಯೂ ನೋಡಿದನು
ಟೋಪಿ ಹಾಕಿದ ಮಂಗನ ಹಿಂಡಿಗೆ
ಮನದಲೆ ಉಪಾಯ ಮಾಡಿದನು
ಟೋಪಿಯ ನೆಲಕೆ ಎಸೆದಾ ಹನುಮನ
ಮಂಗಗಳೆಲ್ಲವೂ ನೋಡಿದವು
ತಮ್ಮ ಟೋಪಿಯನೂ ನೆಲಕೇ ಎಸೆದು
ಅವನ ಹಾಗೆಯೇ ಮಾಡಿದವು
ಖುಷಿಯಲಿ ಹನುಮನು ಟೋಪಿಯ ಕೂಡಿಸಿ
ಮತ್ತೆ ಪಟ್ಟಣಕೆ ಸಾಗಿದನು
ಮಾರಿದ ಹಣವನು ಜೇಬಿಗೆ ಇಳಿಸುತ
ತನ್ನ ಬುದ್ಧಿಗೇ ಬಾಗಿದನು
#ನೀ.ಶ್ರೀಶೈಲ ಹುಲ್ಲೂರು